Contact Angle Touch Studio for your Blog Design. Visit Site
Posts

Catering ಮಿತ್ರ ಜೋಯಿಸರು


Side Work ಮಾಡಿ ಸ್ವಲ್ಪ ಹಣ ಗಳಿಸುವುದು ನಮ್ಮ ಜೀವನಕ್ಕೆ ಖಂಡಿತವಾಗಿಯೂ ಉಪಯೋಗಕ್ಕೆ ಬರುತ್ತದೆ. ನನ್ನ ವಿಷಯದಲ್ಲಿಯೂ side workನಿಂದ ಗಳಿಸಿದ ಹಣ ಜೀವನದಲ್ಲಿ ತುಂಬಾ ಸಹಾಯ ಮಾಡಿದೆ. ನಾನು degree ಕೊನೆಯ ವರ್ಷದಲ್ಲಿದ್ದಾಗ, ನನ್ನ ತಂದೆ-ತಾಯಿಯ ಒತ್ತಾಯದ ಮೇರೆಗೆ ಆಹಾರ ಬಡಿಸುವ catering ಕೆಲಸಕ್ಕೆ ಸೇರಲು ನಿರ್ಧರಿಸಿದ್ದೆ.

ನನ್ನ ತಾಯಿಯ ಕಡೆಯ ಸಂಬಂಧಿಕರು ಮತ್ತು ತಂದೆಯ ಕಡೆಯ ಸಂಬಂಧಿಕರಲ್ಲಿ ಅನೇಕರು ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ, ನಮಗೆ side work ಹುಡುಕಲು ಹೆಚ್ಚು ಕಷ್ಟವಾಗಲಿಲ್ಲ. ಪುತ್ತೂರಿನ ಒಬ್ಬರು ವಿವಿಧ ಕಾರ್ಯಕ್ರಮಗಳಲ್ಲಿ ಊಟ ಬಡಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದರು ಮತ್ತು ಅನೇಕ ವಿದ್ಯಾರ್ಥಿಗಳಿಗೆ ಅಲ್ಲಿ ಕೆಲಸ ಮಾಡುವ ಅವಕಾಶವನ್ನೂ ನೀಡುತ್ತಿದ್ದರು ಎಂಬ ಮಾಹಿತಿ ನಮಗೆ ತಿಳಿಯಿತು. ಈ ವಿಷಯ ತಿಳಿದ ನನ್ನ ತಮ್ಮ ಮೊದಲು catering ಕೆಲಸಕ್ಕೆ ಸೇರಿಕೊಂಡ. ಆದರೆ ಆ ಸಮಯದಲ್ಲಿ ಕಾಲೇಜಿನ ಕೆಲಸಗಳ ಒತ್ತಡ ಹೆಚ್ಚಿದ್ದರಿಂದ ನನಗೆ ತಕ್ಷಣವೇ ಸೇರಲು ಸಾಧ್ಯವಾಗಲಿಲ್ಲ. ನಂತರ ಸ್ವಲ್ಪ ಸಮಯ ಕಳೆದ ಮೇಲೆ, ನಾನೂ ಕೂಡ ಅವನೊಂದಿಗೆ ಸೇರಿಕೊಂಡೆ. ನಮ್ಮ ಮನೆಯಲ್ಲಿ ಚಿಕ್ಕ ವಯಸ್ಸಿನಿಂದಲೇ ಮನೆ ಒರೆಸುವುದು, ಗುಡಿಸುವುದು, ನಾವು ಊಟ ಮಾಡಿದ ಪಾತ್ರೆಗಳನ್ನು ನಾವೇ ತೊಳೆದು ಇಡುವುದು ಇವೆಲ್ಲವನ್ನೂ ಅಜ್ಜಿಯ ಒತ್ತಾಯದ ಮೇರೆಗೆ ಕಲಿಯಲೇಬೇಕಾಗಿತ್ತು. ಹಾಗಾಗಿ function ಅಲ್ಲಿ ಊಟ ಬಡಿಸುವುದು, ಊಟ ಮಾಡಿದ ಎಲೆಗಳನ್ನು ತೆಗೆಯುವುದು ಇವೆಲ್ಲವೂ ನಮಗೆ ಅಷ್ಟೇನೂ ಕಷ್ಟವೆನಿಸಲಿಲ್ಲ. ಆದರೆ, ಅದರ ಜೊತೆಗೆ ನಾವು ಕಲಿಯಬೇಕಾಗಿದ್ದ ಮತ್ತೊಂದು ಮುಖ್ಯವಾದ ಕೆಲಸವೆಂದರೆ ತರಕಾರಿ ಕತ್ತರಿಸುವುದು. ತರಕಾರಿ ಕತ್ತರಿಸುವುದೂ ಒಂದು ಕಲೆಯೇ. ಯಾವ ಗಾತ್ರದಲ್ಲಿ, ಯಾವ ರೀತಿಯಲ್ಲಿ ತರಕಾರಿಗಳನ್ನು ಕತ್ತರಿಸಿದರೆ ಅಡುಗೆಗೆ ಅನುಕೂಲವಾಗುತ್ತದೆ ಎಂಬುದನ್ನು ಕಲಿಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೈಯಲ್ಲಿರುವ ಚಾಕು ತರಕಾರಿಯನ್ನು ಮಾತ್ರ ಕತ್ತರಿಸುತ್ತದೆ ಎಂಬ ಖಾತರಿಯೂ ಇಲ್ಲ! ಸ್ವಲ್ಪ ಎಚ್ಚರ ತಪ್ಪಿದರೂ ಕೈಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಆದರೆ, ಗಮನವಿಟ್ಟು, ಹಿರಿಯರು ಹೇಳಿಕೊಟ್ಟದ್ದನ್ನು ಸರಿಯಾಗಿ ಪಾಲಿಸುತ್ತಾ ಹೋದಾಗ ಮಾತ್ರ ಯಾವುದೇ ವಿದ್ಯೆಯನ್ನು ಕಲಿಯಲು ಸಾಧ್ಯ. ಒಬ್ಬ ಉತ್ತಮ ಗುರು ಮತ್ತು ಕಲಿಯಲೇಬೇಕು ಎನ್ನುವ ಛಲ ಈ ಎರಡೂ ಇದ್ದರೆ ಯಾವುದೂ ಅಸಾಧ್ಯವಲ್ಲ. ನಿಜ ಹೇಳಬೇಕೆಂದರೆ, ಒಂದು full duty ಕೆಲಸ ಮಾಡಿದರೆ ಒಂದರಿಂದ ಎರಡು ಸಾವಿರದ ವರೆಗೆ ಸಂಪಾದಿಸಬಹುದು ಎಂಬ ಒಂದೇ ಒಂದು ವಿಚಾರ ಸಾಕಾಗಿತ್ತು. 'ಎಷ್ಟೇ ಕಷ್ಟವಾದರೂ ಸರಿ, ಈ ಕೆಲಸವನ್ನು ಕಲಿಯಲೇಬೇಕು' ಅಷ್ಟೇ...

ಕಲಿತ ವಿದ್ಯೆ ಜೀವನದಲ್ಲಿ ಅನೇಕ ಅವಕಾಶಗಳನ್ನು ತೆರೆದಿಡುತ್ತದೆ. ನಾವು ಕಲಿತಿರುವುದರ ಸದುಪಯೋಗ ಯಾವುದೋ ಒಂದು ಹಂತದಲ್ಲಿ ಖಂಡಿತವಾಗಿಯೂ ಆಗಿಯೇ ಆಗುತ್ತದೆ. ಕೆಲವೊಮ್ಮೆ ನಾವು ಕಲಿತ ವಿದ್ಯೆ ನಮಗೆ ಹಣ ಸಂಪಾದಿಸಲು ಸಹಾಯ ಮಾಡಬಹುದು, ಇನ್ನು ಕೆಲವೊಮ್ಮೆ ಅದು ಜೀವನವನ್ನು ಅರ್ಥಮಾಡಿಕೊಳ್ಳಲು ಬೇಕಾದ ಅನುಭವಗಳನ್ನು ನೀಡಬಹುದು. Degree ಮುಗಿಸಿದ ನಂತರ ಸುಮಾರು ಒಂದು ವರ್ಷ ನಾನು ವಿವಿಧ courceಗಳನ್ನು ಮಾಡುತ್ತಾ, ಪರೀಕ್ಷೆಗಳನ್ನು ಬರೆಯುತ್ತಾ, ನನ್ನ ಜೀವನದ ಸರಿಯಾದ ದಾರಿ ಯಾವುದು ಎಂಬ ಹುಡುಕಾಟದಲ್ಲಿದ್ದೆ. ಆದರೆ ಆ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ಇರಲಿಲ್ಲ. ಕಲಿಯುವುದು, ಪರೀಕ್ಷೆ ಬರೆಯುವುದು, ಮನೆಯ ಕೆಲಸಗಳನ್ನು ಮಾಡುವುದು ಹೀಗೆ ದಿನಗಳು ಕಳೆಯುತ್ತಿದ್ದವು. ಇವೆಲ್ಲದರ ನಡುವೆ ಉಳಿದ ಸಮಯದಲ್ಲಿ ಹಣ ಸಂಪಾದಿಸಲು catring ಕೆಲಸ ನನಗೆ ಒಂದು ಉತ್ತಮ ಮಾರ್ಗವಾಗಿ ಒದಗಿಬಂತು. ಹಣ ಸಂಪಾದಿಸುವುದನ್ನು ಮತ್ತು ಹೊಸ ಕೆಲಸವೊಂದನ್ನು ಕಲಿಯುವುದನ್ನು ಬದಿಗಿಟ್ಟರೆ, catering ಅನುಭವದಿಂದ ನನಗೆ ಸಿಕ್ಕ ಇನ್ನೂ ಅನೇಕ ಲಾಭಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ನನ್ನ ಸುತ್ತಮುತ್ತಲಿನ ಹಲವು ಊರುಗಳನ್ನು ನೋಡುವ, ಅಲ್ಲಿಗೆ ಹೋಗುವ ದಾರಿಗಳನ್ನು ತಿಳಿದುಕೊಳ್ಳುವ ಮತ್ತು ಅಲ್ಲಿನ ಜನರ ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸುವ ಅವಕಾಶ. ಅಷ್ಟೇ ಅಲ್ಲ, ವಿವಿಧ ಜನರೊಂದಿಗೆ ಬೆರೆಯುವ ಅವಕಾಶವೂ ನನಗೆ ದೊರೆಯಿತು. ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದಾಗ ನಮ್ಮನ್ನು ಗಮನಿಸುವ ರೀತಿಯೇ ಬೇರೆ. 'ಇವನು ಯಾರ ಮಗ?', 'ಇವನ ಕುಟುಂಬ ಹೇಗಿದೆ?', 'ಇವನ ಬಳಿ ಎಷ್ಟಿದೆ?', 'ಇವನ ಬಳಿ ಏನೂ ಇಲ್ಲವಾ!' ಇತ್ಯಾದಿ ವಿಚಾರಗಳ ಆಧಾರದ ಮೇಲೆ ನಮ್ಮನ್ನು ಅಳೆಯುವವರು ಅನೇಕರಿರುತ್ತಾರೆ. ಆದರೆ, ಅದೇ ಕಾರ್ಯಕ್ರಮಕ್ಕೆ ಅಡುಗೆ ಕೆಲಸದವನಾಗಿ ಅಥವಾ catring team ಅಲ್ಲಿ ಕೆಲಸಕ್ಕೆ ಹೋದಾಗ ಪರಿಸ್ಥಿತಿ ಸ್ವಲ್ಪ ಬೇರೆಯೇ ಇರುತ್ತದೆ. ಅಲ್ಲಿ ನಮ್ಮನ್ನು ಗಮನಿಸುವವರ ಸಂಖ್ಯೆ ಕಡಿಮೆ. ಗಮನಿಸುವವರು ಇದ್ದರೂ, ನಮ್ಮ ಹಿನ್ನೆಲೆಯನ್ನು ತಿಳಿದುಕೊಳ್ಳುವ ಕುತೂಹಲಕ್ಕಿಂತ ನಮ್ಮೊಂದಿಗೆ ಸಹಜವಾಗಿ ಮಾತನಾಡುವವರೇ ಹೆಚ್ಚು. ರಾಜಕೀಯದಿಂದ ಹಿಡಿದು ಮಳೆ, ಬೆಳೆ, ಶಿಕ್ಷಣ, ಉದ್ಯೋಗ ಹೀಗೆ ಅನೇಕ ವಿಷಯಗಳ ಕುರಿತು ಅವರು ಮಾತನಾಡುತ್ತಾರೆ. ಇವೆಲ್ಲಕ್ಕಿಂತಲೂ ವಿಶೇಷವೆಂದರೆ, ಕೆಲವರು ತಮ್ಮ ಮನೆಯ ಕಷ್ಟಗಳನ್ನು, ಅನುಭವಿಸಿದ ನಷ್ಟಗಳನ್ನು, ಕುಟುಂಬದವರ ವಿರೋಧದ ನಡುವೆಯೂ ತಾವು ಮಾಡಿದ ಸಾಧನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ತಮ್ಮ ಜೀವನದ ಏರಿಳಿತಗಳನ್ನು ಹೇಳಿಕೊಳ್ಳಲು ಒಬ್ಬ ವ್ಯಕ್ತಿ ಬೇಕಾಗುತ್ತದೆ. ಆ ಸಂದರ್ಭದಲ್ಲಿ ನಾವು ಅವರಿಗೆ ಸಿಗುವ ವ್ಯಕ್ತಿಗಳಾಗಿರುತ್ತೇವೆ. ಬಹುಶಃ ಇಂದು ಪರಿಚಯವಾಗಿ ನಾಳೆಯೇ ದೂರವಾಗುವ ನಮ್ಮಂಥವರ ಮುಂದೆ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಲು ಅವರಿಗೆ ಯಾವುದೇ ಮುಜುಗರವಿರುವುದಿಲ್ಲ. ನಾವು ಅವರ ಮಾತುಗಳನ್ನು ಎಲ್ಲೆಡೆ ಹೇಳಿಕೊಂಡು ತಿರುಗುವುದಿಲ್ಲ ಎಂಬ ನಂಬಿಕೆ ಅವರಿಗಿರಬಹುದೇನೋ! ಅಥವಾ ನಮ್ಮನ್ನು ಮತ್ತೆ ಭೇಟಿಯಾಗುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕೆ ಅವರು ಮುಕ್ತವಾಗಿ ಮಾತನಾಡುತ್ತಿರಬಹುದೇನೋ!. ಆದರೆ, ಇಂತಹ ಅನೇಕ ಸಂಭಾಷಣೆಗಳು ನನಗೆ ಜನರನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ.

ಆದರೆ, ಎಲ್ಲ ಅನುಭವಗಳೂ ಇಷ್ಟು ಸುಂದರವಾಗಿರಲಿಲ್ಲ. ಎಲ್ಲರೂ ನಮ್ಮನ್ನು ಗೌರವದಿಂದಲೂ ಆತ್ಮೀಯತೆಯಿಂದಲೂ ಕಾಣುತ್ತಾರೆ ಎಂದು ಹೇಳಲಾಗುವುದಿಲ್ಲ. ಕೆಲವು ಮನೆಗಳಲ್ಲಿ ಕೆಲಸಕ್ಕೆ ಬಂದವರನ್ನು ಕೀಳಾಗಿ ಕಾಣುವ ಸಂದರ್ಭಗಳನ್ನೂ ಎದುರಿಸ ಬೇಕಾಗುತ್ತದೆ. ಊಟ ಮಾಡಿದ ಎಲೆಗಳನ್ನು ತೆಗೆಯುವುದು ಕಷ್ಟದ ಕೆಲಸವಲ್ಲ. ಆದರೆ, ಅದನ್ನು ಮಾಡಲು ಹೇಳುವ ರೀತಿಯೇ ಕೆಲವೊಮ್ಮೆ ಮನಸ್ಸಿಗೆ ನೋವುಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಮಲಗಲು ಕೇವಲ ಹಳೆಯ ದಿನಪತ್ರಿಕೆಗಳನ್ನು ಕೊಟ್ಟದ್ದೂ ಇದೆ. ಇನ್ನು ಕೆಲವು ಕಡೆ ರಾತ್ರಿ 1 ಗಂಟೆಯಿಂದ ಬೆಳಗಿನ 3 ಗಂಟೆಯವರೆಗೆ ಮಾತ್ರ ಮಲಗಲು ಬಿಟ್ಟ ಅನುಭವಗಳೂ ಇವೆ. ದಿನವಿಡೀ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ಬೇಕಾಗಿದ್ದರೂ, ಸಿಕ್ಕಷ್ಟು ಸಮಯದಲ್ಲೇ ನಿದ್ರೆ ಮಾಡಿ ಮತ್ತೆ ಕೆಲಸಕ್ಕೆ ಸಿದ್ಧರಾಗಬೇಕಾಗುತ್ತಿತ್ತು. ಇವೆಲ್ಲವೂ catring ಕೆಲಸದ ಮೂಲಕ ನನಗೆ ದೊರೆತ ಅನುಭವಗಳ ಒಂದು ಭಾಗ. ಇಂತಹ ಘಟನೆಗಳು ಕೆಲವೊಮ್ಮೆ ಮನಸ್ಸಿಗೆ ನೋವುಂಟುಮಾಡಿದರೂ, ಅವು ಜೀವನದಲ್ಲಿ ಮರೆಯಲಾಗದ ನೆನಪುಗಳಾಗಿ ಉಳಿಯುತ್ತವೆ. ನಮ್ಮನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಮಾತ್ರವಲ್ಲ, ನಾವು ಮುಂದೆ ಇತರರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನೂ ಇವು ಕಲಿಸುತ್ತವೆ.

ಈ ಎಲ್ಲ ಅನುಭವಗಳ ನಡುವೆ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ಪಾತ್ರವೂ ಬಹಳ ಮುಖ್ಯ. ಕಷ್ಟದ ಸಮಯದಲ್ಲಿ ಜೊತೆಗಿದ್ದವರು, ಕೆಲಸದ ನಡುವೆ ತಮಾಷೆ ಮಾಡುತ್ತಾ ಆಯಾಸ ಮರೆಸಿದವರು, ಪರಸ್ಪರ ಸಹಾಯ ಮಾಡಿಕೊಂಡವರು ಇವರೆಲ್ಲರೂ ವಿಶೇಷ ಸ್ಥಾನ ಪಡೆದುಕೊಳ್ಳುತ್ತಾರೆ. Catering ಕೆಲಸ ನನಗೆ ಕೇವಲ ಹಣ ಸಂಪಾದಿಸುವ ಮಾರ್ಗವಾಗಿರಲಿಲ್ಲ. ಅದು ಜನರನ್ನು ಅರ್ಥಮಾಡಿಕೊಳ್ಳುವ, ವಿವಿಧ ಜೀವನಗಳನ್ನು ಹತ್ತಿರದಿಂದ ನೋಡುವ, ಕಷ್ಟಗಳನ್ನು ಎದುರಿಸುವ ಮತ್ತು ಮನುಷ್ಯರನ್ನು ಅವರ ಹಿನ್ನೆಲೆಯ ಆಧಾರದ ಮೇಲೆ ಅಳೆಯಬಾರದು ಎಂಬುದನ್ನು ಕಲಿಸಿದ ಒಂದು ಜೀವನಪಾಠವಾಗಿತ್ತು.

ನಮ್ಮ ಕ್ಯಾಟರಿಂಗ್ ಕೆಲಸದ ಅನುಭವಗಳಲ್ಲಿ ವಿಶೇಷ ಸ್ಥಾನ ಪಡೆದ ಕೆಲವರಿದ್ದಾರೆ. ಅವರಲ್ಲಿ ಒಬ್ಬರು ನಮಗೆ ವಿಚಿತ್ರವೆನಿಸಿ, ಅಚ್ಚರಿಯುಂಟುಮಾಡಿ, ಗೌರವಕ್ಕೆ ಪಾತ್ರರಾಗಿ, “ಇದು ಹೇಗೆ ಸಾಧ್ಯ?” ಎಂಬ ಪ್ರಶ್ನೆಯನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿದ ವ್ಯಕ್ತಿ  ಸತ್ಯಣ್ಣ.

ಸತ್ಯಣ್ಣ ಎಂಬುದು ಅವರ ಹೆಸರಾಗಿದ್ದರೂ, ಅವರು ಅನೇಕರಿಗೆ ಪರಿಚಿತರಾಗಿರುವುದು ಜೋಯಿಸರು ಎಂದೇ. ಪುತ್ತೂರಿನ ಸಮೀಪವಿರುವ ಕಾವು ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರು, ತಮ್ಮ ಕುಟುಂಬದೊಂದಿಗೆ ಅನೇಕ ಕ್ಯಾಟರಿಂಗ್ ಕಾರ್ಯಕ್ರಮಗಳಿಗೆ ಹೋಗಿ ಕೆಲಸ ಮಾಡಿದ ಅನುಭವ ಹೊಂದಿದವರು. ಹೀಗಾಗಿ ಅನೇಕರಿಗೆ ಅವರು ಕಾವು ಜೋಯಿಸರು ಎಂದೇ ಚಿರಪರಿಚಿತರು. ಇಷ್ಟೆಲ್ಲ ಜನರ ನಡುವೆ ಅವರನ್ನು ನನ್ನ ಈ ಕಥೆಯ ನಾಯಕನನ್ನಾಗಿ ಮಾಡಿದ್ದು ಏಕೆ ಎಂಬುದಕ್ಕೆ ಕೆಲವು ವಿಶೇಷ ಕಾರಣಗಳಿವೆ. ಆರಂಭದಲ್ಲಿ ಅವರನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದ ಭಾವನೆಗಳು ಬೇರೆಯೇ ಆಗಿದ್ದವು. “ಈ ಅಜ್ಜನಿಗೆ ಇನ್ನೂ ಹಣದ ಆಸೆ ಬಿಟ್ಟಿಲ್ಲವೇ? ಈ ವಯಸ್ಸಿನಲ್ಲಿ ಇದೆಲ್ಲ ಯಾಕೆ ಬೇಕು? ಇವರು ಬಂದರೆ ಎಷ್ಟು ಕೆಲಸ ಮಾಡಬಹುದು?” ಎಂಬಿತ್ಯಾದಿ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದವು. ಕೆಲವೊಮ್ಮೆ ಇವುಗಳನ್ನು ನಮ್ಮ ಜೊತೆಗಿದ್ದ ಹುಡುಗರೊಂದಿಗೆ ಹಂಚಿಕೊಂಡದ್ದೂ ಇದೆ.‌ಆದರೆ, ಒಬ್ಬ ವ್ಯಕ್ತಿಯನ್ನು ಹೊರನೋಟದಿಂದ ಅಳೆಯುವುದು ಎಷ್ಟು ತಪ್ಪಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಕ್ರಮೇಣ ನಮ್ಮ ಜೊತೆಗಿದ್ದ ಹುಡುಗರು ಒಬ್ಬೊಬ್ಬರಾಗಿ ತಮ್ಮ ಕೆಲಸಗಳಲ್ಲಿ ಮುಂದುವರಿದು catring ಕೆಲಸವನ್ನು ಬಿಟ್ಟರು. ಇನ್ನು ಕೆಲವರು ತಮ್ಮ ವೈಯಕ್ತಿಕ ಆಸಕ್ತಿಗಳು ಮತ್ತು ಇತರ ಕಾರಣಗಳಿಂದ ದೂರವಾದರು. ಆದರೆ ಜೋಯಿಸರು ಮಾತ್ರ ಮೊದಲಿನಂತೆಯೇ ಬರುತ್ತಿದ್ದರು. ಸಮಯಕ್ಕೆ ಸರಿಯಾಗಿ, ಕೈಯಲ್ಲಿ ತಮ್ಮ ಜೋಳಿಗೆ ಮತ್ತು ಬೀಡಿಯನ್ನು ಹಿಡಿದುಕೊಂಡು, ಕುಳ್ಳಗಿನ ಶರೀರದ ಮೇಲೆ ಹೊಟ್ಟೆಗೆ ಬಿಳಿ ಬಟ್ಟೆಯನ್ನು ಕಟ್ಟಿಕೊಂಡು, ತಮ್ಮದೇ ಆದ ಲವಲವಿಕೆಯ style ಅಲ್ಲಿ ನಗುನಗುತ್ತಾ ಬರುವವರು ಅವರು. ಕೆಲವೊಮ್ಮೆ ಅವರೊಂದಿಗೆ ಊಟ ಮಾಡುವಾಗ ಮಾತನಾಡುವ ಅವಕಾಶ ಸಿಗುತ್ತಿತ್ತು. ಆ ಮಾತುಕತೆಗಳು ನಿಜಕ್ಕೂ ನನಗೆ ತುಂಬಾ ಖುಷಿ ನೀಡುತ್ತಿದ್ದವು. ಒಮ್ಮೆ ಅವರಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿದೆ ಎಂಬುದು ತಿಳಿದಾಗ ನನ್ನ ಮುಖದಲ್ಲಿ ಮೂಡಿದ ಆಶ್ಚರ್ಯವನ್ನು ವಿವರಿಸಲು ಸಾಧ್ಯವಿಲ್ಲ.

ಎಪ್ಪತ್ತೈದು ವರ್ಷ!

ಆ ವಯಸ್ಸಿನಲ್ಲಿ ಸಾಮಾನ್ಯವಾಗಿ ಅನೇಕರು ಕೆಲಸದ ಒತ್ತಡಗಳಿಂದ ದೂರವಿದ್ದು, ವಿಶ್ರಾಂತಿಯ ಜೀವನವನ್ನು ಬಯಸುತ್ತಾರೆ. ಆದರೆ ಜೋಯಿಸರು ಮಾತ್ರ ನಮ್ಮಂತಹ ಯುವಕರೊಂದಿಗೆ ಕೆಲಸ ಮಾಡುತ್ತಿದ್ದರು. ಭಾರವಾದ ಆಹಾರದ ಪಾತ್ರೆಗಳನ್ನು ಎತ್ತಿಕೊಂಡು, ನಗುನಗುತ್ತಾ ಜನರಿಗೆ ಊಟ ಬಡಿಸುತ್ತಿದ್ದರು. ಅವರ ಚಲನವಲನ, ಕೆಲಸದ ವೇಗ ಮತ್ತು ಮುಖದಲ್ಲಿದ್ದ ಉತ್ಸಾಹವನ್ನು ಕಂಡಾಗ ನಿಜಕ್ಕೂ young age ಇರುವ ನಮಗೆ ನಾಚಿಕೆ ಆಗಬೇಕು. ಅವರಿಗೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇರಲಿಲ್ಲ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಅಷ್ಟೇನೂ ಕಷ್ಟದಲ್ಲಿರಲಿಲ್ಲ. ಮಗನಿಗೆ ಕೆಲಸವಿತ್ತು, ಮಗಳಿಗೂ ಮದುವೆಯಾಗಿತ್ತು. ಕುಟುಂಬದವರು, “ಅಪ್ಪಾ, ನೀವು ಇನ್ನು ಮುಂದೆ ಕೆಲಸಕ್ಕೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ವಿಶ್ರಾಂತಿ ಪಡೆಯಿರಿ” ಎಂದು ಹೇಳಬಹುದಾದ ಪರಿಸ್ಥಿತಿ ಅವರಿಗಿತ್ತು. ಹಾಗಿದ್ದರೂ ಅವರು ಕೆಲಸಕ್ಕೆ ಬರುತ್ತಿದ್ದರು. ಅವರನ್ನು ಗಮನಿಸಿದಾಗ ನನಗೆ ಅರ್ಥವಾದ ಒಂದು ವಿಚಾರವೆಂದರೆ, ಅವರು ಕೆಲಸ ಮಾಡುತ್ತಿದ್ದದ್ದು ಕೇವಲ ಹಣಕ್ಕಾಗಿ ಮಾತ್ರವಲ್ಲ. ತಮ್ಮಿಂದ ಸಾಧ್ಯವಿರುವವರೆಗೆ ದುಡಿಯಬೇಕು, ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಳ್ಳಬೇಕು ಎಂಬ ಮನೋಭಾವ ಅವರಲ್ಲಿತ್ತು. ದೇಹವನ್ನು ಯಾವಾಗಲೂ ಕುಳಿತುಕೊಳ್ಳಲು ಬಿಟ್ಟರೆ ಅದು ಜಡವಾಗುತ್ತದೆ. ಒಮ್ಮೆ ಸೋಮಾರಿತನಕ್ಕೆ ಒಗ್ಗಿಕೊಂಡರೆ ಮತ್ತೆ ಚಟುವಟಿಕೆಯಿಂದ ಇರಲು ಕಷ್ಟವಾಗುತ್ತದೆ ಎಂಬುದನ್ನು ಅವರು ತಮ್ಮ ಜೀವನದ ಮೂಲಕವೇ ಅರ್ಥಮಾಡಿಕೊಂಡವರಂತೆ ನನಗೆ ಕಾಣುತ್ತಿದ್ದರು. ಅವರ ಆ ಲವಲವಿಕೆ, ಚುರುಕುತನ ಮತ್ತು ಕೆಲಸದ ಮೇಲಿನ ಆಸಕ್ತಿ ನಮ್ಮಂತಹ ಯುವಕರಿಗೂ ಒಂದು ಪಾಠವಾಗಿತ್ತು. ವಯಸ್ಸು ಹೆಚ್ಚಾದಂತೆ ಜೀವನೋತ್ಸಾಹ ಕಡಿಮೆಯಾಗಬೇಕೆಂದೇನೂ ಇಲ್ಲ ಎಂಬುದನ್ನು ಅವರು ತೋರಿಸಿಕೊಡುತ್ತಿದ್ದರು.

ಜೋಯಿಸರ ಬಗ್ಗೆ ನನಗೆ ಅಚ್ಚರಿ ಮೂಡಿಸಿದ ಮತ್ತೊಂದು ವಿಚಾರವೆಂದರೆ ಆಹಾರದ ಬಗ್ಗೆ ಅವರಿಗಿದ್ದ ತಿಳುವಳಿಕೆ ಮತ್ತು ಶಿಸ್ತು. ಊಟ ಮಾಡುವಾಗ ಅವರೊಂದಿಗೆ ಕೇಳಿದ ಪ್ರಶ್ನೆಗಳಿಗೆ ಅವರು ನೀಡುತ್ತಿದ್ದ ಉತ್ತರಗಳಲ್ಲಿ ಅನುಭವದ ಮಾತುಗಳಿರುತ್ತಿದ್ದವು. ಅವುಗಳನ್ನು ಕೇಳುವಾಗ ಹಿರಿಯರ ಜೀವನಾನುಭವದಿಂದ ಕಲಿಯಲು ಎಷ್ಟೊಂದು ವಿಷಯಗಳಿವೆ ಎಂಬುದು ನನಗೆ ತಿಳಿಯುತ್ತಿತ್ತು. ನಮ್ಮಲ್ಲಿ ಹಲವರಿಗೆ ಮಸಾಲೆ ಎಂದರೆ "ಗರಂ-ಮಸಾಲೆ" ಅಥವಾ ಚೆಕ್ಕೆ ಲವಂಗ ಏಲಕ್ಕಿ ಪುಡಿಗಳು ಮಾತ್ರ ನೆನಪಾಗಬಹುದು. ಆದರೆ ಜೋಯಿಸರು ಆಹಾರದ ವಿಚಾರವನ್ನು ಅದಕ್ಕಿಂತಲೂ ವಿಭಿನ್ನವಾಗಿ ನೋಡುತ್ತಿದ್ದರು. ಸಾರು, ಸಾಂಬಾರು ಮುಂತಾದ ದಿನನಿತ್ಯದ ಅಡುಗೆಗಳಲ್ಲಿ ಬಳಸುವ ಮೆಣಸು, ಕೊತ್ತಂಬರಿ ಹಾಗೂ ಇತರ ಮಸಾಲೆ ಪದಾರ್ಥಗಳ ಬಳಕೆಯ ಬಗ್ಗೆಯೂ ಅವರು ತಮ್ಮದೇ ಆದ ಅಭಿಪ್ರಾಯ ಹೊಂದಿದ್ದರು. ಇವುಗಳನ್ನು ಅತಿಯಾಗಿ ಬಳಸುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ನಂಬಿಕೆಯಾಗಿತ್ತು.

ಹೀಗಾಗಿ ಅವರು ಖಾರ, ಹುಳಿ, ಉಪ್ಪು ಮತ್ತು ಸಿಹಿಯನ್ನು ಬಹಳ ಮಿತವಾಗಿ ಸೇವಿಸುತ್ತಿದ್ದರು. ನಾಲಿಗೆಗೆ ರುಚಿ ನೀಡುವುದಕ್ಕಿಂತ ದೇಹಕ್ಕೆ ಅಗತ್ಯವಿರುವ ಆಹಾರವನ್ನು ಸೇವಿಸುವುದಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಇಲ್ಲಿ ಮುಖ್ಯವಾದದ್ದು ಅವರು ಏನು ತಿನ್ನುತ್ತಿದ್ದರು ಎಂಬುದಷ್ಟೇ ಅಲ್ಲ; ತಮಗೆ ಸರಿಯೆನಿಸಿದ ಆಹಾರ ಪದ್ಧತಿಯನ್ನು ಎಷ್ಟೊಂದು ಶಿಸ್ತಿನಿಂದ ಪಾಲಿಸುತ್ತಿದ್ದರು ಎಂಬುದು. ನಾವು ಇಂದು ರುಚಿಗಾಗಿ ಅನೇಕ ಪದಾರ್ಥಗಳನ್ನು ತಿನ್ನುತ್ತೇವೆ. ಕೆಲವೊಮ್ಮೆ ಹೊಟ್ಟೆ ತುಂಬಿದ ಮೇಲೂ ನಾಲಿಗೆಯ ಆಸೆಗಾಗಿ ತಿನ್ನುತ್ತೇವೆ. ಆದರೆ ಜೋಯಿಸರು ಆಹಾರವನ್ನು ನೋಡುವ ದೃಷ್ಟಿಕೋನವೇ ಬೇರೆ. ಆಹಾರವು ದೇಹಕ್ಕೆ ಶಕ್ತಿಯನ್ನು ನೀಡಬೇಕು, ಆರೋಗ್ಯವನ್ನು ಕಾಪಾಡಲು ನೆರವಾಗಬೇಕು ಎಂಬುದಕ್ಕೆ ಅವರು ಹೆಚ್ಚಿನ ಮಹತ್ವ ನೀಡುತ್ತಿದ್ದರು. ಅವರ ಆಹಾರ ಪದ್ಧತಿಯೇ ಎಲ್ಲರಿಗೂ ಸೂಕ್ತವೆಂದು ಹೇಳಲು ಸಾಧ್ಯವಿಲ್ಲ. ಆರೋಗ್ಯ ಮತ್ತು ಪೌಷ್ಟಿಕಾಂಶದ ಅಗತ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದರೆ ತಮ್ಮ ಜೀವನದಲ್ಲಿ ಒಂದು ನಿರ್ಧಾರವನ್ನು ಮಾಡಿಕೊಂಡು, ಅದನ್ನು ನಿರಂತರವಾಗಿ ಪಾಲಿಸುವ ಅವರ ಶಿಸ್ತು ಮಾತ್ರ ನಿಜಕ್ಕೂ ಮೆಚ್ಚುವಂಥದ್ದು. ಒಂದು ಅಭ್ಯಾಸವನ್ನು ರೂಪಿಸಿಕೊಳ್ಳುವುದು ಸುಲಭವಾಗಿರಬಹುದು ಆದರೆ ಅದನ್ನು ವರ್ಷಗಟ್ಟಲೆ ಶಿಸ್ತಿನಿಂದ ಮುಂದುವರಿಸುವುದು ಅಷ್ಟು ಸುಲಭವಲ್ಲ. ಜೋಯಿಸರು ನನಗೆ ತೋರಿಸಿಕೊಟ್ಟ ಪ್ರಮುಖ ವಿಚಾರಗಳಲ್ಲಿ ಇದೂ ಒಂದು.

ಜೋಯಿಸರು ಕೇವಲ ಕೆಲಸದಲ್ಲಿ ಅಥವಾ ಆಹಾರದ ವಿಚಾರದಲ್ಲಿ ಮಾತ್ರ ವಿಶೇಷ ವ್ಯಕ್ತಿಯಾಗಿರಲಿಲ್ಲ. ಅವರ ಮಾತುಗಳಲ್ಲಿಯೂ, ಇತರರೊಂದಿಗೆ ಬೆರೆಯುವ ರೀತಿಯಲ್ಲಿಯೂ ಒಂದು ವಿಶೇಷತೆ ಇತ್ತು. ಅವರು ಅನೇಕ ಜನರೊಂದಿಗೆ ವಿವಿಧ ವಿಷಯಗಳನ್ನು ತಮಾಷೆಯಾಗಿ ಮಾತನಾಡುತ್ತಾ ಹೋಗುತ್ತಿದ್ದರು. ಸಣ್ಣ ಮಕ್ಕಳನ್ನೂ ಗೌರವದಿಂದ ಕಾಣುತ್ತಿದ್ದರು. ವಯಸ್ಸಿನಲ್ಲಿ ಹಿರಿಯರಾಗಿರುವುದರಿಂದ ತಮಗೆ ವಿಶೇಷ ಗೌರವ ನೀಡಬೇಕು ಎಂಬ ನಿರೀಕ್ಷೆ ಅವರಲ್ಲಿದ್ದಂತೆ ಕಾಣುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಅವರೊಂದಿಗೆ ನಾವು ಕೆಲವೊಮ್ಮೆ ಸಿಟ್ಟಿನಿಂದ ವರ್ತಿಸಿದ ಸಂದರ್ಭಗಳೂ ಇವೆ. ಆದರೆ ಅವರು ಆ ಸಂದರ್ಭಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮನ್ನು ದೂರವಿಡುತ್ತಿರಲಿಲ್ಲ. ಮರುದಿನವೂ ಎಂದಿನಂತೆ ನಗುನಗುತ್ತಾ ಮಾತನಾಡುತ್ತಿದ್ದರು. ನಾವು ಅವರಿಗೆ ಮಾಡುವ ಸಣ್ಣಪುಟ್ಟ ಸಹಾಯಗಳನ್ನೂ ಅವರು ದೊಡ್ಡ ಉಪಕಾರವೆಂಬಂತೆ ಸ್ವೀಕರಿಸುತ್ತಿದ್ದರು. ಮನಃಪೂರ್ವಕವಾಗಿ ಧನ್ಯವಾದ ಹೇಳುತ್ತಿದ್ದರು. ನಮ್ಮನ್ನು ಆತ್ಮೀಯವಾಗಿ ಮಾತನಾಡಿಸಿ, ಶುಭ ಹಾರೈಸುತ್ತಿದ್ದರು. ಇಲ್ಲಿ ನನಗೆ ಹೆಚ್ಚು ಆಶ್ಚರ್ಯವಾಗಿದ್ದು ಅವರ ವಯಸ್ಸಲ್ಲ, ಅವರ ಮನಸ್ಸು. ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳನ್ನೇ ದೊಡ್ಡದಾಗಿ ಪರಿಗಣಿಸುತ್ತೇವೆ. ಯಾರಾದರೂ ನಮ್ಮೊಂದಿಗೆ ಒಮ್ಮೆ ಕೆಟ್ಟದಾಗಿ ಮಾತನಾಡಿದರೆ, ಅದನ್ನು ಬಹಳ ದಿನಗಳವರೆಗೆ ನೆನಪಿಟ್ಟುಕೊಂಡು ಅವರಿಂದ ದೂರವಿರಲು ಪ್ರಯತ್ನಿಸುತ್ತೇವೆ. ಆದರೆ ಜೋಯಿಸರು ಅಂತಹ ಸಣ್ಣಪುಟ್ಟ ಸಂಗತಿಗಳನ್ನು ಮರೆತು, ಪ್ರತಿದಿನವೂ ಅದೇ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಇತರರು ತಮಗೆ ಮಾಡಿದ ಉಪಕಾರವನ್ನು ಗುರುತಿಸುವುದು, ಕೃತಜ್ಞತೆಯಿಂದ ವರ್ತಿಸುವುದು ಮತ್ತು ಸಣ್ಣವರನ್ನೂ ಗೌರವದಿಂದ ಕಾಣುವುದು ಈ ಗುಣಗಳು ಪ್ರತಿಯೊಬ್ಬರಲ್ಲಿಯೂ ಇರುವುದಿಲ್ಲ.

ಜೀವನದಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತೇವೆ. ಕೆಲವರು ನಮಗೆ ಹಣ ಸಂಪಾದಿಸುವುದನ್ನು ಕಲಿಸುತ್ತಾರೆ. ಕೆಲವರು ಕೆಲಸ ಮಾಡುವ ವಿಧಾನವನ್ನು ಕಲಿಸುತ್ತಾರೆ. ಇನ್ನು ಕೆಲವರು ತಮ್ಮ ಮಾತುಗಳಿಂದ ನಮಗೆ ಜ್ಞಾನ ನೀಡುತ್ತಾರೆ. ಆದರೆ ಕೆಲವೇ ಕೆಲವು ಜನರು ತಮ್ಮ ಜೀವನವನ್ನೇ ಒಂದು ಪಾಠವನ್ನಾಗಿ ಮಾಡುತ್ತಾರೆ. ಜೋಯಿಸರನ್ನು ಮೊದಲ ಬಾರಿ ನೋಡಿದಾಗ ಅವರ ವಯಸ್ಸು, ಅವರು ಮಾಡುತ್ತಿದ್ದ ಕೆಲಸ ಮತ್ತು 'ಅವರಿಗೆ ಈ ವಯಸ್ಸಿಗೆ ಇದೆಲ್ಲಾ ಬೇಕಾ?' ಹೀಗೆ ಪ್ರಶ್ನೆಗಳು ಮೂಡಿದ್ದವು. ಆದರೆ ಅವರನ್ನು ಹತ್ತಿರದಿಂದ ತಿಳಿದುಕೊಂಡಂತೆ ನನ್ನ ದೃಷ್ಟಿಕೋನವೇ ಬದಲಾಯಿತು. ಅವರಿಂದ ನಾನು ಕಲಿತದ್ದು ಕೇವಲ ದುಡಿಮೆಯ ಮಹತ್ವವಲ್ಲ; ಜೀವನದಲ್ಲಿ ಚಟುವಟಿಕೆಯಿಂದ ಇರುವುದರ ಮಹತ್ವ, ನಮ್ಮ ನಿರ್ಧಾರಗಳಲ್ಲಿ ಶಿಸ್ತು ಹೊಂದುವುದರ ಮಹತ್ವ, ಇತರರನ್ನು ಗೌರವಿಸುವ ಗುಣ ಮತ್ತು ಸಣ್ಣಪುಟ್ಟ ಸಂಗತಿಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳುವ ಕಲೆಯೂ ಹೌದು. ಇಂದು ಇಂತಹ ಅನುಭವಸ್ಥರು ನಮ್ಮ ಸುತ್ತಮುತ್ತಲೂ ಅನೇಕರು ಇದ್ದಾರೆ. ಆದರೆ ಅವರ ಜೀವನದ ಅನುಭವಗಳನ್ನು ಕೇಳಲು, ಅವರೊಂದಿಗೆ ಮಾತನಾಡಲು ಮತ್ತು ಅವರಿಂದ ಕಲಿಯಲು ನಾವು ಸಮಯ ಮೀಸಲಿಡುತ್ತೇವೆಯೇ ಎಂಬುದು ಮುಖ್ಯವಾದ ಪ್ರಶ್ನೆ.

ಏನೇ ಗಂಭೀರ ವಿಷಯ ಇರಲಿ ತುಂಬಾ ತಲೆ ಕೆಡಿಸುವ ವಿಷಯ ಇರಲಿ ಹೇಳುವ dialogue ಅರ್ಥಕ್ಕೆ importantance ಕೊಡದೆ ಒಮ್ಮೆಲೆ... "ಅಜ್ಜಿ ಶುಂಠಿ ಬಾವಾ......" ಅಂತ ಹೇಳಿ, ತುಟಿ ಹರಿಯುವ ಹಾಗೆ ಒಂದು ನಗು. ಇದು ಜೋಯಿಸರ ಒಂದು identity.

ನಮ್ಮ ಜೀವನದಲ್ಲಿ ಇಂತಹ ವ್ಯಕ್ತಿಗಳ ಪರಿಚಯವಾಗುವುದು ಒಂದು ಭಾಗ್ಯ. ಅವರೊಂದಿಗೆ ಕೆಲವು ದಿನಗಳನ್ನು ಕಳೆಯುವುದೂ ಒಂದು ಅನುಭವ. ಅವರಿಂದ ಕಲಿತ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ. ಇಂತಹಾ ಹಿರಿಯ ಚೇತನರಿಂದ ನಮ್ಮ ನಿಮ್ಮಂತವರು ಜೀವನೋತ್ಸಾಹ ಹೇಚ್ಚಿಸಿಕೊಳ್ಳಬೇಕಿದೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ‧ ರಸ ಮಥನ. All rights reserved. Distributed by ASThemesWorld