Contact Angle Touch Studio for your Blog Design. Visit Site

ಕುಂಬು ಹಿಡಿಯದ ದೇಹ...

ಅನಿರೀಕ್ಷಿತವಾಗಿ ಸುಬ್ರಹ್ಮಣ್ಯ ಹೋಗುವ ಸಂದರ್ಭ ಒದಗಿ ಬಂತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಊಟ ಮುಗಿಸಿ ಹೊರಬಂದು ಮತ್ತೆ ಬಸ್ ಸ್ಟ್ಯಾಂಡ್‌ಗೆ ಹೋಗುವ ದಾರಿ. ಸುಡುವ ಸೂರ್ಯನ ಬಿಸಿಲು ನೈಸ್ ಡಾಮರ್ ನೆಲದಲ್ಲಿ ರಿಫ್ಲೆಕ್ಟ್ ಆಗಿ ಮೈ ಎಲ್ಲಾ ಬೆಂದಂತೆ ಆಗುತ್ತಿತ್ತು. ಅಲ್ಲೇ ಬದಿಯಲ್ಲಿ ಎಳನೀರಿನ ರಾಶಿ ಒಂದನ್ನು ಕಂಡೆ. ರಸ್ತೆಯ ಬಲಭಾಗದಲ್ಲಿ ಇದ್ದ ಎಳನೀರಿನ ರಾಶಿಯ ಹಿಂದೆ ಒಂದು ದೊಡ್ಡ ಕೊಡೆಯ ಅಡಿಯಲ್ಲಿ ಮಾರುವವ ನಿಂತಿದ್ದಾನೆ. ಎಳನೀರು ರಾಶಿಯ ಮುಂದೆ ರಸ್ತೆಯನ್ನು, ಒಂದೆರಡು ಬಕೆಟ್ ನೀರಿನಲ್ಲಿ ಒದ್ದೆ ಮಾಡಿದ್ದಾನೆ. ಇಲ್ಲದಿದ್ದರೆ ಎಳನೀರು ಒಣಗಿ ಬೇಗ ತೆಂಗಿನಕಾಯಿ ಆಗಬಹುದು (ಅಷ್ಟು ಇದೆ ಬಿಸಿಯ ಕಾವು). ಎಳನೀರಿನ ರಾಶಿ ಕಂಡಾಗ ಮಣಿಕಂಠ ಅಣ್ಣ ನೆನಪಾದರು. 

ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯ, ಗಡಿ ಭದ್ರತಾ ಪಡೆಯಲ್ಲಿ ವಿಡಿಯೋಗ್ರಾಫರ್ ಆಗಿ ಒಂದು ತಿಂಗಳು ಕೆಲಸ ಮಾಡಿದ್ದೇನೆ. ಸಂಜೆ ಆರು ಕಾಲು ಸಮಯಕ್ಕೆ ನನ್ನ ಮನೆಯ ಕಡೆ ಬರುವ ಬಸ್ ಅದೊಂದು ದಿನ ತಪ್ಪಿ ಹೋಯಿತು. ಮತ್ತೆ ಇರುವ ಬಸ್ ತುಂಬಾ ತಡವಾಗಿದ್ದ ಕಾರಣ, ಭದ್ರತಾ ಕರ್ತವ್ಯದಲ್ಲಿರುವ PDO (Panchyat Development Officer), Police constable, Panchayat Clerk ಎಲ್ಲರೂ ಸೇರಿ, ಅದೇ ದಾರಿಯಲ್ಲಿ ಬರುವ ಯಾವುದಾದರೂ ಒಂದು ಗಾಡಿಯಲ್ಲಿ ನನ್ನನು ಹತ್ತಿಸಿ ಕಳುಹಿಸುವ ಆಲೋಚನೆ ಮಾಡಿದರು. ಒಂದೆರಡು ಕಾರು - ಬೈಕು ಬಂದರೂ ಕೂಡ, ಕೆಲವು ಸೀಟ್ ಇಲ್ಲದೆ ಮತ್ತು ಇನ್ನುಕೆಲವು ನನ್ನ ಊರಿನವರೆಗೆ ಹೋಗದೆ ಇರುವ ಕಾರಣ ಅವುಗಳನ್ನು ಸೀದಾ ಕಳುಹಿಸಲಾಯಿತು. ಸ್ವಲ್ಪ ಹೊತ್ತಿನಲ್ಲಿ ಮೈಸೂರು ಕಡೆಯಿಂದ ಕಾಸರಗೋಡು ಭಾಗಗಳಿಗೆ ಎಳನೀರನ್ನು ಪ್ರತಿದಿನ ಸಾಗಿಸುವ ಒಂದು ಟೆಂಪೋ ಗಾಡಿ ಬಂತು. ಪಿಕ್ಕ್ಅಪ್ ನಷ್ಟು ಸಣ್ಣದೂ ಅಲ್ಲ, ಲಾರಿ ಅಷ್ಟು ದೊಡ್ಡದೂ ಅಲ್ಲ ಎನ್ನುವಂತಹ ಸಾಧಾರಣ ಒಂದು ಗಾಡಿ. "ಬಾ... ನನ್ನದೂ ಅದೇ ದಾರಿ, ನೀನು ಇಳಿಯಬೇಕಾದಲ್ಲಿ ಇಳಿದುಬಿಡು.." ಎಂದ ಕೂಡಲೇ ಹತ್ತಿ ಕುಳಿತೆ.

ಮಣಿಕಂಠ ಅಣ್ಣ ಮಲಯಾಳಂ ಭಾಷೆ ಮಾತನಾಡುವ ಅವಿದ್ಯಾವಂತ ಕಾಸರಗೋಡು ನಿವಾಸಿ. ಹೆಂಡತಿ ಬ್ಯಾಂಕ್ ಮ್ಯಾನೇಜರ್. ಮ್ಯಾನೇಜರ್ ಅನ್ನು ಮದುವೆ ಆದದ್ದೋ... ಮದುವೆ ಆಗಿ ಮ್ಯಾನೇಜರ್ ಮಾಡಿದ್ದೋ ಗೊತ್ತಿಲ್ಲ. ವಿದ್ಯಾವಂತ ಮಕ್ಕಳು ಇಬ್ಬರು ಇಂಜಿನಿಯರಿಂಗ್ ಪೂರ್ತಿ ಮಾಡಿ ಅದಾವುದೋ ಕಂಪನಿಯಲ್ಲಿ ಕೆಲಸದಲ್ಲಿ ಇದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆಯ ಜವಾಬ್ದಾರಿಗಳನ್ನು ಮುಗಿಸುವವರೆಗೆ ಮನೆಯ ಯಜಮಾನ ಮಣಿಕಂಠ ಅಣ್ಣ, ಲಾರಿ ಡ್ರೈವರ್ ಕೆಲಸದ ಮೂಲಕ ಗಳಿಸಿದ ಹಣವೇ ಆದಾಯದ ಮೂಲ. ನಿತ್ಯದ ಕೆಲಸವನ್ನು ನಿತ್ಯನೂತನವಾಸಿಸುವ, ಕೆಲಸದಲ್ಲಿ ಕೈಲಾಸವನ್ನು ಕಂಡು ನಿಷ್ಠೆ ಮತ್ತು ಉತ್ಸಾಹದಿಂದ ಮುಂದುವರಿಯುವ ಅವರದು ಆಕರ್ಷಕ ಬಾಳು. ದಿನವಿಡೀ ಕುಳಿತು ಬೆನ್ನು ನೋವು ಸೊಂಟ ನೋವು ಔದಾಸೀನ್ಯ ಎಲ್ಲಾ ಇದ್ದೇ ಇದೆ. ಹೆವಿ ವೈಕಲ್ ಡ್ರೈವರ್ ಆಗಿ ದೊಡ್ಡ ದೊಡ್ಡ ಹಳೆಯ ಇಂಜಿನ್ ಗಾಡಿಗಳನ್ನು ಓಡಿಸಿ ಪಳಗಿದವರು ಅವರು. ದೂರದ ಊರಿಗೆ ಸರಕು ಸಾಗಿಸುವುದಾದರೆ ವಾರಾಂತ್ಯದಲ್ಲೇ ಮತ್ತೆ ಮನೆಗೆ ಬರಲು ಸಾಧ್ಯವಾಗುವುದು. ಪ್ರಯಾಣದ ಆಯಾಸ, ದೇಹದ ನೋವುಗಳು ಎಲ್ಲವನ್ನೂ ಮರೆತು ಪ್ರಫುಲ್ಲ ವದನದಿಂದ ಮನೆಯವರೊಂದಿಗೆ ಒಡನಾಟ. ಯೌವ್ವನದ ಉತ್ಸಾಹದಲ್ಲಿ ಮತ್ತು ಸಾಂಸಾರಿಕ ಒತ್ತಡಗಳ ಮಧ್ಯೆ, ಮಾಡಲೇ ಬೇಕಾಗಿ ಬಂದ ಕರ್ತವ್ಯ - ಈ ಲಾರಿ ಡ್ರೈವರ್ ಕೆಲಸ.

ಈಗ ಅವಶ್ಯಕತೆ ಎನೂ ಇಲ್ಲ ಬ್ಯಾಂಕ್ ಮ್ಯಾನೇಜರ್ ಹೆಂಡತಿ ಮತ್ತು ಕಂಪೆನಿ ಕೆಲಸದ ಮಕ್ಕಳು ಕುಟುಂಬದ ಬೆನ್ನೆಲುಬಾಗಿ ಆಧಾರ ನೀಡಿದ ಮಣಿಕಂಠ ಅಣ್ಣನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ಸುಮ್ಮನೆ ಕುಳಿತುಕೊಳ್ಳಲು ಅವರಿಗೆ ಮನಸ್ಸಿಲ್ಲ. ಅವರೇ ಹೇಳುವಂತೆ, "ಪಣಿ ಎಡುತ್ತಾಲ್ ಅಸುಗಂ ಕೊರವ್, ವೆರುದೇ ಇರುನ್ನಾಲ್ ತುರುಂಬಿಚ್ ಪೊಗುಂ" (ಕೆಲಸ ಮಾಡುತ್ತಾ ಇದ್ದರೆ ಕಾಯಿಲೆಗಳು ಕಡಿಮೆ ಮತ್ತು ಸುಮ್ಮನೆ ಕುಳಿತರೆ ಕುಂಬಾಗಿ ಹೋಗುತ್ತೇವೆ). ಮಕ್ಕಳ ಒತ್ತಾಯದ ಮೇರೆಗೆ ಲಾರಿ ಡ್ರೈವರ್ ಕೆಲಸ ಬಿಟ್ಟು, ಖಾಯಂ ಸ್ಥಳಗಳಿಗೆ ಹೋಗಿ ಬರುವ ಬೊಂಡದ ಲಾರಿಯ ಡ್ರೈವರ್ ಕೆಲಸ ಮಾಡುತ್ತಾ ಇದ್ದರೆ. ವಯಸ್ಸು ಆಗುವುದು ಸಾಮಾನ್ಯ, ಆದರೆ ಸಣ್ಣ ಪುಟ್ಟ ಗಂಟು ನೋವು - ಸೊಂಟ ನೋವುಗಳಿಗೆ ಶರಣಾಗಿ, ಮನೆಯಲ್ಲಿ ಹೊದ್ದು ಮಲಗಿದರೆ, ತಿನ್ನಬೇಕಾದ ಮದ್ದಿನ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಸಾಧ್ಯ ಆದಷ್ಟು ಕೆಲಸ ಮಾಡುತ್ತಿದ್ದರೆ, ಅನಗತ್ಯ ಯೋಚನೆಗಳೂ ಇಲ್ಲ... ಬೋರ್ ಆಗುತ್ತದೆ ಎನ್ನುವ ಬೇಸರವೂ ಇಲ್ಲ. 

ನನ್ನ ಊರು ಸಮೀಪಿಸಿದಂತೆ ನಾನೇ ಅವರಿಗೆ ನೆನಪಿಸಿದೆ. ಅವರ ಮಾತುಗಳು ಉತ್ಪ್ರೇಕ್ಷೆಯೂ ಇಲ್ಲದ ಒತ್ತಡವೂ ಅಲ್ಲದ ಒಡನಾಡಿಯ ಜೊತೆಗಿನ ಹರಟೆ ಅಂತೆ ಅನಿಸಿತ್ತು.

ಇಳಿ ವಯಸ್ಸಿನಲ್ಲೂ ಇಂತಹ ಹೊಸ ಚೈತನ್ಯ ತುಂಬುವ ಹಾಗೆ ಬದುಕುವ ಇಂತವರಿಂದ ನಮ್ಮ ನಿಮ್ಮಂತವರು ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

2 comments

  1. Nice one
  2. 🤍
© ರಸ ಮಥನ. All rights reserved. Distributed by ASThemesWorld