ದೊಡ್ಡವರು ಮಕ್ಕಳಿಗೆ ಬಯ್ಯುವುದು ಎಲ್ಲಾ ಮನೆಯಲ್ಲಿ ಸಾಮಾನ್ಯ. ಹಾಗಂತ ಏನು ಹೇಳಿಕೊಟ್ಟರೋ ಅದೇ ದಾರಿಯಲ್ಲಿ ಮಕ್ಕಳು ಮುಂದೆ ಹೋಗುವುದಿಲ್ಲ. ಮಕ್ಕಳು ಎಂದ ಮೇಲೆ ಉದಾಸಿನ ಇದ್ದದ್ದೇ. "ಅವರು ಹೇಳುವುದಕ್ಕೆ ಇರುದು. ಎಂತ ಮಾಡಿದ್ರು ಅವರಿಗೆ ಸರಿ ಕಾಣುದಿಲ್ಲ" ಇಷ್ಟು ಹೇಳಿ ತಲೆ ತಿರುಗಿಸಿ ಹೋಗುವ ನಮಗೆ, ಅವರು ಹೇಳಿದ್ದು ಸರಿ ಅಂತ ಗೊತ್ತು. "ಸಣ್ಣ ಮಕ್ಕಳ ಹಾಗೆ ನಮ್ಮನ್ನು ನೋಡುದು ಯಾಕೆ?" ಎನ್ನುವ ದೂರು ನಮ್ಮದು.
ಅಜ್ಜಿ ಬೆಳಗ್ಗೆ ತುಂಬಾ ಬೇಗ ಏಳ್ತಾರೆ. ನಮ್ಮ ಅಜ್ಜಿಯ ಕಾಲಘಟ್ಟದವರು ದೇವರನ್ನು ನಂಬುತ್ತಿದ್ದದ್ದು 'ಹೆದರಿಯೋ ಅಥವಾ 'ಅಘಾದ ಭಕ್ತಿಯೋ' ಗೊತ್ತಿಲ್ಲ. ಅಂದರೆ ಅವರು ದೇವರ ಕೆಲಸ ಮಾಡುವುದರಲ್ಲಿ ದೇಹದ ಆರೋಗ್ಯವನ್ನು ಗಮನಿಸುವುದಿಲ್ಲ. "ನಿಮ್ಮದು ಹೆಚ್ಚಾಗ್ತದೆ..." ಅಂತ ಹೇಳಿದ್ರೆ, ಅವರು ಪ್ರಾರ್ಥನೆ ಮಾಡಿದ ಕಾರಣವೇ ಆದದ್ದು ಅಂತ ಸುಮಾರು history list ಕೊಡ್ತಾರೆ. ಶುಕ್ರವಾರ ಅಂತೂ ಅಜ್ಜಿಯ ಪೂಜೆ-ಪುನಸ್ಕಾರ ಆಗುವಾಗ ಗಂಟೆ 11 ಆಗುತ್ತದೆ. ಅಂದಾಜು ಎಲ್ಲಾ ಸ್ತೋತ್ರ ಮುಗಿಸಿ ಕೊನೆಗೆ ಪೂಜೆ ಮಾಡುವಾಗ ನೈವೇದ್ಯ ಕೊಡುವ ಕಾರಣ ಅಲ್ಲಿಯವರೆಗೆ ದೇವರಿಗೂ ಏನಿಲ್ಲ ಅಜ್ಜಿಯ ಹೊಟ್ಟೆಗೂ ಏನಿಲ್ಲ. ನಾವು ಒಂದು ಬದಿಯಿಂದ "ಮದ್ದು ತಗೊಳುದಿಲ್ವಾ..? ಪುನಃ BP, Suger ಹೆಚ್ಚು ಕಮ್ಮಿ ಆಗಬೇಕಾ?" ಅಂತ ಬಯ್ಯುವುದು ಮಾಮೂಲು ಆಯ್ತು. ಅದಕ್ಕೆ ಸರಿಯಾಗಿ ಒಂದೆರಡು ಸಲ BP ಮೇಲೆ ಕೆಳಗೆ ಆಯಿತು. ಅದಕ್ಕೆ ಹೆದರಿ ಅಜ್ಜಿ, ಸಣ್ಣಕೆ ಚಾ ಅವಲಕ್ಕಿ ಕುಡಿದು ಮದ್ದು ತಿಂದು, ಮತ್ತೆ ದೇವರ ಪೂಜೆ ಮಾಡುವ ರೀತಿ ಅನುಸರಿಸಿದರು.
ವರ್ಷದ ಎಲ್ಲಾ ತಿಂಗಳು ನಮ್ಮ ಅಂಗಳ ತುಂಬಾ ಹೂ ಇರುವುದಿಲ್ಲ. ಅಜ್ಜಿಗೆ ದೇವರಿಗೆ ಇಡ್ಲಿಕ್ಕೆ ಹೂ ಬೇಕು, ತುಳಸಿ ಬೇಕು, ಅದರಲ್ಲಿಯೂ ಆಯಾ ದೇವರಿಗೆ ಪ್ರಿಯವಾದ ಹೂ ಸಮರ್ಪಿಸಿದರೆ ಮಾತ್ರ ಸಂಪೂರ್ಣ ಸಮಾಧಾನ. ವರ್ಷಕ್ಕೆ ಒಮ್ಮೆಯಾದರೂ ದಾಸವಾಳದ ಗೆಲ್ಲು ಕಡಿಯದಿದ್ದರೆ, ದಾಸವಾಳ ಗಿಡದ ಬದಲು, ದಾಸವಾಳ ಬಲ್ಲೆ ಬೆಳೆಯುತ್ತದೆ. ಆಗ ಅಂತೂ ಅಮ್ಮನಿಗೂ ಅಜ್ಜಿಗೂ ಮಾತು - ಮಾತು ಆಗುತ್ತದೆ. ನಾವು ಕತ್ತಿ ಹಿಡ್ಕೊಂಡು "ಗಿಡ ಕಡಿಯುದಾ? ಬೇಡ್ವಾ?" ಅಂತ ಅಣ್ಣ-ತಮ್ಮ ಮುಖ-ಮುಖ ನೋಡಿದ್ದುಂಟು. ಇನ್ನು ಕೆಲವು ತಿಂಗಳು ಬಿಳಿ ಹೂವಿಗೆ ಬರಗಾಲ. ವಿಷ್ಣು ದೇವರಿಗೆ ಕೆಂಪು ಇಡಲು ಅಜ್ಜಿಗೆ ಮನಸ್ಸಿಲ್ಲ, ಬಿಳಿ ಹೂ ಗಿಡದಲ್ಲಿ ಇಲ್ಲ. ಬೆಳಗ್ಗೆ ಹೂ ಕೊಯ್ಯುವ ಕೆಲಸ ಅಪ್ಪನಿಗೆ, ಅವರಿಗೆ ಅಂಗಡಿಗೆ ಹೋಗಲು ತಡ ಆದ್ರೆ ಆ ಕೆಲಸ ನಮಿಗೆ. ಗ್ರಾಚಾರಕ್ಕೆ ಒಮ್ಮೆ-ಒಮ್ಮೆ ನಾವು ಕೊಯ್ಯಲು ಹೋಗುವಾಗಲೇ, 'ಬಿಳಿ ಹೂ' ಇರುವುದಿಲ್ಲ. ತಟ್ಟೆಯಲ್ಲಿ ಕೆಂಪು ಹೂ ಜಾಸ್ತಿ ಕಂಡಾಗ, "ನೀವು ಸರಿ ನೋಡುವುದಿಲ್ಲ 'ಅದು ನಿನ್ನೆಯ ಹೂ' ಅಂತ ಉದುರಿಸಿ ಬಿಡುದು,, ಹೋಗಿ... ಪುನಃ ನೋಡಿ ಬಾ...." ಅಂತ ಹೇಳಿದರೆ ಯಾರಿಗೆ ಕಿರಿಕಿರಿ ಆಗುದಿಲ್ಲ ಹೇಳಿ. ಮನೆಯ ಅಂಗಳದ ಕೆಳಗಿನ ತಟ್ಟಿನಲ್ಲಿ ಇರುವ ಹೂ ಗಿಡದ ಹತ್ತಿರ ಹೋಗಲು ಅಜ್ಜಿಗೆ ಆಗುವುದಿಲ್ಲ. ಆದರೂ ಬಾವಿಕಟ್ಟೆ ಹತ್ತಿರ ಇರುವ ಗಿಡದಲ್ಲಿ ಬಿಳಿ ಹೂವು ಉಂಟಾ ಅಂತ ಹುಡುಕುತ್ತಾ ಹೆಜ್ಜೆ ಇಡುತ್ತಾರೆ.
ನಮ್ಮ ಮನೆಯ ಪರಿಸರ ಹೇಗಂದರೆ. ಮನೆಯ ಎದುರು ಭಾಗ ಮತ್ತು ಬಲ ಭಾಗದಲ್ಲಿ ದಾರಿ ಇದೆ. ಮನೆಯ ಹಿಂದೆ ರಬ್ಬರ್ ಮರದ ಗುಡ್ಡೆ. ಮನೆಯ ಎಡ ಭಾಗ ಮಮ್ಮದೆ (ಮಹಮ್ಮದ್) ಅವರ ಮನೆ. ಹಿಂದೆ ಇರುವ ರಬ್ಬರ್ ತೋಟ ಕೂಡ ಅವರದ್ದೇ. ಆ ಸ್ಥಳ ಮೊದಲೇ ಇದ್ದರೂ ಕೂಡ ಮನೆ ಬೇರೆ ಕಡೆ ಇತ್ತು. ಇಲ್ಲಿ ಹೊಸದಾಗಿ ಆರು-ಏಳು ವರ್ಷ ಮೊದಲು ಮನೆ ಮಾಡಿ ಕೂತಿದ್ದಾರೆ. ನಮ್ಮದು ಗಡಿನಾಡು ಆದಕಾರಣ ಕನ್ನಡ-ಮಲಯಾಳಂ ಭಾಷೆ ಸಾಧಾರಣ ವ್ಯವಹಾರಕ್ಕೆ ಬೇಕಾದಷ್ಟು ಎಲ್ಲರಿಗೂ ಗೊತ್ತುಂಟು. ಅದರಲ್ಲಿಯೂ ಮಮ್ಮದೆ ಅವರಿಗೆ ಅಡೂರಿನಲ್ಲಿ ಇರುವ ದಿನಸಿ ಅಂಗಡಿಯಲ್ಲಿ ಕನ್ನಡ ಗ್ರಾಹಕರೇ ಹೆಚ್ಚು. ಅವರು ನಮಾಜ್ ಮಾಡಲು, ಅಂಗಡಿ ತೆರೆಯಲು ಅಂತ ಹೋಗುತ್ತಾ ಬರುತ್ತಾ ಇರುವ ಕಾರಣ ನಾವು ನೋಡುವುದೇ ಕಡಿಮೆ. ಅವರ ಮಡದಿ ಜಮೀಲಾ ಆಂಟಿ ತುಂಬಾ ಚೆನ್ನಾಗಿ ಮಾತಾಡ್ತಾರೆ. ನಾವು Pure Veg ಅಂತ ಗೊತ್ತಿರುವ ಕಾರಣ ಮನೆಯ ಅಡುಗೆ ಮನೆಯನ್ನು ಮನೆಯ ಆಚೆ ಮೂಲೆಯಲ್ಲಿಯೂ ಮತ್ತು ಸಾಧ್ಯ ಆದಷ್ಟು ಮಾಂಸ ಅಡಿಗೆ ಹೊರಗಿನಿಂದ ತಂದು ತಿನ್ನುವುದು ಮಾಡುತ್ತಿದ್ದರು. ಅವರ ಹಬ್ಬದ ದಿನ ಪ್ರತ್ಯೇಕ ಎಣ್ಣೆಯಲ್ಲಿ ಎರಡು ದಿನ ಮೊದಲೇ ನಮಗೆ ಕೊಡ್ಲಿಕ್ಕೆ ಅಂತ ಎಣ್ಣೆಯಲ್ಲಿ ಕರಿದ ತಿಂಡಿ ಮಾಡಿ ಇಡುತ್ತಿದ್ದರು. ಮನೆಗೆ ಬಂದ ಹೊಸತ್ತರಲ್ಲಿ ಕೋಳಿ ಸಾಕುತ್ತಾ ಇದ್ರು. ನಮ್ಮ ಮನೆಯ ಅಂಗಳಕ್ಕೆ ಬಂದು ನಾಲ್ಕೈದು ಸಲ ಬಿಸಿಲಿಗೆ ಹಾಕಿದ ಅಕ್ಕಿ-ಗೋದಿಯನ್ನು ಹಪ್ಪಳ-ಸೆಂಡಿಗೆಯನ್ನು ತಿಂದಮೇಲೆ ಅವರು ಅದನ್ನು ನಿಲ್ಲಿಸಿದರು. ಒಟ್ಟಿನಲ್ಲಿ ತುಂಬಾ ಹೊಂದಿಕೊಂಡು ಹೋಗುವ ನೆರೆಕರೆಯ ಮನೆಯವರು.
ಅಜ್ಜಿ ಹೂ ಹುಡುಕುತ್ತಾ ಬಾವಿ ಕಟ್ಟೆ ಹತ್ರ ಹೋಗುತ್ತಿದ್ದಂತೆ ಮನೆಯ ಮುಂದೆ ನೆಟ್ಟ ಯಾವುದೋ ತರಕಾರಿ ಗಿಡಕ್ಕೆ ಮೊಟ್ಟೆ ಸಿಪ್ಪೆ ಹಾಕುತ್ತಾ ಇದ್ರು ಜಮೀಲ ಆಂಟಿ. ಅಜ್ಜಿಯಲ್ಲಿ "ಏನು ಹುಡುಕುವುದು" ಅಂತ ಕೇಳಿದಾಗ, "ದೇವರಿಗೆ ಬಿಳಿ ಹೂ ಇಡಬೇಕಿತ್ತು, ಗಿಡದಲ್ಲಿ ಹುಡುಕಿದ್ರೂ ಬಿಳಿ ಹೂಗಳು ಇಲ್ಲ. ಎಲ್ಲಾ ವರ್ಷ ಈ ತಿಂಗಳು ಹಾಗೆಯೇ....." ಅಂತ ಗೊಣಗುತ್ತಾ ಗಿಡದಗೆಲ್ಲು ಆಚೆ ಈಚೆ ಮಾಡಿದರು. ಜಮೀಲಾ ಆಂಟಿ "ನೋಡಿ, ನನ್ನ ಸೇವಂತಿಗೆ ಗಿಡದಲ್ಲಿ ನಾಲ್ಕೈದು ಹೂ ಉಂಟು, ಇಗೊಳಿ.." ಅಂತ ಹೇಳುತ್ತಾ ನೇರವಾಗಿ ಕೊಯ್ದು ಅಜ್ಜಿಯ ಮುಂದೆ ಕೈಚಾಚಿದರು. ಅಜ್ಜಿ ಖುಷಿಯಲ್ಲಿ ತಂದು ಸ್ನಾನ ಮುಗಿಸಿ ದೇವರಿಗೆ ಅರ್ಪಿಸಿದರು. ನಾವು ತಂದ ಹೂವನ್ನೇ ನೀರು ಚಿಮುಕಿಸಿ ಶುದ್ಧ ಮಾಡ್ಲಿಕ್ಕೆ ಉಂಟು. ಜಮೀಲಾ ಆಂಟಿ ಕೊಟ್ಟದ್ದು ಇನ್ನೆಷ್ಟು ಶುದ್ಧ ಮಾಡ್ತಾರೆ ಅಂತ ನೋಡುತ್ತಾ ನಿಂತಿದ್ದೆ. ಸಾಮಾನ್ಯವಾಗಿಯೇ ಶುದ್ಧ ಮಾಡಿ ದೇವರಿಗೆ ಅರ್ಪಿಸಿದರು.
ಮತ್ತೆ ಪ್ರಶ್ನೆ ಮಾಡಿ ಅವರಿಂದ ಉತ್ತರ ಪಡೆದುಕೊಳ್ಳಬೇಕು ಅಂತ ಅನ್ನಿಸಲಿಲ್ಲ. ಹೂ ಹುಡುಕಿ ಸಿಗದೇ ಇರುವ ದಿನಗಳಲ್ಲಿ ಅಜ್ಜಿ ಹೇಳಿದ ಮಾತು ನೆನಪಾಯಿತು, "ಭಕ್ತಿಯಿಂದ ಅರ್ಪಿಸಿದರೆ ಒಂದು ಹೂ ಇದ್ರೂ ಸಾಕು. ಅಲ್ಲದಿದ್ರೆ ಅಕ್ಷತೆ ಕಾಳು ಕೂಡ ಸಾಕು" ಅಂತ. ಹಾಗಂತ ಅದನ್ನೇ ಬಲವಾಗಿ ಹಿಡಿದುಕೊಂಡು ದೇವರಿಗೆ ಅರ್ಪಿಸಲು ಹೂವಿಗಾಗಿ ಹುಡುಕಾಟ ಮಾಡದಿದ್ರೆ, ನಮ್ಮ ಪ್ರಯತ್ನ ಎಲ್ಲಿ ಉಂಟು? ನಮಗೆ ಬೇಕಾದ ತಿಂಡಿ ತಿನಿಸು ನಮಗೆ ಬೇಕಾದ ಕಂಪನಿಯದ್ದು ನಮಗೆ ಬೇಕಾದ ಅಂಗಡಿಯಿಂದ ಹುಡುಕಿ ತಂದು ತಿನ್ನುವಾಗ. ದೇವರಿಗೆ ಸಮರ್ಪಿಸುವ ಹೂವಿಗೆ ಸ್ವಲ್ಪ ಹುಡುಕಾಟ ಮಾಡ್ಬೇಡ್ವಾ..?
ನಾವು 'ಹೂ ಅಷ್ಟೇ ಇರುದು' ಅಂತ ಹೇಳಿದ್ರೂ.. ಬಾವಿಕಟ್ಟೆ ಹತ್ತಿರ ಹೋಗಿ ಅಜ್ಜಿ ಹುಡುಕಿದ ಕಾರಣ ಅಲ್ವಾ ಜಮೀಲಾ ಆಂಟಿ ಸೇವಂತಿಗೆ ಕೊಟ್ಟದ್ದು. ಕೊಟ್ಟದ್ದು ಜಮೀಲಾ ಆದರೇನು ಡಿಸೋಜಾ ಆದರೆ ಏನು ಪ್ರಕೃತಿ ಕೊಟ್ಟ ಹೂ ಅಲ್ವಾ. ಅದು ದೇವರದ್ದು. ಹೀಗೆ ಜಮೀಲ ಕೊಟ್ಟ ಸೇವಂತಿಗೆ ಬಿಳಿ ಹೂ ಪ್ರಿಯನಾದ ಮಹಾವಿಷ್ಣುವಿನ ಪಾದ ಸೇರಿತು.
ಅಜ್ಜಿ ನಮ್ಮನ್ನು ಬಿಟ್ಟು ಹೋಗಿ ನಾಲ್ಕು ತಿಂಗಳು ಕಳೆಯಿತು, ಅವರೊಂದಿಗೆ ನನ್ನ 22 ವಯಸ್ಸು ಆಗುವವರೆಗೆ ನಡೆಸಿದ ಜೀವನದಿಂದ ಕಲಿತ ಪಾಠ ದೊಡ್ಡದು. ನಿಮ್ಮ ಮೊಮ್ಮಗ ಅಂತ ಹೆಮ್ಮೆ ಇದೆ ಅಜ್ಜಿ......
ಕಿತ್ತಾಡುವ, ಅಸಮಾಧಾನ ತೋರಿಸುವ, Ego Maintain ಮಾಡುವ, ಈಗದ ಮನುಷ್ಯರ ಮುಂದೆ ಜಾತ್ಯಾತೀತವಾಗಿ ದೇವರ ಮೇಲಿನ ಭಕ್ತಿಯ ಅಗಾಧತೆ ತೋರಿಸುವ ಇಂತವರಿಂದ ನಮ್ಮ ನಿಮ್ಮಂತವರು ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬೇಕಿದೆ.