Contact Angle Touch Studio for your Blog Design. Visit Site
Posts

ಎರಡಕ್ಷರದ ಬೀಡ....

ಈಗ ಏನೋ 'Pan India' 'Startup India' ಎಲ್ಲಾ ಬಂದಮೇಲೆ 'ಪಾನ್' ಇಂಡಿಯಾ ಕಡಿಮೆ ಆಗಿದೆ. ದೇಶವೆಲ್ಲಾ ಪಾನ್ ತಿನ್ನುವವರಿದ್ದ ಆ ಕಾಲದಿಂದ ದೂರವಾಗಿ, ಈಗ ಒಂದಷ್ಟು ಪರಂಪರೆ ಉಳಿಸುವ ಪಾನ್ ತಿನ್ನುವವರು ಮಾತ್ರ ಇದ್ದಾರೆ. ನಮ್ಮ ಊರಲ್ಲಿ ಪಾನ್ 'ಬೀಡಾ' ಎಂದು ಬಳಕೆ. ಜರ್ದಾ ಬೀಡ - ಸ್ವೀಟ್ ಬೀಡ ಅಂತೆಲ್ಲಾ ಕೇಳಿರ್ತೀರಿ ಆದರೆ ಇದೇನು 'ಎರಡಕ್ಷರದ ಬೀಡ' ಅಂತ ಆಶ್ಚರ್ಯ ಆಯ್ತಾ? ಹೌದು ನೀವು ಓದಿದ್ದು ನಿಜ. ಬೀಡದಲ್ಲಿ ಅಂತಹಾ ಒಂದು ಪ್ರಕಾರ ಇದೆ. ಸಾಮಾನ್ಯ ಬೀಡದಂತೆ ಅಲ್ಲ. ಬೀಡ ಕಟ್ಟುವವರು ಸಾಮಾನ್ಯವಾಗಿ ಕಟ್ಟಿದರೂ... ಸವಿಯುವ ಗ್ರಾಹಕನಿಗೆ ಬಹಳ ರುಚಿ ....

ನಾನು ಬರೆದ ಚಿತ್ರ ನೋಡಿ, ಯಾವುದೋ Pizza ದ ಕತೆ ಹೇಳುತ್ತಾನೆ ಅಂತ ಕೆಲವರಾದರೂ ಅಂದುಕೊಂಡಿದ್ದಾರೆ. ಬರೆಯಲು ಬರದವನಿಗೆ ಅನಕ್ಷರಸ್ಥ ಎಂದು ಕರೆದರೆ, ಚಿತ್ರ ಮಾಡಲು ಬರದವನಿಗೆ ಏನು ಕರೆಯುವುದು ? 'ಅಚಿತ್ರಗಾರ' ಎಂದೋ 'ವಿಚಿತ್ರಗಾರ' ಎಂದೋ ಕರೆಯಬಹುದೇನೋ. 

ಈಗ  ಮದುವೆ ಸಮಾರಂಭಗಳಲ್ಲಿ ಊಟದ ನಂತರ, ಟೇಬಲ್ ನಲ್ಲಿ ಹರಡಿಟ್ಟ ವೀಳ್ಯ ಎಲೆಯ ಮೇಲೆ ಬಣ್ಣ ಬಣ್ಣದ ರುಚಿ ಪದಾರ್ಥ ಸೇರಿಸಿ ಪಾನ್ ತಿನ್ನಿಸುವ ಹಿಂದಿ ಬಯ್ಯನವರು ಕಾಣಸಿಗುತ್ತಾರೆ. ಊರಿನ ಸಣ್ಣ ಗೂಡು ಪೆಟ್ಟಿಗೆಗಳಲ್ಲಿ ತಂಬಾಕು ಸುಣ್ಣ ಬೆರೆಸಿ ಪಾನ್ ತಿನ್ನಿಸುವ ಅಣ್ಣಂದಿರು ನಮ್ಮ ಕಣ್ಣಿಗೆ local ಜನ ಆಗಿಬಿಡುತ್ತಾರೆ. ಪಾನ್ ಅಥವಾ ಬೀಡ ತಿಂದು ಅಭ್ಯಾಸ ಇರುವವರು ಪ್ರಸ್ತುತ ಸಮಾಜದ ದೃಷ್ಟಿಯಲ್ಲಿ 'ಚೀ.... ತ್ತೂ....' ಹೇಳಿಸಿಕೊಳ್ಳುವವರು ಆಗಿಬಿಟ್ಟಿದ್ದಾರೆ. ಸಮಾಜದ ಹಿತ ದೃಷ್ಟಿಯಲ್ಲಿ ನೋಡಿದರೆ ಎಲೆ ಅಡಿಕೆ ಜಗಿದು ಎಲ್ಲೆಂದರಲ್ಲಿ ಉಗಿಯುವ ಜನರು ಶುಚಿ ಜವಾಬ್ದಾರಿ ಇಲ್ಲದವರೇ ಹೌದು. ಕಾಲಾನುಗತವಾಗಿ ಸಭ್ಯತೆ, ಸುಚಿತ್ವ, ಶಿಸ್ತಿನ ಜೀವನ ಬಯಸುವ ಸಮಯ ಕೊಳೆತ ಹಲ್ಲು ಇರುವ, ಪರಿಸರ ಮಾಲಿನ್ಯ ಮಾಡುವ ಮತ್ತು ಹವ್ಯಾಸವನ್ನು ಚಟ ಮಾಡಿಕೊಂಡು ಆರೋಗ್ಯದ ಬಗ್ಗೆ ಅಲಕ್ಷ್ಯವಹಿಸುವ ಬೀಡಾ ಜಗಿಯುವವರನ್ನು ಸಮಾಜವೇ ದೂರವಿಡುತ್ತದೆ.

ವಿಮರ್ಶಾತ್ಮಕ ಲೇಖನವಾಗಿ ಮುಂದುವರಿಸಿ ತಲೆಕೆಡಿಸುವುದಿಲ್ಲ... ಜೀವನ ಅನುಭವದ ಸಾಲುಗಳನ್ನು ಆಸ್ವಾದನ್ಯವಾಗಿ ಸ್ವೀಕರಿಸಿ ಸವಿಯುತ್ತಾ ಹೋಗಿ..

ಹಲ್ಲಿನ ಎಡೆಯಲ್ಲಿ ಇಡುವುದು, ಮೂಗಿನಲ್ಲಿ ಎಳೆಯುವುದು, Injection ಮಾಡಿಕೊಳ್ಳುವುದು, ಕುಡಿದು ತೇಲುವವುದು ಮುಂತಾದ ಚಟಗಳ ಮುಂದೆ, ಬೀಡಾ ಸೇವನೆ ಅಷ್ಟೊಂದು ಕೆಟ್ಟದ್ದು ಅಲ್ಲ ಎಂದೇ ನನ್ನ ಅಭಿಪ್ರಾಯ. ಆರೋಗ್ಯದ ಹಿತ ದೃಷ್ಟಿ, ಸಮಾಜದ ಜವಾಬ್ದಾರಿ ಇರುವ ವ್ಯಕ್ತಿ ನಿಯಂತ್ರಣದಲ್ಲಿ ಇಡಬಹುದಾದ ಕೇವಲ ಹವ್ಯಾಸ ಬೀಡ ಸೇವನೆ.

ಅಂಗಡಿಯಲ್ಲಿ ಬೆಳಗ್ಗೆ ಬೇಗ ಬಂದು, ಅಡಿಕೆ ಕೆರೆಸಿ, ಸುಣ್ಣ ತಟ್ಟೆಗೆ ಹಾಕಿ, ಎಲೆಗಳನ್ನು ಒದ್ದೆ ಮಾಡಿ ಎರಡು ನಾಲ್ಕು ಎಂದು ಲೆಕ್ಕ ಮಾಡಿ ಬೀಡ ಕಟ್ಟುವವರು, ಜೀವನೋಪಾಯದ ಆದಾಯ ಮೂಲವಾಗಿ ನಡೆಸುವವರು. ಬೀಡಾ ತಿಂದವರಿಗೆ ಗೊತ್ತು ಅದರ ಸ್ವಾಧ. ಸುಣ್ಣ ಅಡಿಕೆ ಹೊಗೆಸೊಪ್ಪು ಸೇರಿಸದೆ, ಕೇವಲ ಎಲೆ ತಿಂದು 'ಆಹಾ...' ಹೇಳುವ ನನಗೆ ಬೀಡ ತಿನ್ನಲು ಅವಕಾಶ ಸಿಗಲಿಲ್ಲ ಅಂದಲ್ಲ, ನಾನೇ ಬೇಡ ಎಂದೆ ಅಷ್ಟೇ... ತಿಂದದ್ದು ಗೊತ್ತಾದರೆ ಮನೆಯವರು ಬಿಡುವುದಿಲ್ಲ ಎನ್ನುವುದು ಬ್ರಾಕೆಟ್‌ನಲ್ಲಿ ಬರೆಯಬೇಕಾದ ಸಾಲು...

ಅವರು ಜೀವನೋಪಾಯವಾಗಿ ಬೀಡ ಮಾರುತ್ತಿದ್ದರು. ಮೊದಲು ಕಾರ್ಯಕ್ರಮಗಳಲ್ಲಿ, ಜಾತ್ರೆಯ ಸಂತೆಯಲ್ಲಿ, ತನ್ನ ಬೀಡಾ ಪೆಟ್ಟಿಗೆ ಇರಿಸಿ ಕುಟುಂಬದ ಭಾರ ಹೊತ್ತು ಆದಾಯ ಸಂಪಾದಿಸುತ್ತಿದ್ದರು. ಸಂಪಾದಿಸಿದ್ದನ್ನು ಉಳಿಸಿ ಒಂದು ಕಡೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದರು. 'ಜನರು ಕೇವಲ ಬೀಡ ಮಾತ್ರ ಖರೀದಿಸಲು ಬರುವುದಿಲ್ಲ' ಅಂತ ಒಂದೇ ಕಡೆ ವ್ಯಾಪಾರ ಮಾಡುವಾಗ ಮನವರಿಕೆಗೆ ಬಂದ ಸತ್ಯ. ಮಕ್ಕಳಿಗೆ ಬೇಕಾದ ಚಾಕಲೇಟು, ಮನೆಗೆ ಬೇಕಾದ ಸೋಪು - ಪೇಸ್ಟು... ಬಿಡ ತಿನ್ನುವ ಮೊದಲು ಬಾಯಾರಿಕೆ ಆದವರಿಗೆ ಜೂಸುಗಳು.. ಹೀಗೆ ಸೇರಿಸುತ್ತಾ ಹೋದರು. ಒಂದು ಹಂತ ತಲುಪಿದಾಗ 'ಇನ್ನು ಸೇರಿಸುವ ಅಗತ್ಯ ಇಲ್ಲ, ನಾನು ಒಬ್ಬ ನಿಭಾಯಿಸುವ ಈ ಅಂಗಡಿಯಲ್ಲಿ ಇಷ್ಟು ಸಾಮಾನು ಮಾತ್ರ ಮಾರಾಟ ಸಾದ್ಯ' ಎಂದು ತೃಪ್ತಿ ಪಡೆದರು. 

ಅಂಗಡಿಗೆ ಬರುವವರು ಯಾವುದನ್ನೇ ಕೊಂಡುಕೊಳ್ಳಲಿ ಬೀಡ ತಿನ್ನಲೇಬೇಕು ಅಂತ ಏನು ಇಲ್ಲ. ಹಾಗಂತ ಬೀಡ ತಿನ್ನುವ ಮೂಲಕವೇ ಪರಿಚಯ ಆದ ಯಾರಿಗೂ ನಿರಾಸೆ ಇಲ್ಲ. ಯಾಕೆಂದರೆ ಬೀಡ ಮಾರುವುದನ್ನು ನಿಲ್ಲಿಸಲಿಲ್ಲ. ಬಂದವರು ಹಣ ಇದೆ ಎನ್ನುವ ದರ್ಪ ತೋರಿಸಿದರೂ, ಪಾಪದವರು ಬಂದು 'ಒಂದು ರೂಪಾಯಿ ಕಡಿಮೆ ಇದೆ ಇನ್ನೊಮ್ಮೆ ಕೊಡುತ್ತೇನೆ' ಎಂದರೂ ಬೀಡ ಇಲ್ಲ ಎಂದು ಹೇಳಿದವರಲ್ಲ. ಬೀಡ ಮಾಡುವ ಎಲೆ ಅಡಿಕೆ ಪ್ರತ್ಯೇಕವಾಗಿ ಬೇಕು ಎಂದವರಿಗೂ ಕೊಡುತ್ತಾರೆ. ಆದರೆ ಬೀಡ ಕೇಳಲು ಬರುವವರಿಗೆ ಇಲ್ಲ ಎಂದು ಹೇಳುವಂತೆ ಮಾಡುವುದಿಲ್ಲ. ಬೀಡ ಕಟ್ಟಲು ಎಲೆ ಕಡಿಮೆ ಇದ್ದರೆ 'ಎಲೆ' ಮಾತ್ರ ಕೇಳಿದವರಿಗೆ ಕೊಡುವುದೂ ಇಲ್ಲ. ಹಾಗೆ ಮಾಡಿಯೂ ಎಲೆಮುಗಿದರೆ, ಹೆಚ್ಚಿನ ಹಣಕ್ಕೆ ಎಲೆ ತಂದು ಅದೇ ಮೂಲ ಬೆಲೆಗೆ ಬೀಡ ಮಾರುತ್ತಿದ್ದರು. ಬಂದು ಕೇಳಿದವರಿಗೆ 'ಬೀಡ ಇಲ್ಲ' ಎಂದು ಹೇಳುವ ಸ್ಥಿತಿ ಬರಬಾರದು ಎಂಬುದು ಮಾತ್ರ ಉದ್ದೇಶ. ಹತ್ತಿರದಲ್ಲೇ ತೆರೆಯುವ ಬೀಡಾ ಮಾರಾಟ ಸ್ಪರ್ದಿಗಳು, ಹೆಚ್ಚುತ್ತಿರುವ ಎಲೆ-ಅಡಿಕೆಯ ಕೊರತೆ  ಎಲ್ಲದರ ಮಧ್ಯೆ ತಾನು ಆರಂಭಿಸಿದ್ದನ್ನು ಬಿಡಬಾರದು ಎನ್ನುವ ಕೃತಜ್ಞತೆಯ ಸವಾಲು. ಆದರೆ ಕೆಲವರಿಗೆ ಇಲ್ಲಿ ಕಷ್ಟ... ಪ್ರಸ್ತುತ ವಿದ್ಯಮಾನದ ಮಾನವೀಯ ಧೋರಣೆಗಳಿಗೆ ವಿರುದ್ಧವಾಗಿ ಮಾತನಾಡುವವರಿಗೆ ಬೀಡದ ಜೊತೆ ಉಪದೇಶ ಕೂಡ ಉಚಿತ.

 ಬೀಡ ತಿನ್ನಲು ಬರುವವರು ಪೂರ್ತಿ ಸರಿ ಇದ್ದವರು ಮಾತ್ರ ಅಲ್ಲ. ಯಾವುದೋ ತಲೆಬಿಸಿ ಮರೆಯಲು ಬೀಡ ತಿನ್ನುವವರಿದ್ದಾರೆ. ಕುಡಿದು ನಶೆಯ ಮತ್ತಿನಲ್ಲಿ ಹುಚ್ಚು ಮಾತನಾಡುತ್ತಾ ಬೀಡ ತಿನ್ನಲು ಬರುವವರಿದ್ದಾರೆ. ಅಂಗಡಿಗೆ ಬಂದು ರೂ. 5 ನ್ನು ಚಾಕಲೇಟ್ ಡಬ್ಬದ ಮೇಲೆ ಇಟ್ಟು 'ಮಾಮೂಲು' ಅಂತ ಹೇಳಿ, ಅವರು ಯಾವತ್ತೂ ತಿನ್ನುವ ಹಾಗೆ ಬೀಡ ರೆಡಿ ಮಾಡಿ ಕೊಡಲು ಓಡರ್ ಮಾಡುವವರಿದ್ದಾರೆ. ಅವರವರ ವ್ಯವಹಾರ ರೀತಿ ಅವರ ಮಾನ್ಯತೆಯನ್ನೇ ಪ್ರತಿಬಿಂಬಿಸುತ್ತದೆ, ಎನ್ನುವ ಧನಾತ್ಮಕ ಚಿಂತನೆಯೊಂದಿಗೆ 'ತನ್ನ ಕೆಲಸ ತಾನು ಮಾಡುತ್ತೇನೆ' ಅಂತ ಬೀಡ ಕೊಡುತ್ತಾರೆ.

ಆಶ್ಚರ್ಯ ಆದದ್ದು 'ಎರಡಕ್ಷರದ' ಬೀಡಾ ಅಂತ ಒಬ್ಬರು ಬಂದು ಕೇಳಿದಾಗ. ಅಲ್ಲೇ ದೂರದಲ್ಲಿ ಇದ್ದ ನಾನು 'ಇದೇನಪ್ಪಾ!' ಅಂತ ನೋಡುತ್ತಾ ನಿಂತೆ. ಕೇಳಿದವನ ಮುಖದಲ್ಲಿ 'ನಾನು ನಿಮ್ಮವನೇ' ಎನ್ನುವ ಹಾಗೆ ಭಾವ ಇತ್ತು. ಬೀಡ ಇಲ್ಲ ಅಂತ ಹೇಳಿದವರಲ್ಲ, ತಯಾರು ಮಾಡಿ ಕೂಡಲೇ ಕೊಟ್ಟರು. ಸಂತೋಷವೂ ಅಲ್ಲದ , ಬೇಸರವು ಇಲ್ಲದ ಅಲಕ್ಷ್ಯ ಭಾವ ಮುಖದಲ್ಲಿ. ನಾನು ಅಂದುಕೊಂಡೆ ಎರಡಕ್ಷರದ ಬೀಡಾ  ನಾನು ಮಾತ್ರ ಕೇಳಲಿಲ್ಲ ಉಳಿದವರಿಗೆ ಪರಿಚಿತ ಹೆಸರು ಆಗಿರಬಹುದು ಅಂತ. 'ಎರಡಕ್ಷರದ ಬಿಡ ಕೇಳುವವರೇ ಹೆಚ್ಚು' ಅಂತ ತನ್ನಷ್ಟಕ್ಕೆ ದೀರ್ಘ ಶ್ವಾಸ ತೆಗೆದುಕೊಂಡು ಮತ್ತೆ ಕೆಲಸ ಮುಂದುವರಿಸಿದ್ದರು. ಬೀಡಾ ತೆಗೆದುಕೊಂಡ ಆತ ಸುಣ್ಣ ಒರೆಸಿ ಎಲೆಯನ್ನು ಜಗಿದು ಆಸ್ವಾದಿಸಿದ. ಬೆರಳಲ್ಲಿ ಇದ್ದ ಸುಣ್ಣವನ್ನು ಅದೇ ಅಂಗಡಿಯ ಗೋಡೆಗೆ ಉಜ್ಜಿದ. ಉಗುಳುವುದು - ಜಗಿಯುವುದು - ಸವಿಯುವುದು ಮುಂದುವರಿಸಿದ. ಹಲ್ಲಿನಲ್ಲಿ ಏನೋ ಸಿಕ್ಕಿಬಿದ್ದಿರಬೇಕು, ಬೆರಳನ್ನು ಬಾಯಿಗೆ ಹಾಕಿ ತನ್ನಷ್ಟಕ್ಕೆ ತಾನು ಹೊರಟ. ಎರಡಕ್ಷರದ ಬೀಡ ಕೇಳಿ ತಿಂದವರು ಯಾರೂ ಹಣ ಕೊಡದೆ ಇದ್ದದ್ದು ಗಮನಿಸಿದಾಗಲೇ ಗೊತ್ತಾದದ್ದು. ಎರಡಕ್ಷರದ ಬೀಡಾ ಅಂದರೆ 'ಸಾಲ ಬೀಡ' ಅಂತ. ತಿಂದವನು ಬಾಯಿ ಚಪ್ಪರಿಸದೆ ಇರಲು ಸಾಧ್ಯವೇ. ಎಲೆಯ ಕಹಿ, ಸುಣ್ಣದ ಖಾರ, ಅಡಿಕೆಯ ಸಿಹಿ.. ಹೊಗೆಸೊಪ್ಪಿನ ಯಾವುದೋ ನಶೆ. ಅದು ಕೂಡ ಒಂದು ಸ್ವಲ್ಪವೂ ಖರ್ಚು ಮಾಡದೆ.

ಯಾವುದು ನಮಗೆ ಇಷ್ಟವೋ ಅದರ ಕೆಲಸವನ್ನೇ ಮುಂದುವರಿಸಿದರೆ ಸಾಧನೆಯ ಹಾದಿಯಲ್ಲಿ ಕಾಲಿಗೆ ತೊಡಕಾಗಿ ಸಿಗುವ ಕಷ್ಟಗಳೆಲ್ಲವೂ ಸರಾಗ ದಾಟಿ ಹೋಗಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇಂತವರೇ ಸಾಕ್ಷಿ. ಸವಾಲುಗಳನ್ನು ನಗುತ್ತಾ ಸ್ವೀಕರಿಸಿ 'ಇಂದಲ್ಲ ನಾಳೆ' ಎನ್ನುವ ಆಶಾಭಾವದಿಂದ ಮುಂದುವರಿದರೆ ನಮಗೆ ಮೋಸ ಮಾಡಿ ಸಂಪಾದಿಸಿದವರೂ ತಲೆತಗ್ಗಿಸುವಷ್ಟು 'ಸಾಧನೆ' ಮಾಡಬಹುದು ಎನ್ನುವುದು ಸಂದೇಶ. ಕೊನೆಗೊಂದು ಮಾತು, ಬೀಡ ಮಾರುವವರು ಬೇರೆ ಯಾರೂ ಅಲ್ಲ 'ಬೀಡ ಮುರಳಿ' ಎಂದು ಕರೆಯಲ್ಪಡುವ ನನ್ನ ಅಪ್ಪ.

ಎಲ್ಲವನ್ನು ನಗುತ್ತಾ ಸ್ವೀಕರಿಸಿ ಇದು ಬದುಕು ಎನ್ನುವುದನ್ನು ಒಪ್ಪಿ ಮುಂದಡಿ ಇಡುವ ಇಂತವರಿಂದ ನಮ್ಮ ನಿಮ್ಮಂತವರು ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

2 comments

  1. ಜೀವನದಲ್ಲಿ ನೆಡೆದ ಘಟನೆಗಳನ್ನೇ ಕಥಾ ರೂಪದಲ್ಲಿ ಜನರಿಗೆ ತಲುಪಿಸುವ ಈ ನಿಮ್ಮ ವೈಖರಿ ತುಂಬಾ ಚೆನ್ನಾಗಿದೆ ಅಭಿಷೇಕ್. ನಡುವಿನಲ್ಲಿ ಬರೆದಿರುವ ಹಾಸ್ಯಾಸ್ಪದ ಸಾಲುಗಳು ಈ ಕತೆಗೆ ಮತ್ತಷ್ಟು ಮೆರಗು ನೀಡಿದೆ. ಇಂತಹ ಒಳ್ಳೆಯ ಬರಹಗಾರನನ್ನು ನಮಗೆ ನೀಡಿದ ನಿಮ್ಮ ತಂದೆಯವರಾದ ಬೀಡ ಮುರುಳಿಯವರಿಗೆ ನನ್ನ ಪ್ರಣಾಮಗಳು.
    1. ಧನ್ಯವಾದಗಳು ಸರ್
© ರಸ ಮಥನ. All rights reserved. Distributed by ASThemesWorld