Contact Angle Touch Studio for your Blog Design. Visit Site

'ಲಾಕ್ಡೌನ್'-ಜೀವನಕ್ಕೆ ಸವಾಲು

 'ಲಾಕ್ಡೌನ್' ಜೀವನ ವ್ಯಾಖ್ಯಾನವನ್ನು ವಿಚಲಿಸಿದ ಸವಾಲು
ದಿನಾಂಕ 15-02-2021 ರಂದು ಮಂಗಳೂರು ಆಕಾಶವಾಣಿಯಲ್ಲಿ ಸಂಜೆ 5ಗಂಟೆಯ ಸಮಯ "ಯುವವಾಣಿ" ಕಾರ್ಯಕ್ರಮದಲ್ಲಿ ಪ್ರಸಾರಗೊಂಡ ಲೇಖನ (ಅನುಭವ ಕಥನ)

(ಫೋಟೋ ಕೃಪೆ:- ಗೂಗಲ್)

ಕಳೆದಸಂವತ್ಸರವು ಅದನ್ನು ಅನುಭವಿಸಿದ ಎಲ್ಲರಿಗೂ ಹಿಂದೆಂದೂ ಕೇಳರಿಯದ ಹೊಸ ಅನುಭವಗಳನ್ನು ಸಮ್ಮಾನಿಸಿತು. ಈ ರೀತಿಯ ಬದಲಾವಣೆಗಳನ್ನು ಹಲವರು ಹಲವು ರೀತಿ ಆಡಿಕೊಂಡರು. ದೈವಿಕ ಶಕ್ತಿಗಳನ್ನು ನಂಬುವವರು, "ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸಾಧನೆಗಳು  ಏನಿದೆಯೋ, ಅವುಗಳಿಂದ ನಿಯಂತ್ರಿಸಲು ಅಥವಾ ಸಮಯಾನುಸಾರ ತರ್ಕಿಸಲು ಸಾಧ್ಯವಾಗದ ವಿಚಿತ್ರ ಘಟನೆಗಳಿಗೆ ಈ ಭೂಮಿ ಸಾಕ್ಷಿಯಾಗುತ್ತಿದೆ" ಎಂದು ಹೇಳುತ್ತಾರೆ. ವಿಜ್ಞಾನಿಗಳು ಅಥವಾ ಯುವ ತಲೆಮಾರಿನ ಜನರು, "ಇದು ಕೇವಲ ಮಾನವನ ಸೋಲು, ಅಥವಾ ಸಾಧಿಸುವ ತುಡಿತಗಳ ಮಧ್ಯೆ ಅಲಕ್ಷಿಸಲ್ಪಟ್ಟ ತಪ್ಪುಗಳು 'ಕೊಡ ತುಂಬಿದ' ಪರಿಣಾಮ. ಅಗ್ನಿಪರ್ವತ ಸ್ಫೋಟಿಸಿದಂತೆ ಇದೀಗ ತನ್ನ ಉರಿ ನಾಲಿಗೆಯಿಂದ ಸೇಡು ತೀರಿಸಿಕೊಳ್ಳುತ್ತಿದೆ" ಎನ್ನುವರು. ಆದರೆ ಉಭಯ ಚಿಂತಕರೂ ಸಮ್ಮತಿಸುತ್ತಾ, "ಮಾನವನಿಂದ, ಹೊಸತಾದ ಜೀವನ ಶೈಲಿಯಲ್ಲಿ, ಸುಖಜೀವನದ ಹುಡುಕಾಟ ಮುಂದುವರಿಯುತ್ತದೆ" ಎಂದು ಭವಿಷ್ಯ ಅಂದಾಜಿಸುತ್ತಾ ದೀರ್ಘ ಶ್ವಾಸ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ವಿಧಿವಶರಾದಂತಹ ಹಿರಿಯ ಯಕ್ಷಗಾನ ಅರ್ಥದಾರಿ ಮಲ್ಪೆ ವಾಸುದೇವ ಸಾಮಗರು ತಾಳಮದ್ದಳೆ ಒಂದರಲ್ಲಿ ಬಲಿಚಕ್ರವರ್ತಿಯ ಪಾತ್ರ ನಿರ್ವಹಿಸಿದಾಗ 'ಸುಖ' ಎಂದರೇನು ಎಂಬುದನ್ನು ವಿಮರ್ಶಿಸಿದ್ದು ನೆನಪಾಗುತ್ತದೆ. "ಎಲುಬುಗಳನ್ನು ಕಡಿಯುವ ನಾಯಿಗಳಂತೆ ಅಲ್ಲವೇ ಮಾನವ ಪ್ರಪಂಚ?" ಎಂದು ಅವರು ಪ್ರಶ್ನಿಸುತ್ತಾರೆ. ಗ್ರಾಮದ ಸಿಂಹ ಅಥವಾ ನಾಯಿಯೊಂದು, ತಾನು ಹಲ್ಲುಗಳಿಂದ ಕಚ್ಚಿ ಹಿಡಿದು ರಸಾಸ್ವಾದನೆಯ ಅನುಭೂತಿಯನ್ನು ಪಡೆಯುವ ತುಡಿತವನ್ನು ಮುಂದುವರಿಸುತ್ತದೆ, 'ತನ್ನ ಹಲ್ಲುಗಳಿಂದ ಬಲವಾದ ಕಡಿತಗಳಿಗೆ ಒಳಗಾಗುವ ಎಲುಬು, ಇನ್ನೇನು ಒಡೆದು ರುಚಿ ರಕ್ತವನ್ನು ನೀಡುತ್ತದೆ' ಎಂಬ ಆಸೆ - ಹಂಬಲ ಅದರದು. ಎಲುಬಿನ ಕಾಠಿಣ್ಯಕ್ಕೆ ಬಾಯಿಯ ವಸಡುಗಳು ಒಡೆದು ರಕ್ತ ಜಿನುಗುತ್ತದೆ, ತಾನೇನೋ ಸಾಧಿಸಿದೆ ಎಂಬ ಹಮ್ಮಿನಿಂದ ಮತ್ತೆ ಎಲುಬನ್ನು ಕಡಿಯುವುದನ್ನು ಮುಂದುವರಿಸುತ್ತದೆ. ಮಾನವಜೀವನದಲ್ಲಿಯೂ ಅಷ್ಟೇ, ತಾನೇನೋ ಸಾಧಿಸಿದೆ ಎಂಬ ಮೌಡ್ಯತೆಯಲ್ಲಿ ಮತ್ತದೇ ತಪ್ಪನ್ನು ಮುಂದುವರಿಸುತ್ತಾ ಇದ್ದಾನೆ. ನಿಜವಾಗಿ ಆತ 'ಲಗಾಡಿ' ಹೋಗುತ್ತಿದ್ದಾನೆ. ಬಹುಶಃ ಪ್ರತಿಯೊಬ್ಬ ಪ್ರಜ್ಞಾವಂತನೂ ತಾನರಿತು ಮತ್ತದೇ ತಪ್ಪನ್ನು ಮುಂದುವರಿಸುವಾಗ ದೊಡ್ಡ ಗುಂಡಿಗೆ ಬೀಳುತ್ತಿದ್ದಾನೆ ಎಂಬುದನ್ನು ಮರೆಯುತ್ತಿದ್ದಾನೆ. ಹೊಸ ಅನುಭವಗಳು ಏನಿದೆಯೋ ಅದು 'ಹೊಸ ಜೀವನ ಶೈಲಿಗೆ ತ್ವರಿತಗತಿಯಲ್ಲಿ ಒಗ್ಗಿಕೊಳ್ಳುವ ಸಂದಿಗ್ಧ ಸ್ಥಿತಿಯನ್ನು' ಎದುರಿಸುವುದನ್ನು ಕಲಿಸುತ್ತದೆ. ಲಾಕ್ಡೌನ್ ಪರಿಸ್ಥಿತಿಯಲ್ಲಿ ಅಷ್ಟೂ ದಿನಗಳು, 'ಚಿಂತಿಸುವವರಿಗೆ ಮತ್ತಷ್ಟು ಚಿಂತೆಯನ್ನು ಕರುಣಿಸಿಯೂ', 'ಚಿಂತಿಸದವರಿಗೆ ಚಿಂತಿಸುವಂತೆ ಮಾಡಿಯೂ' ಕೊನೆಗೆ 'ಎಲ್ಲಾ ಚಿಂತೆಗಳಿಗೆ ಸಂಚಕಾರವಾಗಿಯೂ' ಎದುರಾಯಿತು. ಅನುಭವ ಬುತ್ತಿಗಳು ಹೊಸ ಹೊತ್ತಗೆಗಳಿಗೆ ಒತ್ತುನೀಡಿತು.

ಒಂದೊಮ್ಮೆ ಎದುರಾದ 'ಲಾಕ್ಡೌನ್' ಎಂಬ ಪರಿಕಲ್ಪನೆಯ ಗೌರವ ಅಥವಾ ಅವಶ್ಯಕತೆಯ ತೀವ್ರತೆ ಅರ್ಥೈಸಿಕೊಳ್ಳುವಲ್ಲಿ ಜನರು ಸ್ವಲ್ಪ ಸಮಯ ತೆಗೆದುಕೊಂಡರೂ, ಅದು ಮಾಡಿದ ಪ್ರಭಾವದಿಂದ ಇನ್ನಷ್ಟು ಗಮನ ಕೊಡುವಂತೆ ಮಾಡಿತು. ಶಾಲಾ ಕಾಲೇಜುಗಳು 'ಒಂದುವಾರ' ಎಂಬ ಸಣ್ಣ ಮಾನದಂಡದಲ್ಲಿ ರಜೆ ಘೋಷಿಸಿದ್ದರೂ, ತಿಂಗಳುಗಳು ಉರುಳಿದ್ದು ಗಮನಕ್ಕೆ ಬರಲೇ ಇಲ್ಲ. ಬಹುಶಃ 'ರಜೆಯಲ್ಲಿ ಏನು ಮಾಡಲು ಆಗಲಿಲ್ಲ ಅಲ್ವಾ?' ಅಂತ ಪರಿತಪಿಸಿಕೊಂಡಾಗ ಕಾರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಇದಕ್ಕೆ ಸಲ್ಲುತ್ತದೆ. ಏಕೆಂದರೆ, 'ಅಂದಾಜು ಎಂಟು - ಒಂಬತ್ತು ತಿಂಗಳಾದರೂ ರಜೆ ಇರಬಹುದು' ಎಂದು ಮೊದಲೇ ಘೋಷಿಸಿದ್ದರೆ ಏನಾದರೂ ಮಾಡಬಹುದಿತ್ತು ಎಂಬ ಕುಂಟುನೆಪ ನಮ್ಮದು. ಆದರೆ "ಬದುಕು" ಹೊಸ ಆಯಾಮಗಳಲ್ಲಿ, ಹೊಸ ಬದಲಾವಣೆಗಳಲ್ಲಿ ಸಾಗಿದಾಗ, ಕುಟುಂಬ - ಗೆಳೆಯರು - ಒಂಟಿತನ ಮುಂತಾದ ವಿಶಿಷ್ಟ ಪರಿಧಿಯಲ್ಲಿ ಯಾವ ರೀತಿ ತಮ್ಮತನವನ್ನು ಪ್ರದರ್ಶಿಸುತ್ತದೆ ಎಂಬುದನ್ನು ಅರಿಯುವುದಕ್ಕೆ ಸಾಧ್ಯವಾಯಿತು.

ಮೊದಲಾಗಿ, ಎದುರಾದ ದೊಡ್ಡ ಸಮಸ್ಯೆಯನ್ನು ಹತ್ತಿರ ಬಾರದಂತೆ ತಡೆಹಿಡಿಯಲು ಅವಶ್ಯಕ ಮುಂಜಾಗೃತಾ ಕ್ರಮಗಳನ್ನು ಎಲ್ಲ ಜನರು ಅನುಸರಿಸುವಂತೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿತ್ತು. ಆದ್ದರಿಂದ ಮುಖ ಕವಚ ಅಥವಾ ಮುಖವಾಡ ಎಂದು ತರ್ಜುಮೆ ಮಾಡಬಹುದಾದ ಮಾಸ್ಕ್ ಗಳ ರಂಗಪ್ರವೇಶ ಕೇವಲ ಆಸ್ಪತ್ರೆ ವಠಾರಕ್ಕೆ ಸೀಮಿತಗೊಳ್ಳದೆ ಲೋಕ ವ್ಯಾಪಿ ಆಯಿತು. ಸ್ಯಾನಿಟೈಸರ್ ಗಳ ಬಳಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ಅರಿತ ತಜ್ಞವೈದ್ಯರು ಪ್ರತಿಯೊಬ್ಬರೂ ಉಪಯೋಗಿಸುವಂತೆ ಸಲಹೆ ನೀಡಿದರು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಾಗ ಮಾತ್ರ ಒಬ್ಬ ಮನುಷ್ಯನಲ್ಲಿ ಇರಬಹುದಾದ ಸೋಂಕು ಶರೀರ ದ್ರವದ ಮೂಲಕ ಇನ್ನೊಬ್ಬನಿಗೆ ಹರಡುವುದನ್ನು ತಡೆಯಲು ಸಾಧ್ಯ ಎಂಬುದನ್ನು ಎಚ್ಚರಿಸಿದರು. ಎಲ್ಲ ಎಚ್ಚರಿಕೆಗಳನ್ನು ಅಥವಾ ಮುಂಜಾಗ್ರತಾ ಕ್ರಮಗಳನ್ನು ಎಲ್ಲ ಜನರು ಅನುಸರಿಸುವಂತೆ ಮಾಡಲು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು. ಆದರೆ ಇಷ್ಟರವರೆಗೆ ಕುಳಿತು ತಿನ್ನುತ್ತಿದ್ದ ಅದೆಷ್ಟೋ ರಕ್ಷಣಾ ಸಿಬ್ಬಂದಿಗಳಿಗೆ, ಬಿಸಿಲಲ್ಲಿ ನಿಂತು ಸಂಬಳಕ್ಕೆ ಸರಿಯಾಗಿ ಶ್ರಮ ಪಡುವಂತೆ ಮಾಡಿತು. "ನಮ್ಮ ಜಾಗ್ರತೆಯಲ್ಲಿ ನಾವಿದ್ದರೆ ಸಾಕು" ಎಂಬುದು ನಮ್ಮ ಆಲೋಚನೆಯಾಗಿತ್ತು. ನಿಜವಾಗಿ ಲಾಕ್ ಡೌನಿನ ಆದಿಯಲ್ಲಿ ಇದ್ದ ಭಯ, ಈಗ ಸೋಂಕು ಮತ್ತಷ್ಟು ಅಪಾಯಕಾರಿಯಾಗಿ ಉಲ್ಬಣಿಸಿದರೂ ನಾಟುತ್ತಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಮನೆ - ಬಸ್ಸು - ಕಾಲೇಜು ಎನ್ನುವ ಯಾನವನ್ನೂ, ಗೆಳೆಯರ ಮಸ್ತಿ - ಮನೆಯವರ ಪಾಲನೆ - ಗುರುಗಳ ಕಿರಿಕಿರಿ ಇವೆಲ್ಲವನ್ನೂ ಮೀರಿ ಇನ್ನೊಂದು ಯಾವುದೋ ಎದುರಾಗಿದೆ ಎಂದು ಅರಿವಾಯಿತು. ಮನೆಯವರೊಂದಿಗೆ ಹೊಂದಿಕೊಳ್ಳುವ, ಅವರ ಸೇವೆ ಮಾಡಿ ತನ್ನ ಚಟಗಳನ್ನು ಹಿಡಿತದಲ್ಲಿರಿಸಿ ಇನ್ನಾವುದೋ ಪ್ರಾಮುಖ್ಯವಲ್ಲದ ಒತ್ತಡದ ಕೆಲಸಗಳಿಗೆ ಒಗ್ಗಿಕೊಳ್ಳಲೇಬೇಕಾಗಿಬಂದ ಲಾಕ್ಡೌನ್. ಮನೆಯವರೊಂದಿಗೆ ತೋಟದ ಕೆಲಸಗಳಲ್ಲಿ ತಲ್ಲೀನನಾಗಬೇಕೆಂಬ ಸಣ್ಣ ಪ್ರೇರಣೆಗೆ ಮೊಬೈಲ್ ಚಟ ದೊಡ್ಡ ಸವಾಲಾಗಿ ಪರಿಣಮಿಸಿತ್ತು. 

(ಫೋಟೋ ಕೃಪೆ:- ಗೂಗಲ್)

ನಮಗೆ ಮನೆ ಎರಡು. ಒಂದು ಹೊಸ ಮನೆ, ಒಂದು ಹಳೆಮನೆ. ಹೊಸಮನೆಯ ಸುತ್ತಲು ಮನೆ ಮಾತ್ರವಿದ್ದು, ಹಳೆಮನೆಯಲ್ಲಿ ರಬ್ಬರ್ ತೋಟ, ಕೆರೆ, ದೊಡ್ಡದಾದ ಹುಳಿ, ಮಾವು, ಹಲಸಿನ ಮರಗಳು, ಅದೇರೀತಿ ಲಾಕ್ಡೌನ್ ಬರಬಹುದು ಎಂಬ ಭವಿಷ್ಯ ಮೊದಲೇ ತಿಳಿದಿದ್ದಂತೆ ಬೆವರಿಳಿಸಿ ದುಡಿಯಲು ಸೂಕ್ತವಾಗಿ ಮಾಡಿಟ್ಟ ತಟ್ಟುಗಳು. ಇನ್ನುಳಿದಂತೆ ಒಂದಷ್ಟು ಅಡಿಕೆ - ತೆಂಗು. ತಂದೆ ವ್ಯಾಪಾರಿಯಾಗಿದ್ದು ಲಾಕ್ ಡೌನಿನ ಪೆಟ್ಟು ಸರಿಯಾಗಿಯೇ ನಾಟಿದ್ದರಿಂದ ಹಳೆಮನೆಯ ಸುತ್ತಲಿನ ಕೆಲಸಗಳಿಗೆ ನನ್ನನ್ನೂ, ತಮ್ಮನನ್ನು ಸೇರಿಸಿಕೊಂಡು ಮೂವರು ಹೋಗುವುದು ನಿತ್ಯ ನೂತನವಾಯಿತು. ಮೊದಲಾಗಿ ಎದುರು ಕಂಡದ್ದು ರಬ್ಬರ್ ತಟ್ಟುಗಳ ಮಧ್ಯೆ ಆಳೆತ್ತರಕ್ಕೆ ಬೆಳೆದುನಿಂತ ಮುಳ್ಳು ಪೊದಗಳು. ಪ್ರತಿವರ್ಷ ಕೆಲಸದವರಲ್ಲಿ ಕೇವಲ ರಬ್ಬರ್ ಗಿಡದ ಸುತ್ತಲೂ ಮಿಷನ್ ಓಡಿಸಲು ಹೇಳುತ್ತಿದ್ದೆವು. ನಾಲ್ಕಾರು ವರ್ಷಗಳಿಗೊಮ್ಮೆ ರಬ್ಬರ್ ಮರಗಳ ತೋಟದ, ಮುಳ್ಳು ಪೊದೆಗಳನ್ನು ಸಂಪೂರ್ಣ ಕಡಿಸಿ, ತೆಂಗಿನ ಬುಡಕ್ಕೆ ಹಾಕಲು ಹೇಳುವ ಜಾಯಮಾನ. ಈ ಬಾರಿ ಎಲ್ಲಾ ಮುಳ್ಳು ಪೊದೆಗಳನ್ನು ಕಡಿದು ತೆಂಗಿನ ಹಾಗೂ ಅಡಿಕೆ ಬುಡಗಳಿಗೆ ಹಾಕುವುದನ್ನು ಮತ್ತು ಸೌದೆಯನ್ನು ಒಟ್ಟುಮಾಡಿ ನಮ್ಮ ಮೊಡೆಲ್ 2010ರ ಆಕ್ಟಿವ ಸ್ಕೂಟರ್ ನಲ್ಲಿ 300 ಮೀಟರ್ ಈಚೆಗೆ ಇರುವ ಹೊಸ ಮನೆಗೆ ಸಾಗಿಸುವುದು ಸಾಧಾರಣ ಒಂದು ತಿಂಗಳಿಗೆ ಕಸುಬಾಯಿತು. ಅದರೆಡೆಯಲ್ಲಿ ರಂಗಜ್ಜನ ಮನೆಗೆ ಹೋಗಿ ಅವರ ಮಕ್ಕಳೊಂದಿಗೆ ಕೆರೆಯಲ್ಲಿ ಈಜಾಡುವುದು ಬೆವರಿದ ಶರೀರಕ್ಕೆ ಮುದ ನೀಡುತ್ತಿತ್ತು. ಅದೆಷ್ಟೋ ದಿನಗಳಲ್ಲಿ ದಿನದ ಕೆಲಸದ ಸಮಯ ಮುಗಿದ ಮೇಲೆ ಈಜಲು ಉತ್ಸಾಹದಿಂದ ಅಪ್ಪನನ್ನು ಒತ್ತಾಯಿಸಿದಾಗ, "ಹಿಡಿದ ಕಾರ್ಯವನ್ನು ಪೂರ್ತಿಮಾಡಿ ಹೋಗುವ" ಎಂಬ ಉಪದೇಶ ಕಿರಿಕಿರಿ ಅನ್ನಿಸಿದ್ದುಂಟು. "ಬೆಳಗ್ಗೆ ಹೋಗಿ ಕೆಲಸ ಮಾಡಿದರೆ ಆಯಾಸ ಆಗುವುದು ಕಡಿಮೆ ಮತ್ತು ಬೆವರುವುದು ಕಡಿಮೆ ಹಾಗೂ ನುಸಿಗಳ ಕಾಟ ಇರುವುದಿಲ್ಲ" ಎಂದು ಅಪ್ಪ ಒತ್ತಾಯಿಸುವ ಮೂಲಕ 'ರಜೆಯಲ್ಲಾದರೂ ತಡವಾಗಿ ಏಳಬಹುದು' ಎಂಬ ನಮ್ಮ ಔದಾಸೀನದ ಬಯಕೆಗಳಿಗೆ ತಣ್ಣೀರೆರೆಚಿದಂತೆ ಅಗುತ್ತಿತ್ತು. ಈಗ ಇಷ್ಟು ರಸವತ್ತಾಗಿ ಬರೆಯಲು ಪ್ರಯತ್ನಿಸುತ್ತಿದ್ದೇನೆ ಆದರೆ ಆ ದಿನಗಳಲ್ಲಿ ಅಪ್ಪನಿಗೆ ವಿರುದ್ಧ ಅಸಮಾಧಾನದ ಪರಮಾವಧಿ ತೋರಿಸಿಕೊಂಡಿದ್ದೆ. ಬೆಳಗ್ಗೆ ನಾಲ್ಕೈದು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿ ಮೂವರು ಸ್ಕೂಟರ್ ಹತ್ತಿ ಹೋದರೆ ಮತ್ತೆ ಮಧ್ಯಾಹ್ನ 2:30 ಅದಾಜು ಮನೆಗೆ ತಲುಪುವುದು. ನಿಜವಾಗಿಯೂ ಮೈಮುರಿದು ದುಡಿದ ದೇಹವು ಅಮ್ಮನ ಅಡುಗೆಯಲ್ಲಿ ಯಾವುದೇ ಲೋಪ ದೋಷ ಗುರುತಿಸಲು ಅಸಾಧ್ಯವಾಗದೆ, ಚಪ್ಪರಿಸಿ ಅರಗಿಸಿಕೊಳ್ಳುತ್ತಿತ್ತು. ಆಮೇಲೆ ಒಂದಷ್ಟು ವಿಶ್ರಾಂತಿ. ಸಂಜೆಯ ಸಮಯ ಮತ್ತೆ ಹಳೆ ಮನೆಯ ಕಡೆ ಸಾಗಿ ಪುನಃ ಅದೇ ಕೆಲಸ ಮುಂದುವರಿಸುವುದು. ಆದರೆ ಸಂಜೆ ಸ್ವಲ್ಪ ಸಮಯ ನಾನೂ ತಮ್ಮನೂ ಶಟ್ಲ್ ಕಾಕ್ ಕೋರ್ಟ್ ಮಾಡುವುದರಲ್ಲೇ ಸಮಯ ಕಳೆದೆವು. ಕೋರ್ಟ್ ತಯಾರಾಗುವುದರೊಳಗೆ ಆಡುವ ಉತ್ಸಾಹ ಅರ್ಧದಷ್ಟು ಇಳಿದಿತ್ತು. ಸ್ವಲ್ಪ ಇದರ ಕೆಲಸ ಮಾಡಿ ಮತ್ತೆ ಅಪ್ಪನೊಂದಿಗೆ ಸೇರಿಕೊಳ್ಳುವುದು ಹಾಗು ಕೊನೆಗೆ ಅರ್ಧ - ಒಂದು ಗಂಟೆಗಳಕಾಲ ಕೊಳದಲ್ಲಿ ನೀರಾಟ.

ಈ ಮಧ್ಯೆ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗದೇ ಗುರುತಿಸಿಕೊಳ್ಳಲೂ ಬಯಸದೆ ದುಡಿಯುತ್ತಿದ್ದ ಜೀವ ಅಮ್ಮ. ಒಮ್ಮೆ ಹಳ ಮನೆಯ ಕಡೆ ಹೋಗಿ ಬಂದರೆ ನಮ್ಮ ಮೂವರ ಬಟ್ಟೆಗಳು ಬೆವರಿನ ವಾಸನೆಯಿಂದ ಸಹಿಸಲಸಾಧ್ಯವಾಗಿತ್ತು. ದಿನಕ್ಕೆ ಎರಡು ಜೊತೆ ಬಟ್ಟೆಗಳನ್ನು ತೊಳೆದು, ಅಡುಗೆ ಮಾಡಿದ ಪಾತ್ರೆಗಳನ್ನೂ ತೊಳೆದು, ಅದರ ಮಧ್ಯೆ ಬಿಡುವು ಮಾಡಿಕೊಂಡು ಸಂಜೆಯ ಸಮಯ ನಾವು ಶಟ್ಲ್ ಕಾಕ್ ಆಟದ ಕೋರ್ಟ್ ಮಾಡುವಾಗ ಅಪ್ಪನಿಗೆ ಕೆಲಸದಲ್ಲಿ ಜೊತೆಯಾಗುತ್ತಿದ್ದರು. ದುಡಿದಷ್ಟು ದಣಿವು ತೋರಿಸದ ಅಮ್ಮ, ಕೆಲವೊಮ್ಮೆ "ಅಮ್ಮಮ್ಮ.. ಸಾಕುಸಾಕಾಯಿತು.." ಎಂದಾಗ "ನೀನು ಅಷ್ಟೇನು ಮಾಡಿದ್ದಿ" ಅಂತ ಕುಚೇಷ್ಟೆ ಮಾಡಿದ್ದು ವಾತ್ಸಲ್ಯದಿಂದ ಅಷ್ಟೇ. 'ಲಾಕ್ಡೌನ್ ಅಲ್ವಾ ರುಚಿ ರುಚಿಯಾದ ತಿಂಡಿಗಳು ಬೇಕೇ ಬೇಕು' ಅಂತ ಹಟ ಹಿಡಿದು ಅದೆಷ್ಟೋ ತಿಂಡಿಗಳನ್ನು ಮಾಡಿಸಿದ್ದುಂಟು. ಹೊಸ ಪ್ರಯೋಗಗಳ ಸಾಲಿನಲ್ಲಿ ಬನ್, ಮಾಂಬಳ, ಬಟಾಟೆ ಹಪ್ಪಳಗಳು ನಾಲಿಗೆ ಕೆರೆದುಕೊಳ್ಳುವಂತೆ ಮಾಡಿದ್ದರೆ. ಇನ್ನು ಕೆಲವು ಖಾದ್ಯಗಳು ಎಷ್ಟು ರುಚಿ ರುಚಿಯಾಗಿ ತಯಾರಾಗಿತ್ತೆಂದರೆ ಈಗಲೂ ಬಾಯಿಯಲ್ಲಿ ನೀರು ಬರುತ್ತದೆ. 

ನಮಿಗೆ ವಹಿಸಿಕೊಟ್ಟ ಎರಡನೆಯ ಜವಾಬ್ದಾರಿ ಏನೆಂದರೆ ಕಳೆದ ಆರೇಳು ವರ್ಷಗಳಿಂದ ಹೂಳೆತ್ತದೇ ಉಳಿದಿರುವ ಹಾಗೂ ಒಂದು ಬದಿಯಲ್ಲಿ ಕಳೆದ ಮಳೆಗಾಲದಲ್ಲಿ ಜರಿದು ಬಿದ್ದದ್ದರಿಂದ  ಅರ್ಧ ಮುಚ್ಚಿರುವ ಕೆರೆಯನ್ನು ಸರಿಪಡಿಸುವುದು. ನಿಜವಾಗಿ ತ್ರಾಸದಾಯಕ ಹಾಗೂ ಹಿಂಸೆ ನೀಡಿದ ಕೆಲಸ ಎಂಬ ಹಾಗೆ ಇದನ್ನು ವಿಶೇಷಿಸಬಹುದು. ಯಾಕೆಂದರೆ ಮೈ ಎಲ್ಲಾ ಕೆಸರಿನಿಂದ ಮುಳುಗಿ ಪೂರ್ತಿ ಒದ್ದೆ ದೇಹದೊಂದಿಗೆ ಭಾರವಾದ ಕೆಸರಿನ ಬುಟ್ಟಿಯನ್ನು ತಲೆಯಲ್ಲಿ ಇರಿಸಿ ಹತ್ತಿ ಬರುವುದು ತುಂಬಾ ಕಷ್ಟವಾಗುತ್ತಿತ್ತು. ಮಣ್ಣಿನಿಂದಲೂ ಹೆಚ್ಚು ಮಣ್ಣು ಮಿಶ್ರಿತ ನೀರು, ಮೆಟ್ಟಿಲನ್ನು ಜಾರುಬಂಡಿಯಾಗಿಸುತ್ತಿತ್ತು. ಸ್ವಲ್ಪ ಹೊತ್ತರೆ ಮುಗಿಯುವುದಿಲ್ಲ ಜಾಸ್ತಿ ಹೊತ್ತರೆ ಕೂಡುವುದಿಲ್ಲ ಎಂಬ ಸಂದಿಗ್ಧತೆ. ಮತ್ತೊಂದು ತಿಂಗಳುಗಳ ಕಾಲ ಹೀಗೆ ಸಮಯ ದೂಡಲು ಸಾಧ್ಯವಾಯಿತು. ಈ ಸಂದರ್ಭದಲ್ಲಿಯೂ ರಂಗಜ್ಜನ ಕೆರೆಯಲ್ಲಿ ಈಜಾಡುವುದನ್ನು ಬಿಡಲಿಲ್ಲ. ಮೈಪೂರ್ತಿ ಕೆಸರು ಆಗಿದ್ದರಿಂದ ನೇರವಾಗಿ ಕೆರೆಗೆ ಇಳಿದರೆ ನೀರು ಪೂರ್ತಿ ಕೆಟ್ಟುಹೋಗುವುದೆಂದು ಒಂದು ಸಣ್ಣ ಸ್ನಾನದಂತೆ ಮಾಡಿ, ಕೆರೆಗೆ ಹೋಗಿ ಮಿಂದೆದ್ದು ಬರುವುದು ಮುಂದುವರಿಯಿತು. ಇದರ ಎಡೆಯಲ್ಲಿ ಎನ್.ಸಿ.ಸಿ. ಚಟುವಟಿಕೆಗಳು ಮಾಡಲೂ, ಮಾಡದಿರಲೂ ಆಗದೆ ನನ್ನನ್ನು ಸಿಲುಕಿಸಿತು. ಮಾಡದಿರಲು ಇತರ ಎನ್.ಸಿ.ಸಿ. ಮಕ್ಕಳಿಂದ ಬರುವ ಸಲಹೆಗಳು ಹಾಗೂ ಕೆರೆಯ ಕೆಲಸ ಮಾಡಿದ ನಿತ್ರಾಣ ನೆವವಾಗಿರುತ್ತಿತ್ತು. ಮಾಡಲೇಬೇಕೆಂಬ ನನ್ನೊಳಗಿನ ಎನ್.ಸಿ.ಸಿ. ಪ್ರೇಮ ಮತ್ತು 'ಶರೀರದ ಅಸಮತೋಲನ ನಿಯಂತ್ರಣಕ್ಕೆ ಪೂರಕವಾಗುತ್ತದೆ' ಎಂಬ ಯೋಚನೆ ಅದರಲ್ಲಿಯೂ ಭಾಗವಹಿಸುವಂತೆ ಮಾಡಿತು. ಬೆಳಗ್ಗೆ ಎದ್ದು, ಅಂದಾಜು ಒಂದರಿಂದ ನಾಲ್ಕು ಕಿಲೋಮೀಟರ್ ಓಡಿಬಂದು, ಯಾವುದಾದರೊಂದು ವ್ಯಾಯಾಮ ಮಾಡಿ, ಫೋಟೋ ಕಳುಹಿಸುವುದು ಒಂದು ತಿಂಗಳಗಳ ಕಾಲ ಮಾಡಿದ್ದೇನೆ. ನಿತ್ಯ ನಿತ್ರಾಣಗಳ ಮಧ್ಯೆ ಇದು ಸೇರಿಕೊಂಡು ದೊಡ್ಡ ಭಾರ ಹೊತ್ತಂತೆ ಆಗುತ್ತಿತ್ತು. ಆದರೆ ಲಾಕ್ ಡೌನ್ ಕೊನೆಯಲ್ಲಿ ನನ್ನ ದೇಹವು, ನನ್ನನ್ನು ನಾನೇ ಅಸಹ್ಯ ಪಡುವಂತಾಗಿತ್ತು ಎಂಬುದು ಲಜ್ಜೆಯ ವಿಷಯ.

ಹೇಗೂ ಕೃಷಿ ಕಾರ್ಯಗಳಿಗಾಗಿ ಉಪಯೋಗಿಸಬಹುದಾದ ತಟ್ಟುಗಳು ಹಳೆಮನೆ ವಟಾರದಲ್ಲಿ ಇದ್ದದ್ದರಿಂದ, ಲಾಕ್ ಡೌನ್ ಸಮಯದ ಅಡುಗೆ ಸಾಮಗ್ರಿಗಳ ದುಂದುವೆಚ್ಚವನ್ನು ಬರಿಸಲು ಕೃಷಿ ಮಾಡಲು ಅಂದಾಜಿಸಿದೆವು. ಒಂದು ತಟ್ಟು ಪೂರ್ತಿ ಕೊಳ್ಳಿ ಗೆಣಸು(ಮರಗೆಣಸು) ಗುಪ್ಪೆಗಳನ್ನು ಮಾಡಿ ನೆಟ್ಟೆವು. ಅದರ ಸುತ್ತಲೂ ಹಾಗೂ ಹತ್ತಿರದ ಅಗಲವಾದ ಇಳಿಜಾರಿನಲ್ಲಿ ಸಿಹಿಗೆಣಸಿನ ಬಳ್ಳಿಯನ್ನು ನೆಲ ಹೊಸಲು ಮಾಡಿ ನೆಟ್ಟು ಕೊಟ್ಟೆವು. "ಹಂದಿ - ಹೆಗ್ಗಣದ ಕಾಟವನ್ನು ತಡೆಯುವುದು ಹೇಗೆ? ಎಂಬ ಆಲೋಚನೆ ಸದ್ಯಕ್ಕೆ ಬೇಡ. ಮೊದಲು ಈ ನೆಲದಲ್ಲಿ ನಮ್ಮ ಶುಶ್ರೂಷೆ ಈ ಗಿಡಗಳಿಗೆ ಸಾಕಾಗುತ್ತದೆಯೋ ಎಂದು ನೋಡೋಣ" ಎಂದರು ಅಪ್ಪ. ಅದರಂತೆ ಮಣ್ಣು ರಾಶಿಹಾಕುವುದು, ಕಳೆ ಕೀಳುವುದು, ಹುಳ- ಹುಪ್ಪಟೆ ಬರದ ಹಾಗೆ ಬೂದಿ ಎರಚುವುದು, ಮಳೆ  ಬರದ ದಿವಸ ನೀರು ಪೂರೈಸುವುದು ಮುಂದುವರಿಸಿದೆವು. ಅಪ್ಪನ ಅಂಗಡಿಯಲ್ಲಿ ಬೀಡ ಮಾರುತ್ತಿದ್ದರಿಂದ ಹೊಗೆಸೊಪ್ಪು ಉಪಯೋಗ ಹಾಗೂ ಮಾರಾಟ ನಡೆಯುತ್ತಲೇ ಇತ್ತು. ಲಾಕ್ ಡೌನ್ ಸಮಯದಲ್ಲಿ ವ್ಯಾಪಾರವಾಗದಿದ್ದರೂ, ಹಿಂದೆ ಮಾಡಿದ ವ್ಯಾಪಾರದ ಸಾಕ್ಷಿ ಎಂಬಂತೆ ಹೊಗೆಸೊಪ್ಪಿನ ಬುಡಗಳು ಗೋಣಿಚೀಲದಲ್ಲಿ ಹಾಕಿದ್ದು ಇತ್ತು. ಅದನ್ನು ತಂದು ಕಷಾಯ ಮಾಡಿ ಗಿಡಗಳಿಗೆ ಹಾಕಿದ ಪರಿಣಾಮ ಸಣ್ಣ ಎಲೆ ತಿನ್ನುವ ಹುಳಗಳ ಬಾಧೆ ಸ್ವಲ್ಪ ಮಟ್ಟಿಗೆ ತಪ್ಪಿತು. ಲಾಕ್ ಡೌನ್ ಕೊನೆಯಲ್ಲಿ ಕೊಳ್ಳಿ ಗೆಣಸು ಹಾಗೂ ಸಿಹಿಗೆಣಸು ನಮ್ಮ ಗ್ರಹಿಕೆಯಷ್ಟು ಸಿಗದಿದ್ದರೂ, ನಮಗೆ ಹಾಗೂ ನೆರೆಕರೆಯವರಿಗೆ ಕೊಡುವಷ್ಟು ಮತ್ತು ಹೋಟೇಲೊಂದಕ್ಕೆ ಒಂದೆರಡು ದಿನಗಳ ಅಡಿಗೆಗೆ ಮಾರುವಷ್ಟು ಸಿಕ್ಕಿತ್ತು. ಅದರ ಅರ್ಥ ಲಾಕ್ಡೌನ್ ನಲ್ಲಿ ಮಾಡಿದ ಕೃಷಿ ಕೆಲಸ ಸಂಪೂರ್ಣ ಯಶಸ್ವಿ ಎಂದಲ್ಲ. ಯಾಕೆಂದರೆ ಇದರಿಂದ ಹೆಚ್ಚು ಕಷ್ಟಪಟ್ಟು ಮುಳ್ಳುಸೌತೆ, ಅಲಸಂಡೆ ಬಳ್ಳಿಗಳನ್ನು ಬೆಳೆಸಲು ಪ್ರಯತ್ನಿಸಿ, ಕಚ್ಚಿ ತಿನ್ನಲು ಕೂಡ ಒಂದೂ ಫಲಕೊಡದೆ ಕೆಲಸ ಹಾಳಾಯಿತು. ಹತ್ತಿರದ ದನ ಇರುವ ಮನೆಯವರಿಂದ ಹಟ್ಟಿಗೊಬ್ಬರ ಬುಟ್ಟಿ ಲೆಕ್ಕದಲ್ಲಿ ಹಣ ಕೊಟ್ಟು ತಂದು ಹಾಕಿದ್ದು, ಬೆಳೆದ ಬಳ್ಳಿಗಳನ್ನು ತಿಂದ ಹುಳಗಳಿಗೆ ಆರೋಗ್ಯ ಕೊಟ್ಟಿರಬಹುದು ವಿನಹ ನಮಗೇನು ಪ್ರಯೋಜನ ಆಗಲಿಲ್ಲ.

ಲಾಕ್ ಡೌನ್ ಸಮಯದಲ್ಲಿ ಮಾಡಿದ ಆನ್ಲೈನ್ ವಿಚಾರಸಂಕಿರಣ, ವಿಮರ್ಶೆ, ಕೊರೊನಾ ಜಾಗೃತಿ ಕಾರ್ಯಕ್ರಮ, ಲಾಕ್ ಡೌನ್ ಸಮಯ ಕಳೆಯುವ ಸಲಹೆಗಳು, ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವ ಸಲಹೆಗಳು, ಸಾಹಿತ್ಯ ಸ್ಪರ್ಧೆ- ಮಾಹಿತಿಗಳು, ವಿವಿಧ ವಿಷಯಗಳ ರಸಪ್ರಶ್ನೆ ಸ್ಪರ್ಧೆಗಳು, ಹೊಸ ಶಿಕ್ಷಣ ವಿಧಾನದ ಆಲೋಚನೆಗಳ ವಿಮರ್ಶೆಗಳು ಅದೇರೀತಿ ವಿವಿಧ ಆಟೋಟ ಚಟುವಟಿಕೆಗಳ ಕಾರ್ಯಕ್ರಮಗಳು ಹೇರಳವಾಗಿ ನಡೆದಿದ್ದು, ಎಲ್ಲಾ ಕಾರ್ಯಕ್ರಮಗಳಲ್ಲಿ ಡಿಜಿಟಲ್ ಸರ್ಟಿಫಿಕೇಟ್ ನೀಡುತ್ತಿದ್ದರು. ಯಾರು ಎಷ್ಟು ಕೇಳಿದ್ದಾರೆ, ಯಾರು ಎಷ್ಟು ವಿಷಯಗಳನ್ನು ಅರ್ಥೈಸಿಕೊಂಡಿದ್ದಾರೆ, ಯಾರಿಗಾದರೂ ಇದರಿಂದ ಪ್ರಯೋಜನವಾಗಿದೆಯೇ ಅಥವಾ ಭಾಗವಹಿಸಲು ಒತ್ತಾಯಿಸಿದ ಯಾರಿಗೋ ಬೇಕಾಗಿ ಬಂದಿದ್ದಾರೋ ಎಂದು ತಿಳಿಯದೆ ಸಂಯೋಜಕರು ಮತ್ತಷ್ಟು ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಸಂಚಾರಕ್ಕಾಗಿ ಸಮಯವನ್ನು ವ್ಯಯ ಮಾಡದೆ, ಸಮಯವನ್ನು ಉಪಯೋಗಿಸಿಕೊಂಡು ಹೊಸ ವಿಷಯಗಳನ್ನು ತಿಳಿಯುವ ಬಯಕೆಯಿಂದ ಕಾದು ಕುಳಿತಿದ್ದವರಿಗೆ ಲಾಕ್ ಡೌನ್ ಮೂಲಕ ಈ ಕಾರ್ಯಕ್ರಮಗಳು ಹೆಚ್ಚು ಖುಷಿ ಕೊಟ್ಟಿರಬಹುದು. ಈ ಕಾರ್ಯಕ್ರಮಗಳಿಂದ ನಮ್ಮ ಏಕಮುಖಿ ವಿಕಸನದ ಸಣ್ಣತನದಿಂದ, ಬಹುಮುಖಿ ಪ್ರತಿಭಾವಂತನಾಗುವುದಕ್ಕೆ ಇರುವ ಅವಕಾಶಗಳನ್ನು ತೆರೆದುಕೊಟ್ಟಿತು. ಉಪಯೋಗಿಸಿಕೊಂಡವರೆಷ್ಟೋ, ಕೇವಲ ಹಾಜರಾತಿ ಬಂದವರು ಎಷ್ಟೋ....  ಶಿವನೇ ಬಲ್ಲ.

ಬರೆದಷ್ಟು ಮತ್ತಷ್ಟೂ ನೆನಪಾಗುವಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದರಿಂದ, ಜೀವನದಲ್ಲಿ ಬದಲಾವಣೆಗೆ ಎಷ್ಟು ಮಹತ್ವ ಇದೆ ಎಂಬುದನ್ನು ಲಾಕ್ಡೌನ್ ತಿಳಿಸಿತು. ಮನೆಯಲ್ಲಿ ಅನುಭವ ಕಥನಗಳ ಸಾಗರದಂತೆ ಅಜ್ಜ-ಅಜ್ಜಿಯೂ ಮನೆಯಲ್ಲಿ ಇರುವುದರಿಂದ, ಲಾಕ್ ಡೌನ್ ಇನ್ನೊಮ್ಮೆ ಬಂದರೂ ಸಮಯ ಔದಾಸೀನ್ಯ ಬಾಧಿಸುವ ಚಿಂತೆ ಇಲ್ಲ. ಈ ಅನುಭವ ಲೇಖನದ ನಕಶಿಖಾಂತದವರೆಗೂ ಎಲ್ಲೂ ಉಲ್ಲೇಖಿಸದ ಒಂದು ಋಣಾತ್ಮಕ ವಿಷಯವು, ಜೀವನದಲ್ಲಿ ಧನಾತ್ಮಕ ಫಲ ಬಂದರೆ ಕೆಟ್ಟದು ಎಂಬ ಹೊಸ ತತ್ವ ಮಾಡಿಬಿಟ್ಟಿತು. ದೂರಮಾಡಲು ಬಯಸುವುದನ್ನು ತಿರಸ್ಕರಿಸಿ, ಅಗತ್ಯವಿರುವ ವಿಷಯಗಳ ಬಗ್ಗೆ ಮಾತ್ರ ವಿವರಿಸಿಕೊಂಡು ಹೋಗುವುದು ಉತ್ತಮ, ಎಂದು ನನಗೆ ಅನ್ನಿಸಿದ್ದರಿಂದ ಆ ಸೋಂಕಿನ ಹೆಸರನ್ನೂ ಸೇರಿಸದೆ ಈ ಲೇಖನ ಬರೆದೆ. ಆತ್ಮಸಾಕ್ಷಿಯಾಗಿ ನನ್ನನ್ನು ನಾನು ಕೇಳಿಕೊಂಡರೆ ಏನು ಮಾಡಿಲ್ಲವಲ್ಲ ಎಂದು ತೋರಿದ್ದರೂ, ಹೇಳಬಹುದಾದ ಒಂದಷ್ಟು ವಿಷಯಗಳಿದೆ ಎಂಬುದು ಈ ಲೇಖನ ಬರೆದಾಗಲೇ ಗೊತ್ತಾಗಿದ್ದು.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ರಸ ಮಥನ. All rights reserved. Distributed by ASThemesWorld