Contact Angle Touch Studio for your Blog Design. Visit Site

ಭಾರತದ ಪರಿಕಲ್ಪನೆ ಇಂದು-ನಾಳೆ

ಭಾರತ ಎಂಬುದು ಪೌರಾಣಿಕ ವೃಷಭದೇವನ ಮಗ ಭರತ ಚಕ್ರವರ್ತಿ ಬಂದ ಹೆಸರು ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದ ಹೆಸರು ಮಾತ್ರವಲ್ಲ. ಅದು ಒಂದು ಪರಿಕಲ್ಪನೆ. ಮಾನವ :- ನವೀನತೆಯನ್ನು ಬಯಸುವ, ತನ್ನ ಹೆಜ್ಜೆಹೆಜ್ಜೆಗೂ ನವೀನತೆಯ ಲೇಪನ ಹಚ್ಚಿ ದಾರಿ ಸುಗಮವಾಗಿಸಲು ಎಡೆಬಿಡದೆ ಶ್ರಮಿಸುವ ಜೀವಿ. ಕಲ್ಪನೆ ಎಂಬುದು ಯೋಚನೆ ಅಥವಾ ಯೋಜನೆ ಎಂಬುದಾಗಿ ವ್ಯಾಖ್ಯಾನಿಸಲ್ಪಟ್ಟಿದ್ದರೂ, ಪರಿಕಲ್ಪನೆ ಎಂಬುದು ಒಂದು 'ವಿಷಯ,' ಇದು ಮಹತ್ವದ ವಿಷಯ. 'ಮಿಂಚಿದ ಕಾಲವ ಚಿಂತಿಸಿ ಫಲವಿಲ್ಲ' ಎಂಬ ಹಾಗೆ 'ಇಂದು'-'ನಾಳೆ' ಎಂಬ ಕೇವಲ ಎರಡು ವಿಧ ಮಾತ್ರ.ಭಾರತದ  ಪರಿಕಲ್ಪನೆಯಂತಹ ಅಗಾಧ ವಿಷಯದಲ್ಲಿ 'ಹಿಂದೆ' ಎಂಬ ವಿಧ ಆಯ್ದುಕೊಂಡರೆ ಬರೆಯಲು ಪುಟ ಸಾಲದು. ಆದರೆ "ಮೆಟ್ಟಿ ಬಂದ ಮಣ್ಣು, ಎತ್ತಿಕೊಟ್ಟ ಆಧಾರ, ಹತ್ತಿಬಂದ ಏಣಿ" ಯಾವುದನ್ನೂ ಮರೆಯಬಾರದು ಎಂಬುದು ಗುರುವಾಣಿ. ಹಿನ್ನೆಲೆ ಮರೆಯದೆ ಮುನ್ನಡೆ ಸಾಧಿಸಿದರೆ ಮಾತ್ರ, ಅರ್ಹ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯ ಎಂಬುದು ನೆನಪಿನಲ್ಲಿಡಬೇಕಾದ ಸಂಗತಿ.
 (ಫೋಟೋ ಕೃಪೆ:- ಗೂಗಲ್)
ಭಾರತ ಎಂಬ ಪರಿಕಲ್ಪನೆಯಲ್ಲಿ 'ಇಂದು' ಎಂಬ ಉಪವಿಭಾಗಕ್ಕೆ ಮೊದಲು ಪ್ರಾಶಸ್ತ್ಯ ವಹಿಸಿದರೆ, 1947ರ ಸ್ವಾತಂತ್ರ್ಯ ವಿಜಯದ ಬಳಿಕ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ಭಾರತ ಎಂಬ ಪರಿಕಲ್ಪನೆ ಸ್ವಾತಂತ್ರ್ಯಪೂರ್ವದಲ್ಲಿ 'ಸ್ವತಂತ್ರ್ಯ ಭಾರತ' ಎಂಬುದಾಗಿತ್ತು. ಇಂದು ಹಾಗಲ್ಲ 'ಬೆಳೆವಣಿಗೆಯ ಭಾರತ' ಎಂಬುದು ಹೊಸ ಪರಿಕಲ್ಪನೆ. ಬೆಳವಣಿಗೆ ಎಂಬುದು ಶೈಶವ ದಿಂದ ವೃದ್ಧಾಪ್ಯದ ವರೆಗಿನ ಸುದೀರ್ಘ ಯಾನ. ಆದರೆ ಯವ್ವನದಲ್ಲಿ ಎಷ್ಟು ಮುಂದುವರೆಯುವುದಕ್ಕೆ ಸಾಧ್ಯವಾಗುತ್ತದೋ ಅದುವೇ ಮುಪ್ಪಿನಲ್ಲಿ ಆಧಾರವಾಗುತ್ತದೆ. ಭಾರತ ನವಯೌವನತೆಯನ್ನು ಸಾಕ್ಷಾತ್ಕರಿಸಬೇಕು. ಯವ್ವನತೆಯಲ್ಲಿ ಅನಂತವಾದರೆ ಮುಪ್ಪಿನ ಭಯ ಇರುವುದಿಲ್ಲ.
 'ಇಂದು' ಎಂಬ ಪರಿಕಲ್ಪನೆಯಂತೆ ಈಗ ಭಾರತ ತರುಣತೆಯಲ್ಲಿದೆ. ಮಾನವನ ಜೀವನದಂತೆ ಭಾರತದ ವಿಕಸನವನ್ನು ಗಣನೆಗೆ ತೆಗೆದುಕೊಂಡರೆ, ಭಾರತವು ಸ್ವಾತಂತ್ರ್ಯದ ಮೂಲಕ ಜನನ ಹೊಂದಿ ಇದೀಗ ಬಾಲ್ಯದಿಂದ ತರುಣರತೆಗೆ ಹೆಜ್ಜೆ ಇರಿಸಿದೆ ಎನ್ನಬಹುದು. ಭಾರತದ ಇಂದಿನ ಪರಿಕಲ್ಪನೆಯು ಈಗಾಗಲೇ ಪ್ರಸ್ತಾಪಿಸಿದಂತೆ "ಬೆಳವಣಿಗೆಯ ಭಾರತ". ಭಾರತದ ಬೆಳವಣಿಗೆ ಯಾಗುವುದನ್ನು ಮೂರು ವಿಧವಾಗಿಸಿದರೆ ಸಾಂಸ್ಕೃತಿಕ, ವೈಜ್ಞಾನಿಕ, ನವೀಕರಣ ಎಂಬುದಾಗಿ ಹೇಳಬಹುದು. ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾದ್ದರಿಂದ, ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ಕಾರಣ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಹತ್ವದ ಏಳಿಗೆ ನಿರೀಕ್ಷಿಸಬಹುದು. ಆದರೆ ನವೀನತೆಯ ಗೋಜಿನಲ್ಲಿ ಪಾರಂಪರಿಕ ಆಚರಣೆ ಸಂಪ್ರದಾಯಗಳು ಹೊಸಮುಖ ಪಡೆದಿವೆ. ಉದಾಹರಣೆಗೆ: ದೀಪಾವಳಿ ದೀಪ ಬೆಳಗಿಸಿ, ಹಣತೆಗಳಿಂದ ಒಗ್ಗಟ್ಟಿನ ಬಲ ಪ್ರದರ್ಶಿಸಿ, "ಬೆಳಕು ಜೀವನ ಬೆಳಗಿಸಲಿ" ಎಂದು ಹಾರೈಸುವ ಕಾಲ ಮಿಂಚಿ ಹೋಗಿದೆ. ಕಣ್ಕುಕ್ಕುವ, ಕಿವಿ ತಮ್ಮಟೆ ಸಿಡಿಸುವ, ಸಿಡಿಮದ್ದು - ಪಟಾಕಿಗಳು, ಆಪತ್ತನ್ನು ಸಂಸ್ಕೃತಿಯೊಂದಿಗೆ ತಂದು ನೀಡುವುದು ವಿಪರ್ಯಾಸ. ಇದಕ್ಕಾಗಿ ಸಾಕಷ್ಟು .ಕಾನೂನು ಸುವ್ಯವಸ್ಥೆ ಜಾರಿಗೊಂಡರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ವೈಜ್ಞಾನಿಕವಾದ ಬೆಳವಣಿಗೆಯೆಂದರೆ ಬಾಹ್ಯಾಕಾಶ, ಶೈಕ್ಷಣಿಕ ಹಾಗೂ ಲ್ಯಾಬೋರೇಟರಿಗಳ ಕಂಡುಹಿಡಿಯುವಿಕೆ ಹಾಗೂ ಸಾಧನೆಗಳು. ವಿಜ್ಞಾನ ಎಂಬುದು ಪುರಾಣದ ಅಂಧತೆಯಿಂದ ವಸ್ತುನಿಷ್ಠತೆ ಎಂಬ ಸತ್ಯದೆಡೆಗೆ ಇರುವ ರಾಜಮಾರ್ಗ ಎಂಬುದು ವಿಜ್ಞಾನಿಗಳ ವಾದ. ಆದರೆ 'ಪುರಾಣಗಳು' ವಿಜ್ಞಾನದ ಸಾಧನೆಗಳನ್ನು ಅದೆಷ್ಟೋ ಕಾಲದ ಮೊದಲೇ ವ್ಯಾಖ್ಯಾನಿಸಿದೆ ಎಂಬುದು ಪುರಾಣ ಶಾಸ್ತ್ರಜ್ಞರ ಪ್ರಸ್ತುತಿ. ಎಲ್ಲರ ನಡುವಿನ ಯಾವುದೋ ಸಂದಿಗ್ಧತೆ ಬೆಳವಣಿಗೆಗೆ ಮೊಟಕು ನೀಡುತ್ತಿದೆ. ಪುರಾಣದ ತತ್ವ ಆಧರಿಸಿ ವಿಜ್ಞಾನವನ್ನು ಮುಂದುವರಿಸಿದರೆ ಮಾತ್ರ ಸಾಧನೆಯ ಮಾರ್ಗ ಸುಗಮವಾಗುವುದು. ನವೀಕರಣ ಎಂಬ ಮೂರನೇ ವಿಧದಲ್ಲಿ ಡಿಜಿಟಲೈ ಸೆಷನ್ , ಗ್ಲೋಬಲೈಸೇಷನ್ ಹಾಗೂ ಅರ್ಬಲೈಸೇಷನ್ ಹೆಸರುಗಳು ಪ್ರಾಧಾನ್ಯತೆ ಪಡೆದಿದೆ. ಡಿಜಿಟಲ್ ವಸ್ತುಗಳ ಕಂಡುಹಿಡಿಯುವಿಕೆ ಹಾಗೂ ಸಮರ್ಪಕವಾದ ಬಳಕೆ, ಸಮಯ ಹಾಗೂ ಖರ್ಚು ಕಡಿತಗೊಳಿಸುವುದು ಎಂಬುದು ಒಪ್ಪಲೇಬೇಕಾದ ಸತ್ಯ. ಹೊಸ ಮಾರುಕಟ್ಟೆ ಅರಸುವ ಭಾರತೀಯರಿಗೆ ಗ್ಲೋಬಲೈಸೇಶನ್ ಜಗತ್ತಿನ ಕದ ತೆರೆದು ಸ್ವಾಗತಿಸುತ್ತದೆ. ಅರ್ಬಲೈಸೇಷನ್ ನಗರ ಸೌಲಭ್ಯಗಳ ಐಟಿ-ಬಿಟಿ ಕಂಪನಿಗಳ, ಆಫೀಸ್ ಕೆಲಸದ , ತಂತ್ರಜ್ಞಾನ ನವೀಕರಣದ ಜೀವನವನ್ನು ಸ್ವಾಗತಿಸುತ್ತದೆ. ಜವಾಹರ್ಲಾಲ್ ನೆಹರು ಅವರು ಹೇಳಿದಂತೆ "ನವೀನತೆಯ ಹೊಂಗನಸನ್ನು ಕಾಣುವ ಯುವ ನಾಗರಿಕರಿಂದ ಮಾತ್ರ, 'ಭಾರತ' ಉತ್ತಮ ಭವಿಷ್ಯ ಹಾಗೂ ಅಭಿವೃದ್ಧಿಯ ಕನಸು ಕಾಣಲು ಸಾಧ್ಯ."
ನಾಳೆ ಎಂಬ ಭಾರತದ ಪರಿಕಲ್ಪನೆಯು "ಬಲಿಷ್ಠ ಭಾರತ" ಎಂದು ಹೇಳಬಹುದು. ಬಲಿಷ್ಠತೆಯು, ಈ ಹಿಂದೆ ಹೇಳಿದ 'ಬೆಳವಣಿಗೆಯ ಭಾರತ' ಎಂಬ ಪರಿಕಲ್ಪನೆಯ ಲಕ್ಷ್ಯ ಅಥವಾ ಸಾಧನೆಯಾಗಿದೆ. ಬೆಳವಣಿಗೆಯಲ್ಲಿ ಕುಂದುಕೊರತೆಗಳು ಇರಬಹುದು, ಆದರೆ ಸಾಧನೆ ಬರುವುದು ಅವುಗಳ ನಿವಾರಣೆಯಾಗಿ, ಮೂರು ವಿಧಗಳಾದ ಸಾಂಸ್ಕೃತಿಕ ವೈಜ್ಞಾನಿಕ ಹಾಗೂ ನವೀಕರಣದಲ್ಲಿ ಸಾಫಲ್ಯ ಕಂಡಾಗ ಮಾತ್ರ. ನಾಳಿನ 'ಬಲಿಷ್ಠ ಭಾರತ' ಎಂಬುದು ಭಾರತದ ಯೌವನ ಕಾಲ. ಅದರಲ್ಲಿ ಎಷ್ಟು ದೀರ್ಘ ವರ್ಷ ಬಾಳಬಹುದು ಎಂಬುದು ಬೆಳವಣಿಗೆಯ ರೀತಿ ಹಾಗೂ ಉಳಿಸಿಕೊಂಡ ಮೂಲಭೂತ ಪರಿಸರದಿಂದ ನಿರ್ಧರಿತವಾಗುತ್ತದೆ. ಇಂದಿನ ಬೆಳವಣಿಗೆಯ ರೀತಿ ನೀತಿಗಳಿಂದ ನಾಳಿನ ಬಲಿಷ್ಠತೆ ಗಟ್ಟಿಯಾಗುತ್ತದೆ. ನಾಳೆ ಎಂಬ ಭಾರತದ ಪರಿಕಲ್ಪನೆ ಸಾಧನೆಗಳ ಹೇರಳತೆಯಿಂದ ತುಂಬಿದ್ದು ಹೊಸ ಚೇತನದಿಂದ ಮಿನುಗುತ್ತಿರುತ್ತದೆ.
ಸವಾಲುಗಳು :- ಎಲ್ಲ ಯೋಚನೆ ಯೋಜನೆಗಳ ಬೆನ್ನು ಬಿಡದೆ, ಸುತ್ತಾಡಿ ಸತಾಯಿಸುವ ಭೀಕರ ಸತ್ಯ. ಸವಾಲುಗಳು ಬಂದಾಗ ಮಾತ್ರ ಸುಭದ್ರತೆಯ ಸವಿ ಆಸ್ವಾದಿಸಲು ಸಾಧ್ಯ. ಭಾರತದ ಎರಡು ವಿಧದ ಪರಿಕಲ್ಪನೆಗಳಿಗೆ ಮುಖ್ಯ ಎದುರಾಳಿಯಂತೆ ಇರುವುದು ಈ ಸವಾಲುಗಳು. ಹೆಚ್ಚುತ್ತಿರುವ ವಾಹನಗಳ ನಿಯಂತ್ರಣ, ವಾಯುಮಾಲಿನ್ಯ, ಜಲಮಾಲಿನ್ಯ ಸಂಸ್ಕರಣ, ಮೂಲಭೂತ ಸೌಕರ್ಯಗಳಾದ , ಶುದ್ಧಗಾಳಿ, ಶುಭ್ರ ನೀರು, ಶುಚಿ ಆಹಾರ, ಸುಭದ್ರ ವಸತಿ, ಅವಶ್ಯಕತೆ ಒದಗಿಸುವಿಕೆ, ಪ್ರಾಕೃತಿಕ ಸವಲತ್ತುಗಳಾದ ಕಾಡು , ನೀರು, ಗುಡ್ಡ, ನದಿ, ಸರೋವರಗಳ ಸಂರಕ್ಷಣೆ, ಮೊದಲಾದವುಗಳು ಸಾಧನೆಯ ಹಾದಿಗೆ ಹಾಸಿದ ಮೊಳೆಗಳ ಹಾಸಿಗೆಯಂತೆ ಚುಚ್ಚುತ್ತಿವೆ. 'ಮೊಳೆಗಳಿರುವ ದಾರಿ ಮುಂದೆ ಕಸದ ತೊಪ್ಪೆಗೆ ಸಾಗಿಸುತ್ತದೆ' ಎಂಬ ಪರಿಜ್ಞಾನವಿರಬೇಕು. ದಾರಿಯ ವಿಧದಲ್ಲೂ ಸಾಧನೆಯ ಚಪಲತೆ ಹುದುಗಿರುತ್ತದೆ.
ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವ ಮನೋಧೈರ್ಯ ಭಾರತ ಭೂಮಿಗೆ ಇದೆ, ಎಂಬುದು ಸ್ವಾತಂತ್ರ್ಯ ಹೋರಾಟಗಾರರಿಂದ ತಿಳಿಯಬಹುದು. ಗತಕಾಲದ - ವೈಭವದ - ರತ್ನಗಂಬಳಿಯ ವೈಭೋಗದಿಂದ, ಕೊಳ್ಳೆಗಾರರ ಕೈಗೆ ಸಿಲುಕಿ ಒದ್ದಾಡಿ, ಮತ್ತೆ ಪುನರ್ಜನಿ ತಲೆಯೆತ್ತಲು ಭಾರತಕ್ಕೆ ಸಾಧ್ಯ ಆಗಿದ್ದರೆ, ಈ ತರುಣತೆಯಿಂದ ಯೌವನಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. 
ಸಾಧಿಸಲಾಗದು ಎಂಬುದು ಖಿನ್ನತೆ, ಸಾಧಿಸಬಹುದು ಎಂಬುದು ಅಗಾಧತೆ, ಸಾಧಿಸುತ್ತೇವೆ ಎಂಬುದು ದೃಢತೆ. ದೃಢತೆ ನಮ್ಮದಾಗಲಿ ಹೇಳಿಗೆ ನಮ್ಮದಾಗಲಿ.
ಜೈ ಭಾರತ್, ಜೈ ಭಾರತ್

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ರಸ ಮಥನ. All rights reserved. Distributed by ASThemesWorld