Contact Angle Touch Studio for your Blog Design. Visit Site

ಸ್ವಾತಂತ್ರ್ಯದ ಆಶಯಗಳಿಗೆ ಎದುರಾದ ಸವಾಲನ್ನು ನಾವು ನಿಭಾಯಿಸುವ ರೀತಿಗಳು

ಮುನ್ನುಡಿ

ಸ್ವಾತಂತ್ರ್ಯ, ಎಂಬುದು ರಾಷ್ಟ್ರದ ಸ್ವಚಿಂತನೆಯ ಅಧಿಕಾರಕ್ಕೆ ಮತ್ತು ದೇಶದ ನಾಗರಿಕರ ವಿಶಾಲ ಚಿಂತನೆಗೆ ಅವಕಾಶ ಒದಗಿಸುತ್ತದೆ. ನಾಗರಿಕರಿಗೆ ಒದಗಿಸಲ್ಪಟ್ಟ ಎಲ್ಲಾ ಅವಕಾಶಗಳು, ಸೌಲಭ್ಯ ಮತ್ತು ಚಲಾಯಿಸಬಹುದಾದ ಹಕ್ಕುಗಳು ಸ್ವಾತಂತ್ರ್ಯಾನಂತರ ರೂಪಿಸಿದ ಸಂವಿಧಾನದ ಕೊಡುಗೆಯಾಗಿದೆ. ಕಂಡಮಟ್ಟಿಗೆ ಪ್ರತ್ಯೇಕತಾವಾದ ಸಂವಿಧಾನದ ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯವು ಸಾಧಿಸಿಕೊಟ್ಟ  ಸ್ವ-ಅಧಿಕಾರವನ್ನು ನಿತಂತ್ರಿಸಲು ಸಂವಿಧಾನ ಅಗತ್ಯ. ಆ ಸಂವಿಧಾನದ ರೂಪೀಕರಣ , ದೇಶದ ಸಾರ್ವಭೌಮತ್ವಕ್ಕೆ ಗೌರವಿಸಿ, ಬಹುಜನ ಅಭಿಮತದ ಅನ್ವಯ ಸಕ್ರಿಯವಾಯಿತು. ವೈವಿಧ್ಯತೆ ಎಂಬ ವಿಷಯವನ್ನು 'ಕೇವಲ' ಅಂತ ಕಾಣಲು ಸಾಧ್ಯವಿಲ್ಲ. ಇದೊಂದು ವಿಷಯ ಅದೆಷ್ಟೋ ಹಿರಿಮೆ ಗರಿಮೆಗಳಿಗೂ, ನಿಯಂತ್ರಣಾತೀತ ಸಂದಿಗ್ಧತೆಗೂ ಅವಕಾಶ ನೀಡುತ್ತದೆ.

(Photo Credit:- Google)
ಮುಖ್ಯ ವಿಷಯ
ಸ್ವಾತಂತ್ರ್ಯದ ಆಶಯಗಳು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಬಹುದು. ಸಾಂವಿಧಾನಿಕ ತತ್ವಗಳು ಒಂದು ವಾಕ್ಯದಲ್ಲಿ ಮುಗಿಯುವಂತದ್ದಲ್ಲ. ಬಹುಶಹ ಇದೇ ಕಾರಣದಿಂದ ಸ್ವಾತಂತ್ರ್ಯದ ಆಶಯಗಳಿಗೆ ಸಾಂವಿಧಾನಿಕ ನಿರ್ಧಾರಗಳು ಮಾರಕವಾಗಿಲ್ಲ ಎಂದು ಮಾತ್ರ ಹೇಳಬಹುದು. ಪೂರಕವಾಗಿ ಜವಾಬ್ದಾರಿಯುತ ಸ್ಥಾನವನ್ನು ಸಂವಿಧಾನ ಅಲಂಕರಿಸುವುದಾದರೂ ಅದರ ವಿಶಾಲವಾದ 'ಸಮಾನತೆಯ ದೃಷ್ಟಿ' ಎಂಬ ವಿಶೇಷತೆಯು ಒಂದು ಕಟ್ಟುನಿಟ್ಟಿನ ನಿರ್ಧಾರಗಳಿಗೆ ಅಥವಾ ಸರಳ ಅವಿರೋಧ ತೀರ್ಪುಗಳನ್ನು ನಿರ್ವಚಿಸುವಲ್ಲಿ ಕಬ್ಬಿಣದ ಕಡಲೆಯಾಗುತ್ತಿದೆ ಎನ್ನಬಹುದು. ಅದೆಷ್ಟೋ ನೀತಿ ನಿಯಮಗಳು, ಜವಾಬ್ದಾರಿಯುತ ನಾಗರಿಕನಿಗೆ ಹೇರಿಕೆಯಾಗಿ ಬಸವಾಗುವುದು ವಿಭಿನ್ನ ದೃಷ್ಟಿಯ ಕಾರಣದಿಂದ. 'ವಿಭಿನ್ನತೆ' ನಮ್ಮ ಸಂವಿಧಾನ ಕೇಳಿ ಪಡೆದ ವಿಶೇಷತೆಯಾದರಿಂದ ಪ್ರಶ್ನಿಸುವಂತಿಲ್ಲ ವಿರೋಧಿಸುವಂತಿಲ್ಲ. ನನ್ನ ಅನಿಸಿಕೆಯ ಪ್ರಕಾರ ಸಂವಿಧಾನಿಕ ಆಶಯಗಳನ್ನು ಪ್ರಶ್ನಿಸಬೇಕು, ಪ್ರಶ್ನೆಸಬಾರದು ಎಂಬ ಅಭಿಪ್ರಾಯ ವ್ಯತ್ಯಾಸಗಳು ಕೂಡ ನಮ್ಮ ದೇಶದಲ್ಲಿರುವ ವೈವಿಧ್ಯತೆಗೆ ಸಾಕ್ಷಿ. ಕೆಲವೊಂದು ವಿಶೇಷತೆಗಳು ಜೀವನದಲ್ಲಿ ಅನುಭವಿಸುವುದಕ್ಕೆ ಎಂದು ತಿಳಿಯಬೇಕು ಮತ್ತು ಒದಗಿದ ಭಾಗ್ಯಕ್ಕೆ ಹೆಮ್ಮೆ ಮತ್ತು ಸಾರ್ಥಕತೆ ಭಾವಿಸಬೇಕು ಎಂದು ಉಪದೇಶ ಕೇಳಿದ್ದೇವೆ. ಅದುವೇ ಉಪದೇಶ ರಾಷ್ಟ್ರೀಯ ಚಿಂತನೆಗಳಿಗೂ ಅನ್ವಯ. ದೇಶದ ಅನಂತ ಹಿರಿಮೆ ಗರಿಮೆಗಳನ್ನು, ಶ್ರೀಮಂತ ಹಿನ್ನೆಲೆಯನ್ನು (ಸ್ವಲ್ಪವಾದರೂ) ಉಳಿಸಿಕೊಂಡ ಧೀರ ಚರಿತೆಗಳನ್ನು ಹಾಗೂ ದಾಪುಗಾಲು ಇಡುತ್ತಿರುವ ಹೆಮ್ಮೆಯ ಮುನ್ನಡೆಯನ್ನೂ ಕಂಡು ಸಾರ್ಥಕ್ಯ ಅನುಭವಿಸಿ ನಮ್ಮದಾದ ಕೊಡುಗೆ ಏನು ಎಂದು ಚಿಂತಿಸಬೇಕು. ವಿಮರ್ಶೆಗಳು ಸಂಧಿಸುವುದು ಯಾವುದೋ ಒಂದು ರೀತಿಯ ಸ್ವಾರ್ಥದಿಂದ ಎಂಬುದು ವಿಮರ್ಶಕರು ಕೂಡಾ ಸಮ್ಮತಿಸುವ ಸತ್ಯ. 


ನನ್ನ ನಿಗಮನದಂತೆ ಸ್ವಾತಂತ್ರ್ಯದ ಆಶಯಗಳಿಗೆ ಎದುರಾಗಿ ಕಂಡುಬರುವ ವಾದಗಳ ಉದ್ಭವ  ನಾಲ್ಕು ವಿಧಗಳಲ್ಲಾಗಿ ಮೈತಳೆಯುತ್ತದೆ. ಜಾತಿ, ಭಾಷೆ, ಪೀಳಿಗೆ ಮತ್ತು ರಾಜಕೀಯ ಪಕ್ಷ. ಎಲ್ಲಾ ವಿಧಗಳಲ್ಲೂ ವೈವಿಧ್ಯತೆಯೂ ಗಮನಾರ್ಹ ವಿಷಯ. ವಿವಿಧ ಜಾತಿ, ವಿವಿಧ ಭಾಷೆ, ವಿವಿಧ ಪೀಳಿಗೆ ಮತ್ತು ವಿವಿಧ ರಾಜಕೀಯ ಪಕ್ಷಗಳ ಮಧ್ಯೆ ಸಾಧಾರಣ ಇರುವ ವ್ಯತ್ಯಾಸಗಳು ಹಾಗೂ ವ್ಯಕ್ತಿಗತ ಅನುಭವ ಸಾಧ್ಯತೆಗಳಿಂದ ಉದ್ಭವಿಸುವ ಭಿನ್ನಾಭಿಪ್ರಾಯಗಳು ಸ್ವಾತಂತ್ರ್ಯದ ಆಶಯವನ್ನು ಅಥವಾ ಸಾಂವಿಧಾನಿಕ ಅಸಮರ್ಥತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. 


ಮೊದಲಾಗಿ ಜಾತಿ, ಯಾಕೆ ಮತಗಳ ಭಿನ್ನತೆಗಳಿಗಿಂತಲೂ ಹೆಚ್ಚಾಗಿ ಜಾತಿಗಳ ಭಿನ್ನತೆಯು ಸ್ವಾತಂತ್ರ್ಯದ ಆಶಯಕ್ಕೆ ಎದುರಾದಂತೆ ಕಾಣುವುದೆಂದರೆ, ಜಾತ್ಯಾತೀತ ಸಮಾಜದ ಜಾತಿ ಹೆಸರಿನ ವೈಷಮ್ಯ ಮತ್ತು ಮೇಲ್ಜಾತಿ, ಕೀಳ್ಜಾತಿಗಳೆಂಬ ಪಿಡುಗುಗಳು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಸಮಾನತೆ ಎಂಬ ತಕ್ಕಡಿಯಲ್ಲಿಟ್ಟು ಬಲಪ್ರಯೋಗಿಸಿ ಸರಿದೂಗಲಾಗಿದೆ. ಹೆಚ್ಚಾಗಿ ಸ್ವಾತಂತ್ರ್ಯ ಎದುರಾದ ಆಶಯಗಳ ಅವಿರ್ಭಾವವು ಈ ಹಂತದಲ್ಲಾಗಿದೆ. ಬಹು ಸಂಖ್ಯೆ, ನಾಯಕರ ಸಮಾನ ಆಶಯ ಮತ್ತು ಒಂದು ವಾದಕ್ಕೆ ಹೆಚ್ಚಾಗಿರುವ ಒಲವು ಮುಂತಾದ ಪ್ರೇರಣಾ ವಿಷಯಗಳಿಂದಾಗಿ 'ಸಂವಿಧಾನಿಕ ನಿಯಮ ಪಾಲನೆಯಲ್ಲಿ ತರ್ಕ ಬದ್ಧ ಲೋಪದೋಷವಿದೆ' ಎಂದು ಪರಿಗಣಿಸಿ (ಮೌನವಾಗಿ) ವಿರೋಧ ದಾರಿಯಲ್ಲಿ ಮುನ್ನುಗುತ್ತಾರೆ. ಸಮಾಜ 'ಸಾಂವಿಧಾನಿಕ ನಿಯಮ ಪಾಲನೆ ಆಗುತ್ತಿದೆಯೇ!' ಎಂದು ಗಮನಿಸುವಷ್ಟರಲ್ಲಿ ಯೋಜನೆ ಯೋಜನೆಗಳು ಕಾರ್ಯ ಸಾಧನೆ ಮಾಡಿ ಆಗಿರುತ್ತದೆ.


ಭಾಷೆ. ಭಾಷಾವಾರು ರಾಜ್ಯಗಳನ್ನಾಗಿ ವಿಂಗಡಿಸಿದ ಆಗಿನಿಂದ ಭಾಷಾ ಪ್ರಾಬಲ್ಯದ ಮೇಲೆ ನಿಯಮದ ದಬ್ಬಾಳಿಕೆ ನಡೆಯುತ್ತಿದೆ. ಗಡಿನಾಡು ಅಲ್ಪಸಂಖ್ಯಾತ ಒಳ ಭಾಷೆಗಳು ಸ್ವಾತಂತ್ರ್ಯದ ಆಶಯಗಳಿಗೆ ಪೂರಕವಾಗಿ ನಡೆಯಲು ಯತ್ನಿಸಿದರೂ, ಜನಬೆಂಬಲ ಹೊಂದಿದ ಮತ್ತು ವಿಶಾಲ ಅಧಿಕಾರ ಪರಿಧಿಯ ರಾಷ್ಟ್ರೀಯ ಅಂಗೀಕೃತ ಭಾಷೆಗಳು ದಬ್ಬಾಳಿಕೆ ನಡೆಸುತ್ತಿದೆ. 'ಸ್ವಾತಂತ್ರ್ಯದ ನೆಲೆ ಗಟ್ಟಿಗೊಳಿಸಲು ನಿಯಮ ರಚಿಸಿ, ಸಂವಿಧಾನ ಸರಿಯಾಗಿ ಪಾಲನೆ ಆಗಲು ಸಾರ್ವತ್ರಿಕರಣ ನಡೆಸಬೇಕಾಗುತ್ತದೆ' ಎಂದು ಹೇಳಿ, ಭಾಷಾ ಅಲ್ಪಸಂಖ್ಯಾತರಿಗೂ ಗಡಿನಾಡ ಜನತೆಗೂ ಅರ್ಹತೆಯಷ್ಟು ಸೌಲಭ್ಯ ಒದಗಿಸದೆ ಏನೂ ಆಗದಂತೆ ಮುಚ್ಚಿಬಿಡುತ್ತದೆ. 


ಪೀಳಿಗೆ. ಪೀಳಿಗೆ ಎಂಬುದು ಸ್ವಾತಂತ್ರ್ಯದ ಆಶಯಗಳಲ್ಲಿ ಭಿನ್ನಾಭಿಪ್ರಾಯ ಮತ್ತು ಕಟುವಾದ ವಿರೋಧ ಭಾವದಿಂದ ಮುನ್ನಡೆಯುವಂತೆ ಮಾಡುತ್ತದೆ. ಮುಂದೆಂದೂ ಅನುಸರಿಸಿ ಗೌರವಿಸಿ ಎತ್ತಿ ಹಿಡಿಯುವಂತೆ ಸೃಷ್ಟಿಸಿರುವ ಸಂವಿಧಾನದ ಆಶಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಆಗುವ ಜೀವನ ಶೈಲಿಯ ಭಿನ್ನತೆಗಳಿಂದ ಕುಂಟು ನೆವ ಹುಡುಕುವಂತೆ ಮಾಡುತ್ತದೆ. 'ಅಂದು ಇದ್ದ ಬಹುತೇಕ ಟ್ರೆಂಡ್ ಗಳು ಈಗ ಯಾರಿಗೂ ಬೇಡವಾಗಿದೆ' ಎಂಬ ಉದಾಹರಣೆಯಿಂದಲೇ, 'ಅಂದಿನ ನಿಯಮ ಈಗ ಹೇಗೆ ಸರಿಯಾಗುತ್ತದೆ?' ಎಂದು ಪ್ರಶ್ನಿಸುವವರನ್ನು ಸೃಷ್ಟಿಸುತ್ತದೆ. ನವ ಪೀಳಿಗೆಯ ಅವಸರದ ವೇಗದ ಸಂಕ್ಷಿಪ್ತ ಮನಸ್ಥಿತಿಯ ಯಾಂತ್ರಿಕ ಜೀವನದಲ್ಲಿ, ಹಿಂದೆ ರಚಿಸಿ ಅನುಸರಿಸಬೇಕೆಂದು ಘೋಷಿಸಿದ ಸಂವಿಧಾನಕ್ಕೆ ಪ್ರಾಶಸ್ತ್ಯ ನೀಡಬೇಕೆಂದು ತೋರುವುದೂ ತೀರಾ ವಿರಳ. ಇಂತಹ ಸಂದಿಗ್ದ ಸಮಯಗಳಲ್ಲಿ ಆಶಯಕ್ಕೆ ವಿರುದ್ಧವಾದ ನೀತಿ ಯೋಜನೆ ಆದೇಶಗಳು ಹೊರಬರುತ್ತದೆ. ಬಹುಜನ ಮೆಚ್ಚುಗೆಗೆ ಪಾತ್ರವಾಗುವ ಈ ಯೋಜನೆಗಳ ಸಾಂವಿಧಾನಿಕ ನೆಲೆಯನ್ನು ಪರಿಗಣಿಸುವ ತಾಳ್ಮೆ ಯಾರಿಗೂ ಇರುವುದಿಲ್ಲ. ಅದೇ ರೀತಿ ಕೆಳ ವರ್ಗದ ಜೀವನ ನಡೆಸುವವರೂ ಮೇಲು ವರ್ಗದ ಜೀವನ ನಡೆಸುವವರೂ ಜೊತೆಗೆ ಮಧ್ಯದಲ್ಲಿ ನರಕ ಯಾತನೆ ಅನುಭವಿಸುವವರೂ ಅವರವರ ಸ್ವಾರ್ಥದ ಆಸೆಗೆ ಸಾಂವಿಧಾನದ ಕಗ್ಗೊಲೆ ನಡೆಸಲೆತ್ನಿಸುವುದು ವಿಷಾದನೀಯ.


ರಾಜಕೀಯ ಪಕ್ಷಗಳು ಎಂಬ ಕೊನೆಯ ವಿಭಾಗವನ್ನು ಪರಿಕಿಸಿದರೆ, ಅಧಿಕಾರ ಅವಧಿಯಲ್ಲಿ ಯೋಜನೆಗಳು ಹೇಗಿರಬೇಕು ಎಂದು ಮೊದಲೇ ಯೋಚಿಸಿ ತಯಾರು ಮಾಡಿರುತ್ತಾರೆ. ಒಮ್ಮೆ ಅಧಿಕಾರ ಕೈಗೆಟಕಿದರೆ ಸಾಕು ತಮ್ಮವರಿಗೆ, ತಮ್ಮ ಅನುಯಾಯಿಗಳಿಗೆ ಹಾಗೂ ತಮ್ಮ ಜನರು ಒಳಗೊಂಡ ವಿಭಾಗಕ್ಕೆ ಪೂರಕವೂ ಸಂತೃಪ್ತಿಯೂ ಆಗುವಂತೆ ನೀತಿ ನಿಯಮಗಳನ್ನು ತಿದ್ದಿ ಬರೆಯುತ್ತಾರೆ. ಸಾಂವಿಧಾನಿಕ ನೆಲೆಗಟ್ಟಿಗೆ ಪ್ರಾಶಸ್ತ್ಯ ಸಿಗದೆ, ಬಹುಮತದ ಹುಂಬತನಕ್ಕೆ ಬೆಲೆ ಸಿಗುತ್ತದೆ. ತಕರಾರು ಎಬ್ಬಿಸಿ ಅಧಿಕಾರದಲ್ಲಿರುವ ಪಕ್ಷವನ್ನು ದೂರುತ್ತಿರಬೇಕು ಎಂಬ ನಿಟ್ಟಿನಲ್ಲಾದರೂ, ವಿರೋಧ ಪಕ್ಷ ಇದನ್ನೆಲ್ಲಾ ಪ್ರಶ್ನಿಸದೆ ಬಿಡದು. ಆದರೆ ಅಧಿಕಾರಕ್ಕೆ ಬಂದರೆ ನಾವು 'ಅವರಕ್ಕಿಂತ ನಾವು ಕಡಿಮೆಯೇನಲ್ಲ' ಎಂದು ದೃಷ್ಟಾಂತ ಸಮೇತ ಸಾಧಿಸಿ ಮೀಸೆ ತಿರುಗಿಸುತ್ತವೆ .


ರಾಷ್ಟ್ರದ ಉನ್ನತೋನ್ನತ ಸಾಧನೆಗಳ ಹಿಂದೆ ಜನರು ಅಲಕ್ಷಿಸಿದ ಕೆಲವು ಸಂವಿಧಾನ ಪರಿಪಾಲನೆಯ ದೋಷಗಳನ್ನು ಹುಡುಕಬಹುದು. ಆದರೆ ಅದು ಸಂವಿಧಾನದ ತಿದ್ದುಪಡಿಗೆ ಅವಕಾಶ ಒದಗದೆ ಶಿಕ್ಷಾರ್ಹವೆಂದೂ ಪರಿಗಣಿಸದೆ ಮೌನ ತಾಳುವುದು ಬೇಸರದ ಸಂಗತಿ. ಯಾರು ಬಲಿಷ್ಠರೋ ಅವರು ಬದುಕುತ್ತಾರೆ ಇದು ಜಗದ ನಿಯಮ. ದೇಹ ಬಲಾಡ್ಯತೆ ಮಾತ್ರ ಬೇಕು ಎಂದಲ್ಲ, ಈ ತೀಕ್ಷ್ಣ ಬುದ್ಧಿಯೂ ಬಲಿಷ್ಠತೆಗೆ ಸಮ. ಯಾವುದೇ ನಿಬಂಧನೆಗಳಿಂದ ಬಂಧಿಸಲಿ, ಯಾವುದೇ ನೀತಿ ನಿಯಮಗಳಿಂದ ನಿಯಂತ್ರಿಸಲು ಯತ್ನಿಸಲಿ ಅಥವಾ ಯಾವುದೇ ಸಂವಿಧಾನದ ವಿಭಾಗಗಳು ಅರ್ಹತೆ - ಕರ್ತವ್ಯಗಳನ್ನು ಪಟ್ಟಿ ಮಾಡಲಿ, ಬದುಕುವ ಜೀವನವು ಬಯಸಿದ ಸ್ವಾರ್ಥ ಸಾಧನೆಯ ಹಾದಿಯಲ್ಲಿ ಇದೆಲ್ಲಾ ಅಲಕ್ಷ್ಯ. 

ಉಪಸಂಹಾರ 

ಇದಕ್ಕೆ ಉಪಸಂಹಾರವೇ ಇಲ್ಲವೇ?. ಇದೆ ನೋಡಿ. ದೇಶದ ವೈವಿಧ್ಯತೆಗೆ ನಮಿಸುವುದು ಹೆಮ್ಮೆಪಡುವುದು, ತಾನು ಬದುಕುವ ರೀತಿಯಲ್ಲಿ ಸಂತೃಪ್ತ ಭಾವ ಹಾಗೂ ಇತರರು ಬದುಕುವ ರೀತಿ 'ಅದು ಅವರದ್ದು' ಎಂಬ ಪರಿಗಣನೆ ಮನ್ನಣೆ ಇದ್ದರೆ ಸಾಕು. ನಾನು ನೋಡುವದನ್ನೇ ಅವರು ನೋಡಿದ್ದು ಹೌದಾದರೂ ನನ್ನ ನಿಗಮನದಂತೆ ಅವರದ್ದಿರಬೇಕು ಎನ್ನುವುದು ಮೂಢತನ. ರಾಷ್ಟ್ರದ ನಿಯಂತ್ರಣ ಅಷ್ಟು ಸುಲಭದ ಮಾತಲ್ಲ ಸಂವಿಧಾನದ ಚೌಕಟ್ಟು ಎಂಬುದು ಈ ರಾಷ್ಟ್ರದ ಗಟ್ಟಿ ಅಡಿಪಾಯ, ಬನ್ನಿ ಭವಿಷ್ಯ ಬರೆಯೋಣ…

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ರಸ ಮಥನ. All rights reserved. Distributed by ASThemesWorld