ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ
ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ
ಕೌಡಿಂಕಾನವೆಂಬ ಕಠಿಣ ಕಾನನ ಪ್ರದೇಶವನ್ನು ತನ್ನ ತಪೋಭೂಮಿಯನ್ನಾಗಿ ಮಾಡಿಕೊಳ್ಳುತ್ತಾನೆ.
ಈತನ ತಪಸ್ಸಿನ ಪರೀಕ್ಷಾರ್ಥವಾಗಿ ಕಿರಾತ ರೂಪಿಯಾಗಿ ಧರೆಗಿಳಿದ ಶಿವ, ಮೃತ ಹಂದಿಯೊಂದರ
ಹಕ್ಕು ಸ್ಥಾಪನೆಯ ವಿಷಯದಲ್ಲಿ ಅರ್ಜುನನಲ್ಲಿ ಕಾದಾಟಕ್ಕಿಳಿಯುತ್ತಾನೆ. ಪರಿಣಾಮವಾಗಿ
ಕಿರಾತ ರೂಪಿ ಶಿವ ಹಾಗೂ ಅರ್ಜುನನ ಮಧ್ಯೆ ಭಾರೀ ಕದನ ಆರಂಭವಾಗುತ್ತದೆ. ಈ ಕಾದಾಟದಲ್ಲಿ
ಅರ್ಜುನನು ಸೋಲುತ್ತಾನೆ.
ಇವರಿಬ್ಬರೂ ಉರುಡಾಡಿದ ಊರೇ 'ಉರುಡೂರು' ಎಂದಾಯಿತು. ಅದು ಬಾಯ್ಮಾತಿನಲ್ಲಿ ಅಡೂರಾಗಿ
ಪರಿವರ್ತನೆಯಾಯಿತು ಎಂಬುದು ಇಲ್ಲಿನ ಸ್ಥಳ ಐತಿಹ್ಯ. ಇಲ್ಲಿನ ಅಂಚೆ ಕಚೇರಿಗೆ ಈಗಲೂ
'ಉರುಡೂರು' ಎಂಬ ಹೆಸರಿದೆ. ಸೋತ ಅರ್ಜುನನು ಮತ್ತೆ ಶಕ್ತಿ ಸಂಚಯನಕ್ಕಾಗಿ ಶಿವಧ್ಯಾನ
ಮಾಡಿ ಅರ್ಚಿಸುತ್ತಾನೆ. ಮಳಲ ಲಿಂಗವನ್ನು ರೂಪಿಸಿ, ಭಕ್ತಿಯಿಂದ ಆತ ಅರ್ಪಿಸಿದ
ಹೂವುಗಳೆಲ್ಲವೂ, ಅಲ್ಲೇ ಇದ್ದ ಕಿರಾತ ರೂಪಿ ಶಿವನ ತಲೆಗೇರುತ್ತಿದ್ದುದನ್ನು ಕಂಡು ಸತ್ಯ
ತಿಳಿಯುತ್ತಾನೆ. ತನ್ನ ದುಡುಕುತನಕ್ಕೆ ಮರುಗಿ ಕಿರಾತ ರೂಪಿ ಶಿವನಲ್ಲಿ ಕ್ಷಮೆ
ಯಾಚಿಸುತ್ತಾನೆ. ಪ್ರಸನ್ನನಾದ ಪರಶಿವನು ಪಾಶುಪತಾಸ್ತ್ರ ಕರುಣಿಸಿದರೆ, ಇವರಿಬ್ಬರ
ಕಾದಾಟವನ್ನು ರಕ್ತೇಶ್ವರಿಯೊಂದಿಗೆ ದೂರದಲ್ಲೇ ನಿಂತು ವೀಕ್ಷಿಸುತ್ತಿದ್ದ, ಪಾರ್ವತಿಯು
ಅಂಜನಾಸ್ತ್ರವನ್ನು ಅರ್ಜುನನಿಗೆ ಕರುಣಿಸುತ್ತಾರೆ.