Contact Angle Touch Studio for your Blog Design. Visit Site
Posts

ಸುಬ್ಬನ ಮಬ್ಬು....

ಇಬ್ಬನಿಯ ಮಬ್ಬಿನಲಿ ಸುಬ್ಬ ಹೊರಟನು ಯಾನ 

ಇಬ್ಬದಿಯ ಕಬ್ಬಿನ ಜಲ್ಲೆ ನುಸುಳಿನ ಮಧ್ಯೆ ॥


ಹೊತ್ತು ಅಂದಾಜು ಕ್ಷಣ ಕೋಳಿ ಕೂಗಲು ಇನ್ನೂ 

ಬಿತ್ತರದಾಗಸದಿ ನಕ್ಷತ್ರ ಹೊಳೆಯುತಿದ್ದವು ಇನ್ನೂ

ಮತ್ತದೇ ಸದ್ದು 'ಜುಳು-ಜುಳು' ಗದ್ದೆಗಿಳಿಯುವ ನೀರು

ಸುತ್ತಲಿನ ಅಪಾಯಗಳ ತಿಳಿದು ಅರುಹುವವರ್ಯಾರು? ||೧||


ಸಲಹಿ ಸಾಕಿದ ಬಂಧು ಬೆಳೆಸಿ ತಿಳಿಸಿದ ಜನರು,

ಹೊಲ-ಗದ್ದೆಯ ಬೇಲಿ ದಾಟಿ ಹೋಗದಿರೆಂದರು.

ಸುಲಭವಲ್ಲೆಂದೆನುತ ವಿದ್ಯೆ ಬೇಡೆಂದವರು,

ಛಲದ ದೃಢ ನಿಶ್ಚಯಕ್ಕೆ ಬೆಂಬಲಿಸುವವರ್ಯಾರು? ||೨||


ಸಣ್ಣ ದಿಂದಲೇ ಸುಬ್ಬ ಚುರುಕು ಬುದ್ದಿಯ ಹುಡುಗ

ಕಣ್ಣು ಹಾಯಿಸಿದರಲ್ಲಿ ಲಕ್ಷ್ಯ ಸಾಧಿಪ ಗಿಡುಗ,

ಸುಣ್ಣ ಬಣ್ಣಕೆ ವೈರಿ ಇವನ ಕಾಯದ ರಂಗು,

ಮಣ್ಣು ಬಿಡದೇಕೆ ಇವನ ಮೀರಿಸುವಲ್ಲಿ ಕೊರಗು? ||೩||


ತಂದೆ-ತಾಯಿಗೆ ಆನೆ ಸುಖನಿದ್ರೆ ಮೆದ್ದು ಮುದ್ದೆ

ಮುಂದೆ ಬರುವಾಸೆ ಅವನಿಗೆ, ನಿರ್ಲಕ್ಷಿಸುತ ನಿದ್ದೆ,

ಮಂದಮತಿಯರ ಬಿಟ್ಟು ಜಗವ ತಿಳಿಯುವ ಆಸೆ,

ನಿಂದು ಕಿವಿಮಾತು ಕೇಳ್ವ ಸುಬ್ಬನಿಗೆ ಇದು ಬರೀ ಕನಸೇ!||೪||


ಹೊಸ ಸೂರ್ಯೋದಯಕಾಗಿ ತವಕ ನಾಡಿ ಮಿಡಿತದಲ್ಲಿ 

ಹೊಸ ಭಾಷೆ ಬರೆಯಬೇಕೆಂಬ ತುಡಿತ ಮೈ ಮನದಲ್ಲಿ 

ಹೊಸಕಿಹಾಕುವ ಕ್ರೋಧ, ಹಳ್ಳಿ ಗುಗ್ಗಿನ ಬಿರುದು,

ಹಸನಾದ ಬದುಕಿನ್ನು ತೃಪ್ತಿ ಸಾಗರದಲ್ಲಿ ಬಿಂದು ||೫||

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

1 comment

  1. ಅಭಿಪ್ರಾಯ ತಿಳಿಸಿ ಹೋಗಿ....
© ರಸ ಮಥನ. All rights reserved. Distributed by ASThemesWorld