Contact Angle Touch Studio for your Blog Design. Visit Site

ಅದೊಂದು ಜೋಡಿ...


 ನಿನ್ನೆ ನಮ್ಮ ಮನೆಗೆ ಬಾಲಣ್ಣ ಮತ್ತು ಅವರ ಹೆಂಡತಿ ಮಧ್ಯಾಹ್ನದ ಹೊತ್ತಿಗೆ ಬಂದರು. ನಿನ್ನೆ ಭಾನುವಾರ ಆದಕಾರಣ ಅಪ್ಪ ಮಧ್ಯಾಹ್ನವೇ ಅಂಗಡಿ ಬಂದ್ ಮಾಡಿ ಮನೆಗೆ ಬಂದಿದ್ದರು.  ನಮ್ಮ ಮನೆಯ ಜಗಲಿಯಲ್ಲಿರುವ ಕಬ್ಬಿಣದ ಸೋಫಾದಲ್ಲಿ, ಎರಡು ಕಡೆ ಮುಖ ಮಾಡಿ  ಕುಳಿತ ಅವರಿಬ್ಬರನ್ನು  ಒಂದೇ ಫ್ರೇಮ್‌ನಲ್ಲಿ ಬರುವ ಹಾಗೆ ಈ ಮೇಲಿನಂತೆ ಮೊಬೈಲ್‌ನಲ್ಲಿ ಚಿತ್ರಿಸಿದವ  ನಾನು. ಮುನ್ಸೂಚನೆ ಕೊಟ್ಟು ಬಂದವರಲ್ಲ. ಬಾಲಣ್ಣ ನಮ್ಮ ಮನೆಗೆ ಈ ಮೊದಲೂ ಬಂದಿದ್ದರೆ, ಅವರ ಹೆಂಡತಿ ಮೊದಲ ಬಾರಿ ಬರುತ್ತಿದ್ದಾರೆ. ನಮ್ಮ ಮನೆಯ ಸ್ವಲ್ಪವೇ ದೂರದಲ್ಲಿ ಅವರ ಸಂಬಂಧಿಕರ ಮನೆ ಇದೆ. ಅಲ್ಲಿಗೆ ಯಾವುದೋ ಕಾರ್ಯಕ್ರಮಕ್ಕೆ ಬಂದವರು, ಊಟ ಮುಗಿಸಿ ನಮ್ಮಲ್ಲಿಗೆ ಬಂದಿದ್ದಾರೆ. ಅದಾವುದೋ ಗೊತ್ತು-ಗುರಿ ಇಲ್ಲದ ಕೆಲಸದಲ್ಲಿದ್ದ ನನ್ನನ್ನು ಕರೆದು, "ಮನೆಗೆ ನೆಂಟರು ಬಂದರು..." ಅಂತ ನಗುನಗುತ್ತಾ ಬಂದರು. ಒಳಗೆ ಓಡಿ ಹೋಗಿ ಊಟ ಮುಗಿಸಿ ಮಲಗಿದ್ದ ಅಪ್ಪನನ್ನು ಎಬ್ಬಿಸಿದೆ. "ಬಾಲಣ್ಣ..." ಅಂತ ಕರೆಯುತ್ತಾ ಭಾರಿ ಖುಷಿಯಲ್ಲಿ ಅಪ್ಪ ಅವರನ್ನು ಸ್ವಾಗತಿಸಿದರು. 

ಅಂದಾಜು ಎರಡು ವರ್ಷಗಳ ಹಿಂದೆ, ಅಂಗಡಿಗೆ ಬರುವ ಗ್ರಾಹಕರನ್ನು ಒಬ್ಬರಿಂದಲೇ ನಿಭಾಯಿಸುವುದು ಕಷ್ಟ ಎಂದು ತಿಳಿದು, ಗ್ರಾಹಕರಂತೆ ಬರುತ್ತಿದ್ದ ಬಾಲಣ್ಣನಲ್ಲಿ ಅಪ್ಪ ಒಂದು ಮಾತು ಕೇಳಿದ್ದರು. ಮರು ಮಾತನಾಡದೆ "ನನಗೂ ಸಮಯ ಹೋದ ಹಾಗೆ ಆಗುತ್ತದೆ.." ಎಂದು ನಗುನಗುತ್ತಾ ಒಪ್ಪಿಕೊಂಡರು. ಅಂದಿನಿಂದ ಖಾಯಂ ಕೆಲಸದವರಂತೆ ಅಲ್ಲ.., ನಮ್ಮ ಅವಶ್ಯಕತೆಗೆ ಜೊತೆಯಾಗುವ ವಿಶೇಷ ಗ್ರಾಹಕರಂತೆ ಬರುತ್ತಿದ್ದಾರೆ. ನಮ್ಮ ಫ್ಯಾಮಿಲಿ ಕಾರ್ಯಕ್ರಮಗಳಿಗೆ ಹೋಗುವಾಗ ಅಂಗಡಿ ಮುಚ್ಚಬೇಕಾಗಿ ಬರುವುದಿಲ್ಲ. ಹಾಗಂತ ನಮ್ಮ ಅಂಗಡಿಗೆ ಸಿಸಿಟಿವಿಯೂ ಇಲ್ಲ. ನಿರಂತರ ಸೇವೆಯ ವಿಶ್ವಾಸ ಬಂದರೆ ಮಾತ್ರ ಗ್ರಾಹಕರು ಖಾಯಂ ಅಂಗಡಿ ಅಂತ ಬಿರುದು ಕೊಡುವುದು. ಗ್ರಾಹಕರ ವಿಶ್ವಾಸ ಗಳಿಸುವಿಕೆ ವ್ಯಾಪಾರದ ಧರ್ಮ ಮತ್ತು ಗುಟ್ಟು. ಕಲಿಯುವ ಪ್ರತಿಯೊಂದು ವಿದ್ಯೆಯ ಮೂಲಕ ನಾವು ನಮ್ಮ ಜೀವನವನ್ನು ಆಕಾರ ಗೊಳಿಸಬಹುದು ಅಲ್ವಾ? ಜೀವನದಲ್ಲಿ ನಮ್ಮ ಮೇಲೆ ಇತರರಿಗೆ ವಿಶ್ವಾಸ ಬಂದರೆ ನಮಗೆ ಸಿಗುವ ಗೌರವ ಖಂಡಿತ ಹೆಚ್ಚಾಗುತ್ತದೆ.

ಬಾಲಣ್ಣ ಕೇವಲ ಗ್ರಾಹಕರು ಮತ್ತು ಸಹಾಯಕರು ಅಲ್ಲ. ಅಪರಿಮಿತ ಮಾಹಿತಿಗಳ ವಿಶ್ವಕೋಶ. ಅಚ್ಚುಕಟ್ಟಿನ ಜಾಣ್ಮೆಯ ಆಕಾರಬದ್ಧ ಜೀವನ. 'ಶಿಸ್ತು ಅಂದರೆ ಅವರ ಹಾಗೆ ಇರಬೇಕು' ಅಂತ ಅದೆಷ್ಟೋ ಜನ ಆಡಿಕೊಂಡದ್ದು ಕೇಳಿದ್ದೇನೆ. ಮನೆಯಲ್ಲಿ ತಿಂಡಿ ಮುಗಿಸಿ ಪೇಟೆಗೆ ಬಂದರೆ ಎರಡು ಮೂರು ಮಂದಿ ಸೇರಿ ಒತ್ತಾಯಿಸಿದರೆ ಮಾತ್ರ ಹೋಟೆಲ್‌ನಲ್ಲಿ ಒಂದು ಚಹಾ. ಅದು ಬಿಟ್ಟರೆ ಮತ್ತೆಲ್ಲವೂ ಮನೆಯಲ್ಲಿ ಹೆಂಡತಿಯ ಕೈ ರುಚಿಯಲ್ಲಿ ಮಾಡಿದ ಅಡುಗೆ ಮಾತ್ರ. ಸೇವಿಸುವ ಆಹಾರವು, ದೇಹದ ಸಮತೋಲನ ಮತ್ತು ಆರೋಗ್ಯದ ನಿಯಂತ್ರಣಕ್ಕೆ ರಾಮಬಾಣ ಎಂದು ದೃಢವಾಗಿ ನಂಬಿದವರು ಅವರು. ಮರೀಚಿಕೆಯಂತೆ ಕಾಣಸಿಗುವ ಅದೆಷ್ಟೋ ಔಷಧೀಯ ಗುಣದ ಗಿಡಮೂಲಿಕೆಗಳು ಅವರ ಅಂಗಳದಲ್ಲಿದೆ. 'ಹಿತ್ತಲ ಗಿಡ ಮದ್ದಲ್ಲ' ಈ ಗಾದೆ ಮಾತಿನಂತೆ ನಾವು ಬದುಕುತ್ತಿದ್ದೇವೆ ಎಂದು ನಮ್ಮ ಮನೆಗೆ ಬಂದು ಸಾಬೀತುಪಡಿಸಿದರು. ನಮ್ಮ ಮನೆಯ ಅಂಗಳದಲ್ಲಿ ಇದ್ದ ಒಂದು ಗಿಡದ ಎಲೆ, ಹೊಟ್ಟೆಯ ವಾಯುವಿನ ಸಮಸ್ಯೆಗೆ ಅತ್ಯಂತ ಫಲಪ್ರದ ಔಷಧಿ ಅಂತ ಸೂಚಿಸಿ ಅದರ ವಿಧಾನವನ್ನೂ ತಿಳಿಸಿದರು. ಹೋದ ಬಂದಲ್ಲೆಲ್ಲಾ ಕಾಣುವ ಗಿಡ ಮರಗಳ ಔಷಧೀಯ ಗುಣಗಳನ್ನು ಅವಲೋಕಿಸಿ, 'ಆರೋಗ್ಯ ಪೂರ್ಣ ಜೀವನವನ್ನು ಹೇಗೆ ಮುಂದುವರಿಸಬಹುದು' ಎಂದು ಅವಲೋಕಿಸುವುದು, ಅವರ ಹವ್ಯಾಸ ಎಂದೇ ಹೇಳಬಹುದು. ಪ್ರತಿಯೊಬ್ಬರಲ್ಲೂ ಸೌಜನ್ಯಯುತವಾಗಿ ಗೌರವದಿಂದ ಮಾತನಾಡುವ ದಂಪತಿ. ಹಾಗಂತ ಹೇಳಿದ್ದಕ್ಕೆಲ್ಲ ಒಪ್ಪುವ ದಾಕ್ಷಿಣ್ಯದ ಸಮ್ಮತಿಯೂ ಅವರದ್ದು ಅಲ್ಲ. 

ಬಂದು ಕುಳಿತ ಅವರಲ್ಲಿ ಅರ್ಜೆಂಟ್ ಬಾಯಾರಿಕೆ ಬೇಕಾ ಅಂತ ಅಪ್ಪ ವಿಚಾರಿಸುವ ಹೊತ್ತಿಗಾಗಲೇ ನಾನು ಒಳಗಿನಿಂದ ನೀರು ಮತ್ತು ಸಕ್ಕರೆ ತಂದು ಇಟ್ಟು ಆಗಿತ್ತು. 'ಬೇಡ..' ಎಂದು ಹೇಳಿದ ಅವರು ನಮ್ಮಲ್ಲಿಗೆ ಬರಲು ಒದಗಿದ ಸನ್ನಿವೇಶವನ್ನು ವಿವರಿಸಿದ್ದರು. "ಹಾಗಾದರೆ ಚಹಾ ಕುಡಿಯುವ, ಎಲ್ಲರಿಗೂ ಸಕ್ಕರೆ ಹಾಕಬಹುದಲ್ಲ..?" ಅಂತ ಅಪ್ಪ ಅವರಲ್ಲಿ ಕೇಳುವಾಗ, ಅವರ ಮಡದಿ "ಅಷ್ಟು ಅರ್ಜೆಂಟ್ ಯಾಕೆ? ನಾವು ಹೋಗಲು ಬಂದವರು ಅಲ್ಲ.. ಸಂಜೆವರೆಗೆ ಇದ್ದು, ಮಾತನಾಡಿ, ಆರಾಮ ಹೊರಡುದು. ಆಮೇಲೆ ಚಹಾ ಕುಡಿಯುವ" ಎಂದು ನಿರ್ಧಾಕ್ಷಿಣ್ಯವಾಗಿ ಹೇಳಿದರು. ಇಂದಿನ ಕಾಲದಲ್ಲಿ 'ಬಂದಿದ್ದೇವೆ ಅಂತ ಆಗಬೇಕು, ಬಂದ ಕೆಲಸವೂ ಆಗಬೇಕು, ಬೇಗ ಹೊರಡಲೂ ಬೇಕು' ಅಂತ ಅವಸರ ಅವಸರ ಮಾಡುವ ಅತಿಥಿಗಳ ಮಧ್ಯೆ ಇವರದ್ದು ತೀರಾ ವಿಭಿನ್ನ ಅನಿಸಿತು. ಹೊರಗೆ ಯಾರೋ ಬಂದರು ಎಂದು ತಿಳಿದ ನನ್ನ ಅಜ್ಜಿ ನಿಧಾನವಾಗಿ ಗೋಡೆಯನ್ನು ಆಧರಿಸಿ ನಡೆದು ಹೊರ ಬರುತ್ತಿದ್ದಂತೆ, ಬಾಲಣ್ಣನ ಹೆಂಡತಿ ಎದ್ದು ನಿಂತು "ನಮಸ್ಕಾರ ಅಮ್ಮ..." ಎಂದು ಹೇಳಿದರು. ಜೊತೆಗೊಂದು ಸಣ್ಣ ನಗು. ಸಾಧಾರಣ ಕುಳಿತುಕೊಳ್ಳುವ ಅದೇ ಮರದ ಕುರ್ಚಿಯಲ್ಲಿ ಅಜ್ಜಿ ಕುಳಿತರು.  ಎದ್ದು ಬಂದು ಅವರ ಆರೋಗ್ಯ ವಿಚಾರಿಸಿದ ಬಾಲಣ್ಣ, "ನಾನು ಈ ಹಿಂದೆ ಕಂಡಾಗ ಇದ್ದಷ್ಟು ಆರೋಗ್ಯ, ಈಗ ನಿಮ್ಮ ದೇಹದಲ್ಲಿ ಕಾಣುತ್ತಿಲ್ಲ" ಎಂದು ನೇರವಾಗಿ ಹೇಳಿಬಿಟ್ಟರು. ಸದ್ಯ ಇರುವ ಅನಾರೋಗ್ಯಗಳ ಪಟ್ಟಿಯನ್ನು ಬಾಲಣ್ಣನ ಮುಂದೆ ಅಜ್ಜಿ ಹೇಳುತ್ತಾ ಹೋದರು. "ಹಾಗೆ ಅನಿಸಿದರೂ ಕೂಡ, ನೇರವಾಗಿ 'ಆರೋಗ್ಯ ಕಾಣುತ್ತಿಲ್ಲ' ಅಂತ ಹೇಳಬಾರದಿತ್ತು" ಅಂತ ಹೆಂಡತಿ ನಮ್ಮಲ್ಲಿ ನಗುತ್ತಾ ಹೇಳಿದರು. ಅವರು ಹೇಳಿದರೆ ಅದರ ಭಾರ ಕಡಿಮೆ, 'ಬಾಲಣ್ಣ ಹಾಗೆ ಹೇಳಿದರು' ಅಂತ ನಾವು ಹೇಳಿದರೆ ಅವರಿಗೆ ಮತ್ತಷ್ಟು ಬೇಸರ ತಾನೇ. ಆರೋಗ್ಯ ಸುಧಾರಿಸಿಕೊಳ್ಳಬೇಕಾದದ್ದು ವಯೋವೃದ್ಧರ ಏಕ ಮಾತ್ರ ವೃತ್ತಿ. ಕೇವಲ ಅನಿಸಿಕೆಯನ್ನು ಮಾತ್ರ ಹೇಳದೆ, ಆರೋಗ್ಯವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂದು ಅವರ ಅನುಭವದ ಮಾಹಿತಿಯನ್ನೂ ಬಾಲಣ್ಣ ಅಜ್ಜಿಗೆ ಹೇಳಿದ್ದಾರೆ. 

ನೋಡಿದಾಗ ತುಂಬಾ ಖುಷಿ ಆಗುವ ಆದರ್ಶ ದಂಪತಿಗಳು ಅವರು. ಮಧುಮೇಹ ರಕ್ತದೊತ್ತಡ ಇಬ್ಬರಿಗೂ ಇಲ್ಲ. ಇಬ್ಬರಿಗೂ ಒಂದೇ ಶಕ್ತಿಯ ಕನ್ನಡಕ. ಅವರಿಬ್ಬರ ಮಧ್ಯೆ ವಯಸ್ಸಿನಲ್ಲಿ ಅಂತರವಿದ್ದರೂ, ಯೋಚಿಸುವ ಚಿಂತಾಗತಿಯಾಗಲಿ - ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಜ್ಜನಿಕೆಯಲ್ಲಾಗಲಿ ಏನೂ ವ್ಯತ್ಯಾಸ ಇಲ್ಲ. ಅವರು ಹಾಗೆ ಎಂದು ಸಂಪೂರ್ಣ ತಿಳಿದು ಜೊತೆ ಆಗುವ ಮಡದಿ, ಅವಳಿಗೆ ಎಷ್ಟು ಮತ್ತು ಹೇಗೆ ಇದ್ದರೆ ತೃಪ್ತಿಯಾಗುತ್ತದೆ ಎಂದು ಅರ್ಥಮಾಡಿಕೊಂಡ ಪತಿ. 

ಹಾಗಂತ ಅವರ ಜೀವನದಲ್ಲಿ ಬೇಸರ ಇಲ್ಲ ಅಂತ ಅಲ್ಲ. 'ಬದುಕುವುದೇ ಗ್ಯಾರೆಂಟಿ ಇಲ್ಲ..' ಅಂತ ಡಾಕ್ಟರ್ ಮತ್ತೆ ಮತ್ತೆ ಹೆದರಿಸಿದರೂ, ಶಕ್ತಿಮೀರಿ ಪ್ರಯತ್ನಿಸಿ ಬದುಕಿಸಿ, ಒಬ್ಬಳೇ ಒಬ್ಬಳು ಮಗಳನ್ನು ಸಾಕಿ ಸಲಹಿ ಬೆಳೆಸಿದರು. ತಾನು ಪ್ರೀತಿಸಿದ ಹುಡುಗನೊಂದಿಗೆ ಮುಂದುವರೆಯುವ ತೀರ್ಮಾನ ಮಾಡಿ ಮನೆ ಬಿಟ್ಟು ಹೋದಳು. ಒಂದೆರಡು ವರುಷ ಇದುವೇ ಆಘಾತದಲ್ಲಿ ಮನೆಯಿಂದ ಅಂಗಳಕ್ಕೂ ನಡೆಯದ ಬಾಲಣ್ಣ, ಈಗ ಒಂದಷ್ಟು ಬದಲಾಗಿದ್ದಾರೆ. ಬಾಲಣ್ಣನಿಗೆ ಇಷ್ಟ ಇಲ್ಲದಿದ್ದರೂ.. ಮಗಳೂ, ಅಳಿಯನೂ, ಮೊಮ್ಮಗನೂ ಮನೆಗೆ ಬಂದು ಹೋಗುತ್ತಿದ್ದಾರೆ.

ಈ ವಯಸ್ಸಿನಲ್ಲಿಯೂ ಅಚ್ಚುಕಟ್ಟಿನ ಮತ್ತು ಜಾಣ್ಮೆಯ ಜೀವನ ನಡೆಸುವ ಇಂತವರಿಂದ ನಮ್ಮ ನಿಮ್ಮಂತವರು ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ರಸ ಮಥನ. All rights reserved. Distributed by ASThemesWorld