Contact Angle Touch Studio for your Blog Design. Visit Site

ಕನಸು ಕಣ್ಣುಗಳು...

ನಮ್ಮ ತೋಟದ ಮನೆಯ ಕಡೆ, ದಿನದಲ್ಲಿ ಒಮ್ಮೆಯಾದರೂ ಯಾರಾದರೂ ಹೋಗಿ ಬರುವುದುಂಟು. ಸದ್ಯ ಮನೆಯಲ್ಲೇ ಇದ್ದು , ಹೇಳಿಕೊಳ್ಳುವ ಪ್ರತ್ಯೇಕ ಕೆಲಸವಿಲ್ಲದಿರುವ ನಾನು, ಎಂದಿನಂತೆ ಇಂದು ಕೂಡಾ ಸಂಜೆಯ ಹೊತ್ತಿಗೆ ತೋಟದಲ್ಲಿ ಸುತ್ತಾಡಿ ಬರಲು ಹೊರಟೆ. ಸಾಮಾನ್ಯವಾಗಿ ಸಂಧ್ಯಾ ಸಮಯ ನಾಲ್ಕರಿಂದ ಐದುವರೆಯ ಒಳಗೆ ಹೋಗಿ ಬರುವುದು ಜಾಯಮಾನ. ಮಳೆ ಸುರಿದು ಹಾಳೆಯ ಮೇಲೆ ನಿಂತ ನೀರಿನಲ್ಲಿ ಮತ್ತು ರಬ್ಬರ್‌ನ ಕೊಳಚೆ ನೀರಿನಲ್ಲಿ ನುಸಿಗಳು ಹಾಯಾಗಿ ಬೆಳೆಯುತ್ತದೆ. ನಾನು ತಿಳಿದಂತೆ, ನೀರಿನ ಒಳಬಾಗದಲ್ಲಿ ಅಲ್ಲ - ಕೊಳಚೆ ಪ್ರದೇಶದಲ್ಲಿ ನಿಂತ ನೀರಿನ ಮೆಲ್ಪದರದಲ್ಲಿ ನುಸಿಗಳು ಸಂತಾನೋತ್ಪತ್ತಿ ಮಾಡುತ್ತದೆ. ಸೂರ್ಯ ಅಸ್ತಮಿಸಿದಂತೆ ನುಸಿ ಪಡೆಗಳ ಅಬ್ಬರದ ಝೇಂಕಾರ ಸಂಪೂರ್ಣ ತೋಟವನ್ನು ಆವರಿಸಿರುತ್ತದೆ. ಪಾಪ, ನುಸಿಗಳಿಗೆ ಗೊತ್ತುಂಟೋ ಇಲ್ಲವೋ, ಅವುಗಳಿಂದ ಹರಡುವ ರೋಗಗಳ ಸಂಖ್ಯೆ ನಮಗೆ ಗೊತ್ತಿದೆ ತಾನೆ, ಜಾಗೃತೆ ನಾವೇ ಮಾಡಬೇಕಷ್ಟೇ. ಆದರೆ ಇಂದು ತಡವಾಗಿತ್ತು. ಮೊಬೈಲ್‌ನಲ್ಲಿ ಅದೇನೋ ನೋಡುತ್ತಾ ಕುಳಿತ ನಾನು ಸಮಯದ ಪರಿವೆ ಇಲ್ಲದೆ ಮಗ್ನನಾಗಿದ್ದೆ. ಶಾಲೆಯಿಂದ ಬಂದ ಅಮ್ಮ, ಮನೆಯಲ್ಲಿ ಇದ್ದು ನೆನಪಿಸುತ್ತಿದ್ದ ಅಜ್ಜಿಯೊಂದಿಗೆ ಸೇರಿ, ಮತ್ತಷ್ಟು ಗದರಿಸಿ 'ಹೊಗಿ ಬಾ..' ಎಂದ ಮೇಲೆ ಹೊರಟವ ನಾನು.

        "ಇಂದು ಕೆಲಸದವರು ರಬ್ಬರ್ ಶೀಟ್ ಮಾಡಿದ್ದಾರಾ?" ಅಂತ ಕೇಳುವ ಬೋದದಲ್ಲಿಯೂ ಇಲ್ಲದೆ, ಎದ್ದು ಸೀದಾ ನಡೆದವ ನಾನು. ತೋಟದ ಮನೆಯ ಪಕ್ಕದಲ್ಲಿ ಹೆಮ್ಮರವಾಗಿ ಬೆಳೆದಿರುವ ಹುಣಸೆ ಹುಳಿಯ ಮರ, ಸಂಜೆಯ ಅರೆಕಪ್ಪನ್ನೂ ಮರೆಸಿ ಕತ್ತಲು ಮಾಡಿಬಿಟ್ಟಿತ್ತು. ಎಲ್ಲಿ ಹೋದರು ದೇಹದ ಅಂಗದಂತಾಗಿರುವ ಮೊಬೈಲ್ ಇದ್ದ ಕಾರಣ, ಫ್ಲಾಶ್ ಲೈಟ್ ಆನ್ ಮಾಡಿ ಮುಂದೆ ನಡೆದೆ. ಒಂದು ಊದುಬತ್ತಿ ಉರಿಸಿ, ತೋಟದಲ್ಲೆಲ್ಲ ಅಲೆದಾಡಿ, ಸಿಕ್ಕಿದ ಎರಡು ತೆಂಗಿನಕಾಯಿ - ನಾಲ್ಕು ಅಡಿಕೆ ಚೀಲದಲ್ಲಿ ತುರುಕಿಸಿ, ಮೆಲ್ಲನೆ ಮೈನ್ ರೋಡಿನ ಕಡೆಗೆ ನಡೆದೆ. 

ಸಣ್ಣ ಮಗುವೊಂದು ಸಂತೋಷದಿಂದ ಕಿಲಕಿಲನೆ ನಗುವ ಸದ್ದು ಕೇಳಿಸಿತು. ಆಚೀಚೆ ನೋಡಬೇಕಾಗಿಬರಲಿಲ್ಲ... ಯಾಕೆಂದರೆ ನಮ್ಮ ಕೃಷಿ ಸ್ಥಳದ ಎಡಭಾಗದಲ್ಲಿ ತಿಂಗಳುಗಳ ಹಿಂದಷ್ಟೇ ಹೊಸ ಮನೆ ಒಕ್ಕಲು ಮಾಡಿ ಸಾಲ ಕಟ್ಟುತ್ತಿರುವ ಸುರೇಶ್ ಅಣ್ಣ ನ ಎರಡು ಮಕ್ಕಳಲ್ಲಿ ಸಣ್ಣ ಹುಡುಗಿಗೆ ಇನ್ನೂ ಐದು ವರ್ಷ ತುಂಬಿಲ್ಲ. ಆ ಕಡೆ ಗಮನಿಸಿ ನೋಡಿದರೆ ಈಗಷ್ಟೇ ಆಟೋ ರಿಕ್ಷಾ ಬಾಡಿಗೆ ಮುಗಿಸಿ, ದಿನದ ಒಂದಷ್ಟು ಸಂಪಾದನೆಯಲ್ಲಿ ಮನೆಗೆ ಬೇಕಾದ ತರಕಾರಿ ಮತ್ತು ಜಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ಬಂದಿದ್ದಾರೆ ಸುರೇಶಣ್ಣ. ರಿಕ್ಷದಿಂದ ಇಳಿದ ಹಾಗೆ ಇಬ್ಬರು ಮಕ್ಕಳು ಬಂದು ತಬ್ಬಿಕೊಂಡಿದ್ದಾರೆ. ರಿಕ್ಷದಲ್ಲಿದ್ದ ಮನೆಯ ಸಾಮಾನುಗಳನ್ನು ಹೆಂಡತಿಯಲ್ಲಿ ತೆಗೆಯಲು ಹೇಳಿ, ಮನೆ ಅಂಗಳದಲ್ಲಿ ಮಕ್ಕಳೊಂದಿಗೆ ಮುದ್ದಾಡುತ್ತಿದ್ದಾರೆ ಸುರೇಶಣ್ಣ. 'ಮನೆಯಂಗಳಕ್ಕೆ ಇಂಟರ್‌ಲಾಕ್ ಹಾಕಬೇಕು, ಆಮೇಲೆ ಮನೆ ಒಕ್ಕಲು ಮಾಡುದು' ಅಂತ ಸುರೇಶಣ್ಣನಿಗೆ ಹಠ ಇತ್ತು.. ವಯರಿಂಗ್ ಆಗುವ ಹೊತ್ತಿಗಾಗಲೇ ಕೈಯಲ್ಲಿದ್ದ ಅಷ್ಟೂ ಹಣವು ಮುಗಿದು, ತೆಗೆದ ಲೋನ್‌ನ ಹಣವೂ ಕೂಡ ಸಾಕಷ್ಟು ಖರ್ಚು ಆಗಿತ್ತು. ಆಮೇಲೆ ಹಠ ಬಿಡದೆ ಮನೆಯ ನೇರ ಮುಂಭಾಗದಲ್ಲಿ ಮಾತ್ರವಾದರೂ ಇಂಟರ್ಲಾಕ್ ಹಾಕಿಸಬೇಕೆಂದು ಪಣ ತೊಟ್ಟು, 'ಕಡಿಮೆ ಸ್ಕ್ವೇರ್ ಫೀಟ್ ಹಾಕಲು ಬಂದರೆ ನಮಗೆ ನಷ್ಟ' ಅಂತ ಹೇಳಿದ ಇಂಟರ್‌ಲಾಕ್ ಕೆಲಸದವರ ಕಾಲು ಹಿಡಿದು ಕೆಲಸವೂ ಪೂರ್ತಿ ಮಾಡಿಸಿ ಆಯಿತು , ಮನೆ ಒಕ್ಕಲೂ ಆಯಿತು.  ಬಾನಂಗಳಕ್ಕೆ ಮಗುವನ್ನು ಹಿಡಿದು ಅದೇ ಅಂಗಳದಲ್ಲಿ ಮೇಲ್ಮುಖವಾಗಿ ಮಲಗಿದ್ದಾರೆ ಸುರೇಶಣ್ಣ. ಸಂಸಾರಿಯಾದ ಓರ್ವ ಜವಾಬ್ದಾರಿಯುತ ಪುರುಷನಿಗೆ, ನೆಮ್ಮದಿಯ ನಿದ್ದೆಗೆ ಸುಂದರವಾದ ಸ್ವಂತ ಮನೆ, ಮನಸ್ಸಿನ ನೆಮ್ಮದಿಗೆ ಅನುಯೋಜ್ಯಳಾದ ಮಡದಿ, ಪ್ರತಿದಿನ ಉಲ್ಲಾಸದಿಂದ ನಡೆಯಲು ನವಿರೇಳಿಸುವ ಮುದ್ದು ಮಕ್ಕಳು ಮತ್ತು ದೈನಂದಿನ ಖರ್ಚನ್ನು ನಿಭಾಯಿಸುವಷ್ಟು ಸಂಪಾದನೆಯಾಗುವ ಯೋಗ್ಯ ಕೆಲಸವೂ ಇದ್ದಮೇಲೆ ಸಾರ್ಥಕ ಜೀವನಕ್ಕೆ ಬೇರೆ ವ್ಯಾಖ್ಯಾನ ಏನು?

'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಅಂತ ಹೇಳಿದ ಹಾಗೆ ಸುರೇಶಣ್ಣನ ಕಟ್ಟಿದ ಮಾಳಿಗೆಯ ಮನೆ, ವಿಜ್ರಂಭಣೆಯಿಂದ ಮಾಡಿಸಿದ ಮನೆ ಒಕ್ಕಲು ಕಾರ್ಯಕ್ರಮ ಮಾತ್ರ ಗಮನಿಸಿದರೆ ಸಾಲದು. ಇದೆಲ್ಲವನ್ನೂ ಸಾಧಿಸಲು ಅದೆಷ್ಟು ಸಾಲದ ಹೊರೆ ಬೆನ್ನ ಮೇಲೆ ಹೊರಬೇಕಾಗಿ ಬಂದಿದೆಯೋ ಏನೋ. ಸಾಲ ಬಾಧೆಯಾಗಲೀ, ಬಾಕಿ ಕೊಡಬೇಕಾದ ಹಣ ಕೇಳಲು  ಬರುವವರ ತಲೆಬಿಸಿಯಾಗಲೀ ಮುಖದಲ್ಲಿ ತೋರಿಸದೆ ಮಾತನಾಡಿಸಿದಾಗ ಎಲ್ಲಾ ನಗುನಗುತ್ತಾ ಮಾತನಾಡುತ್ತಾರೆ. ಜೀವನ ನಿಭಾಯಿಸುವ ಚಾಕಚಕ್ಯತೆಯಲ್ಲಿ ಪ್ರೌಢಿಮೆ ಅಂದರೆ ಇದುವೇ ತಾನೆ. ದಿನನಿತ್ಯ ಹಸನ್ಮುಖಿಯಾಗಿ ಅದೇನೇ ಸವಾಲು - ಪರೀಕ್ಷೆಗಳು ಎದುರಿಸಬೇಕಾಗಿ ಬಂದರೂ ಅದೆಲ್ಲಾ ಜೀವನದ ಅಂಗವೆಂದು ಪರಿಗಣಿಸಿ ಮುಂದುವರೆಯುವ ಬುದ್ಧಿವಂತಿಕೆ. ಎತ್ತಿ ಹಿಡಿದ ಅಪ್ಪನನ್ನು ನೋಡುತ್ತಾ ಮುದ್ದಾದ ಮಗು ಕಿಲಕಿಲನೆ ನಗುತ್ತಾ ಕೈ ಕಾಲು ಬಡಿಯುತ್ತಿತ್ತು.. ದಿನವಿಡೀ ಕಷ್ಟ ಬಂದು ದುಡಿದು ದೇಹ ನಿತ್ರಾಣವನ್ನು ಸ್ವಲ್ಪವೂ ತೋರಿಸದೆ ಮುದ್ದಿಸುತ್ತಾ ಇದ್ದ ಸುರೇಶಣ್ಣ, ತನ್ನ ಕರುಳಕುಡಿಯ ನಗುವಿನಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದ.

ಸುರೇಶಣ್ಣ ನಮಗೆ ಒಂದು ವರ್ಷದಿಂದ ಈಚೆಗೆ ಅಷ್ಟೇ ಹತ್ತಿರದ ಪರಿಚಯ. ಯಾಕೆಂದರೆ 5 - 10 ವರ್ಷ ದುಬೈಯಲ್ಲಿ ಕೆಲಸ ಮಾಡುತ್ತಾ ಇದ್ದ ಅವರು ಕಳೆದ ವರ್ಷವಷ್ಟೇ ಊರಿಗೆ ಬಂದರು. ಅವರ ತಂದೆ ಕೃಷ್ಣಜ್ಜ, ನನ್ನ ಅಜ್ಜ - ಅಜ್ಜಿಗೆ ಎಲ್ಲಾ ಹತ್ತಿರದ ಪರಿಚಯ. ಕೃಷ್ಣಜ್ಜನ ದೊಡ್ಡ ಮಗ ಮಧುಅಣ್ಣ ಊರಿನಲ್ಲೇ ತಂದೆ ತಾಯಿಯ ಜೊತೆಗೆ ಇದ್ದು ನಮ್ಮ ರಬ್ಬರ್ ತೋಟದ ಕೆಲಸಕ್ಕೂ ಬರುತ್ತಾ ಇದ್ದರು. ನಮ್ಮ ಮನೆಗೆ ಬಂದು 10 ಗಂಟೆಗೆ ತಿಂಡಿ ತಿಂದು ಹೋಗುತ್ತಾ ಇದ್ದ ಮಧುಅಣ್ಣ, ತನ್ನ ಹೊಸ ಮನೆಯ ಕನಸಿನ ಬಗ್ಗೆ, ದಪ್ಪ ಹೆಚ್ಚಿರುವ ಹೆಂಡತಿಗೆ ಸಂಬಂಧಿಸಿ ಊರವರ ಮಾತಿನ ಬಗ್ಗೆ, ಜನಿಸಿದ ತನ್ನ ಪುಟ್ಟ ಕಂದಮ್ಮನ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ಸುರೇಶಣ್ಣ ದುಬೈ ಕೆಲಸ ಬಿಟ್ಟು ಊರಿಗೆ ಬರಲು ಒಂದು ಕಾರಣ ಇದೆ.. ಒಂದು ದಿನ ಊರಿನಿಂದ ದುಬೈಗೆ ಬಂದ ಕಾಲ್ ಸುರೇಶಣ್ಣನನ್ನು ಬೆರಗುಗೊಳಿಸಿತ್ತು. ಮಧು ಅಣ್ಣ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಸುದ್ದಿ. ಆಕ್ಸಿಡೆಂಟ್ ಆದದ್ದು ನಮ್ಮ ಮನೆಯ ಕೇವಲ ಐವತ್ತು ಮೀಟರ್ ದೂರದಲ್ಲಿ. ನಾನು ಶಾಲೆಗೆ ಹೋಗುತ್ತಿದ್ದಾಗ "ಆಕ್ಸಿಡೆಂಟ್ ಆಗಿ, ಅದು ಮಧು ಅಣ್ಣ ಮಲಗಿರುವುದು" ಅಂತ ಮಾತನಾಡಿಕೊಂಡು ಮುಂದೆ ನಡೆದದ್ದು ಈಗಲೂ ನೆನಪಿದೆ. ಸಂಜೆ ಮನೆಗೆ ತಲುಪಿದಾಗಲೇ ತಿಳಿದದ್ದು ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು ಎಂದು. ತಂದೆ ತಾಯಿಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ತಲೆ ಮೇಲೆ ಬಂದ ಮೇಲೆ ಸುರೇಶಣ್ಣ ಸೀದಾ ಊರಿಗೆ ಬಂದರು. ಎಲ್ಲಾ ಜವಾಬ್ದಾರಿಗಳಿಗೆ ಎದೆ ಕೊಟ್ಟು ಹಾದು ಬಂದರು. ಜೀವನದಲ್ಲಿ ಅನಿರೀಕ್ಷಿತವಾಗಿ ಅದೆಷ್ಟು ತಿರುವು, ಸವಾಲು, ಪರೀಕ್ಷೆ, ಸಂದಿಗ್ಧತೆ ಬಂದೊದಗುತ್ತದೆ ಎಂದು ಸುಲಭದಲ್ಲಿ ವಿವರಿಸಲು ಇದೊಂದು ಉದಾಹರಣೆ. ಎಲ್ಲವನ್ನು ಮರೆತು ಹೊಸ ಜೀವನವನ್ನು ಖುಷಿಯಿಂದ ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರೆಯುವ ಇಂತವರಿಂದ ನಮ್ಮ ನಿಮ್ಮಂತವರು ಜೀವನೋತ್ಸಾಹವನ್ನು ಹೆಚ್ಚಿಸಿಕಳ್ಳಬೇಕಿದೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

3 comments

  1. ನೆಜ್ಯ ಕಥೆ ಚೆನ್ನಾಗಿದೆ. ಗ್ರಾಮೀಣ ಪದಗಳ ಬಳಕೆ ಕಥೆಯ ಸೊಗಡು ಹಾಗೂ ನೆಜ್ಯತೆಯನ್ನು ಇನ್ನೂ ಹೆಚ್ಚಿಸಿದೆ.
  2. Thank You....
    ಓದುವ - ಬರೆಯುವ ಆಸಕ್ತಿ ಇದ್ದವರಿಗೆ ಕಳುಹಿಸಿ ಕೊಡಿ 🙏
  3. ಖಂಡಿತವಾಗಿಯೂ 👍🏻
© ರಸ ಮಥನ. All rights reserved. Distributed by ASThemesWorld