"ಮಾಸ್... ಮಾಸ್..." ಅಂತ ನಾಲಿಗೆ ಉರುಳದೆ ಚಡಪಡಿಸುತ್ತಿದ್ದ ಅಜ್ಜಿ, ಈಗ ತಿಂಗಳು ಒಂದರೊಳಗೆ ಚೆನ್ನಾಗಿಯೇ ಹೇಳುತ್ತಿದ್ದಾರೆ. ಹೆಸರು ಬಾಯಿಗೆ ಬಾರದೆ, ಟಿ.ವಿ. ನೋಡಿ ತಿಳಿದ ಜನರು 'ಮುಖದ ಕಾಚ' ಅಂತ ಗುರುತಿಸಿದ್ದೂ ಉಂಟು. ಹಿಂದಿಯ ಮೂಲಕ ಬಂದ ಹೆಸರು ಈಗ ಕೆಲವು ಕಡೆ 'ಮೂ-ಕಿ-ಕಾಚ' ಅಂತ ಪ್ರಸಿದ್ಧಿಯಲ್ಲಿ ಇದೆ.ಹೆಸರು ಬಾಯಿಗೆ ಬಾರದಿದ್ದರೂ ಬಟ್ಟೆ ತುಂಡು ಬಾಯಿಗೆ ಬಂದರೆ ಸಾಕು ಅಂತ ವಿಧಿ. ತುಂಡು ಬಟ್ಟೆಗೆ ನಾಲ್ಕು ಬಟ್ಟೆಯ ದಾರ ಸೇರಿಸಿ ಹೊಲೆದುಕೊಟ್ಟ ಮೂಕಿಕಾಚಗಳು, ಅಜ್ಜನ ಲಂಗೋಟಿಗಿಂತ ಹೆಚ್ಚು ವ್ಯತ್ಯಾಸ ಇಲ್ಲ. ಪುರಂದರ ದಾಸರು ಹೇಳಿದ್ದು ನೆನಪಾಗುತ್ತದೆ,
"ಲಂಗೋಟಿ ಬಲು ಒಳ್ಳೇದಣ್ಣ.....
ಮಡಿವಂತರಾ ಮಿತ್ರ
ಮಡಿವಾಳರಾ ಶತ್ರು
ಲಂಗೋಟಿ ಬಲು ಒಳ್ಳೇದಣ್ಣ....."
ಅಜ್ಜನಿಗೆ ಬೆಳಗ್ಗೆ ಸ್ನಾನ ಮುಗಿಸಿದ ಮೇಲೆ ಮೂಕಿಕಾಚ ಮತ್ತು ಲಂಗೋಟಿ ಅದಲು ಬದಲಾಗಬಹುದು ಎಂಬ ಅಸಾಧ್ಯ ಹಾಸ್ಯ ಹೆಚ್ಚು ನಗು ತರಿಸಲಿಲ್ಲ. ಜನರು ಆಸ್ಪತ್ರೆಗಳಲ್ಲಿ ಕಾಣುತ್ತಿದ್ದ ವಸ್ತುಗಳು ಸಾಮಾನ್ಯರ ಮನೆಯವರೆಗೆ ತಲುಪಲು ತಿಂಗಳು ಹಿಡಿಯಲಿಲ್ಲ.
ಹೆಸರಿನಿಂದಲೇ ಮೊದಲು ಕೌತುಕ ತಂದ ಮಾಸ್ಕನ್ನೂ ಮೊದಲು ಕಂಡುಹಿಡಿದವರು ಅದೇ ಚೀನಾದವರು, ಎನ್ನುವ ಮಾಹಿತಿ ಸಿಟ್ಟು ಹೆಚ್ಚಿಸುವ ವಿಷಯ. ಮೊದಮೊದಲ ಮೂಕಿಕಾಚ ಹಾಕಿದ ಅನುಭವಗಳು ಹತ್ತು-ಹಲವು. ಬೀಡ - ಪಾನ್ ಸೇವಿಸುವವರಂತೂ ನಾಟಕದ ಹನುಮಂತನಂತೆ, ಬಾಯಿಯ ಸುತ್ತಲೂ ಕೆಂಪು ಬಣ್ಣ ಮಾಡಿಕೊಂಡು ನೀರಿನ ನಳ್ಳಿಯ ಬಳಿ ಓಡುತ್ತಿದ್ದರು. ಬಾಯಿಚಪ್ಪರಿಸಿದಾಗ ಖರೀದಿಸಿದ ಚಾಕಲೇಟನ್ನು ಅಥವಾ ಐಸ್ ಕ್ರೀಮ್ ಅನ್ನು, ಮಾಸ್ಕ್ ಹಾಕಿಕೊಂಡೇ ತಿಂದವರು, ಮತ್ತೆ ಪುನಃ ಮಾಸ್ಕ್ , ಚಾಕಲೇಟ್ ಮತ್ತು ಐಸ್ ಕ್ರೀಮ್ ಖರೀದಿಸಬೇಕಾಯಿತು. ಇದೀಗ ತರಕಾರಿ ಮತ್ತು ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳಲ್ಲೂ ಮಾಸ್ಕ್ ಸೇನಿಟೈಸರ್ ಗಳು ಮಾರಾಟಕ್ಕೆ ಲಭ್ಯವಿದೆ. ಮಾಸ್ಕ್ ಧಾರಣೆಯ ಅವಶ್ಯಕತೆ ತಿಳಿದಾಗ ಅಂಗಡಿಗಳಲ್ಲಿ ಮಾಸ್ಕ್ ಗಳ ಬೇಡಿಕೆ ಹೆಚ್ಚಾಗಿತ್ತು. ಆಗ ಅಂಗಡಿಯ ಮಾಲೀಕರು ಹೆಚ್ಚು ಹಣ ಕೊಟ್ಟು ಮಾಸ್ಕ್ ತರಿಸಿ, ಮಾರಾಟಕ್ಕೆ ಇಟ್ಟರು. ಅಂದು ಅಂಗಡಿಯ ಮಾಲಿಕ 25 ರೂಪಾಯಿ ಕೊಟ್ಟು ತಂದ ಮಾಸ್ಕ್, ಈಗ 10 ರೂಪಾಯಿಗೆ ಗ್ರಾಹಕರಿಗೆ ತಲುಪುತ್ತಿದೆ. ಅಂದು ತಂದ ಮಾಸ್ಕ್ ಹಿಂತಿರುಗಿಸಲೂ ಆಗದೆ, ಸೋತುಹೋದ ಅಂಗಡಿ ಮಾಲೀಕರು ಹಲವರು. ಮೊದಮೊದಲು ಅನಿವಾರ್ಯತೆಗೆ ಖರೀದಿಸುತ್ತಿದ್ದ ಜನರು, ಈಗ ಬೇಡಿಕೆ ಇಂದ ವೆರೈಟಿ ನೋಡುತ್ತಿದ್ದಾರೆ. ಹೆಂಗಸರು ಬಂದರೆ, "ಸಾರಿಗೆ ಮ್ಯಾಚ್ ಆಗುವ ಮಾಸ್ಕ್". ಮಕ್ಕಳು ಬಂದರೆ, "ಡಿಸೈನ್ ಮಾಸ್ಕ್". ಗಂಡಸರು ಬಂದರೆ, "ಕಡಿಮೆ ಹಣದ ಒಳ್ಳೆಯ ಮಾಸ್ಕ್!". ಆಕಡೆ "ಮಾಸ್ಕ್ ಹಾಕಿ ಅಭ್ಯಾಸ ಮಾಡಿಕೊಳ್ಳಿ" ಅಂತ ಅಧಿಕಾರಿಗಳ ಒತ್ತಡ ಬರುತ್ತಿದ್ದರೆ, ಈ ಕಡೆ ಕೆಲಸ ಕಳೆದುಕೊಂಡ ಗಂಡನಿಗೆ ಬ್ಯಾಗು ತುಂಬಾ ಮಾಸ್ಕ್ ಹೊಲಿದು ಕೊಟ್ಟು, ಹೆಂಡತಿ ಮನೆಯಿಂದ ಹೊರದಬ್ಬುತ್ತಿದ್ದಾಳೆ. ಮಾಸ್ಕ್ ಬಗ್ಗೆ ಪೀಠಿಕೆ ಹೀಗೆ ಮುಗಿಯುತ್ತದೆ.
ಮುಂದೆ ಮಾಸ್ಕ್ ಧಾರಣೆಯ ವೈವಿಧ್ಯತೆಯ ಬಗ್ಗೆ ಹೇಳುವುದಕ್ಕಿಂತ, ಪ್ಯಾಂಟ್ ಮೇಲೆ ಚಡ್ಡಿ ಹಾಕಿದ ಸೂಪರ್ ಮ್ಯಾನ್ ಬಗ್ಗೆ ಹೇಳುವುದು ಒಳ್ಳೆಯದು. "ಗೊತ್ತು ಮಾರಾಯ, ಸ್ವಲ್ಪ ಗಾಳಿ ತಗೊಂಡು ಆಮೇಲೆ ಸರಿಯಾಗಿ ಹಾಕ್ತೇನೆ" ಅಂತ ಹೇಳಿದರೆ, ಏನು ಮಾಡೋದು ಹೇಳಿ?. ಮನೆಗೆ ದಿನಸಿ ಸಾಮಾನುಗಳನ್ನು ಖರೀದಿಸಲು ಮಾರ್ಕೇಟ್ ಗೆ ಬರುವವರು ಮಾಸ್ಕ್ ಹಾಕುವುದು ಸಣ್ಣ ಮಕ್ಕಳು ಚಡ್ಡಿ ಹಾಕಿಕೊಂಡ ಹಾಗೆ. ಇಲ್ಲಿ ಮುಚ್ಚಬೇಕೋ ಅಲ್ಲಿ ಹಾಕದೆ, ಇನ್ನೆಲ್ಲೋ ಹಾಕಿಕೊಂಡು ಸಂಚಾರ. ಕೆಲವರಂತೂ ಗಾಳಿ ಸಿಗುದಿಲ್ಲ ಅಂತ, ಬಲೆಯ ಹಾಗಿರುವ ಮಾಸ್ಕನ್ನು ಧರಿಸಿಕೊಂಡಿದ್ದಾರೆ. ಇನ್ನು ಕೆಲವರು ಮಾಸ್ಕ್ ಧರಿಸುವುದು ಸಂಚರಿಸುವಾಗ ಮಾತ್ರ. ಎಲ್ಲಿ ನಿಂತರೂ, ಯಾರು ಮಾತನಾಡಿಸಿದರೂ ರಪ್ಪ ಮಾಸ್ಕ್ ಜಾರಿಸುವುದೇ. ನಮ್ಮ ಜನರಿಗೆ ಏನೇ ಆದರೂ ಮಾಸ್ಕ್ ಮೂಗಿಗೆ ಹಾಕುವುದಕ್ಕೆ ಆಗುವುದೇ ಇಲ್ಲ. ಹೆಚ್ಚು ಅಂದರೆ ಬಾಯಿ ಮುಚ್ಚುತ್ತದೆ ಅಷ್ಟೇ. ಹೆಂಗಸರಂತೂ ಬಲೆಯಂತಹ ಬಟ್ಟೆ ತುಂಡೊಂದನ್ನು ಹಿಡಿದು, ಯಾರು ಹತ್ತಿರ ಬಂದರೂ ಮೂಗಿನಮೇಲೆ ಅದನ್ನಿರಿಸಿ ಮಾತನಾಡುತ್ತಾರೆ. ನನ್ನ ಅರಿವಿನಂತೆ ಕೊರನಾ ಮತ್ತು ಮಿಡತೆಯ ವ್ಯತ್ಯಾಸ ಅವರಿಗೆ ಇನ್ನೂ ತಿಳಿದಿಲ್ಲ. ಎರಡೂ ಒಂದೇ ಸಮಯ ಪ್ರಚಾರ ಪಡೆದುಕೊಂಡ ಕಾರಣ, ಮಿಡತೆ ಗಾತ್ರದ ಕೊರೋನ ಬರುವಾಗ ಗೊತ್ತಾಗುತ್ತದೆ ಮತ್ತು ಆಗ ಮಾಸ್ಕ್ ಹಾಕಿದರಾಯಿತು ಎಂಬುದು ಅವರ ಚಿಂತನೆ. ಮೊನ್ನೆ ಒಬ್ಬ ಕುಡುಕನಂತೂ, ಇಡೀ ಪೇಟೆಗೆ ಪ್ರಚಾರ ಮಾಡುತ್ತಾ "ನಮ್ಮದು ಪರಶುರಾಮ ಭೂಮಿ, ಪರಶುರಾಮ ಭೂಮಿಯಲ್ಲಿ ಕೊರೋನ - ಗಿರೋನ ಎಲ್ಲ ಇರೋದಿಲ್ಲ" ಅಂತ ಬೊಬ್ಬಿರಿಯುತ್ತಿದ್ದ. ಕುಡಿದ ನಶೆ ಇಳಿದಾಗ "ಎಂತ ಮಾಡುದು ಸ್ವಾಮಿ?, ಲೋಕ ನಾಶವಾಗುತ್ತದೆ ನೋಡ್ತಾಯಿರಿ" ಅಂತ ಶಾಪ ಹಾಕುತ್ತಿದ್ದಾನೆ. ಈಗ ಮಾಸ್ಕ್ ಜೊತೆ ಗ್ಲೌಸ್ ಕೂಡ ಪ್ರಚಾರ ಪಡೆಯುತ್ತಿದ್ದು, ಅಂಗಡಿಗಳಲ್ಲಿ ಅವಶ್ಯಕತೆ ಎದ್ದುಕಾಣುತ್ತಿದೆ.
ಲಾಕ್ ಡೌನಿನ ಔದಾಸೀನ್ಯದ ಶಮನಕ್ಕಾಗಿ "ಮಾಸ್ಕಾಯನ"ವು ಹಾಸ್ಯಪೂರಿತವಾಗಿ ಬರೆಯಲು ಪ್ರಯತ್ನಿಸಿದ್ದರೂ, ಒಳಗೊಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಪ್ರಸ್ತುತ ಜನಜೀವನದಲ್ಲಿ ಪ್ರಜ್ಞಾವಂತ ಯುವ ಪೀಳಿಗೆಯು, ಮಸ್ಕಿನ ಕುರಿತಾಗಿ ಜನರಲ್ಲಿ ಎಚ್ಚರಿಸುವ ಕಾರ್ಯವನ್ನು ಮಾಡಬೇಕಾಗಿದೆ. ರಾಮಾಯಣದಲ್ಲಿ ಕಂಟಕನಾಗಿದ್ದ ರಾವಣನನ್ನು ಗೆಲ್ಲುವುದಕ್ಕೆ ಶ್ರೀ ರಾಮಬಾಣವೇ ಬೇಕಾಗಿಬಂತು, ಈಗ ಲೋಕ ಕಂಟಕವಾಗಿ ಮೆರೆಯುತ್ತಿರುವ ಕರೋನವನ್ನು ಗೆಲ್ಲಲು ರಾಮಬಾಣವಾಗಿ ಮಾಸ್ಕನ್ನು ಉಪಯೋಗಿಸಬೇಕಾಗಿದೆ.