"ಹೌದು, ನಾವೇನು ಸಾಧಿಸಿದೆವು" ಮನಸ್ಸು ಮತ್ತೆ ಮತ್ತೆ ಪ್ರಶ್ನಿಸಿದರೂ, ಸಾಧಿಸಬೇಕಾದ್ದಿಲ್ಲ ಅಥವಾ ಎನೂ ಸಿಗಬೇಕಾದ್ದಿಲ್ಲ ಎಂದು ಸಮಾಧಾನವಿತ್ತು. ವರ್ತಮಾನದ ವರ್ತುಲತೆಗಳಲ್ಲಿ ಜೇನು - ಬೇವು, ಖುಷಿ - ಬೇಸರ ಹೇಗೋ ಹಾಗೆಯೇ ಉತ್ಸಾಹ - ಖಿನ್ನತೆಗಳಿಗೂ ಸ್ಥಾನವಿದೆ ಎಂದು ಮನವರಿಕೆ ಆಗತೊಡಗಿತು. ಇನ್ನೊಬ್ಬರ ಮನಸ್ಸು ತನ್ನದಾಗುವುದಕ್ಕೆ ಸಾಧ್ಯವಿಲ್ಲ, ಅಥವಾ ಅದು ಹಾಗೆ ಆಗಬಾರದು ಕೂಡಾ. ಬಾಯಿತುಂಬಾ ಹೊಗಳುವಿಕೆಗಳಿದ್ದರೂ ಸಹಿಸಲಾಗದ ತುಂಬು ಉರಿ ಧಗಿಸುತ್ತಿದ್ದುದು ಸರಿಯಾಗಿ ಗೋಚರವಾಗುತ್ತಿತ್ತು.ಇದು ಮೋನ್ನೆ ಅಕ್ಟೋಬರ್ 2ರ ಅನುಭವದ ಕಿರು ಅವಲೋಕನ.
'ಗಾಂಧಿ ಪರೀಕ್ಷೆ' ಎಂದರೆ ಗಾಂಧಿ ಬರೆದ ಪರೀಕ್ಷೆಯಲ್ಲ, ಅಥವಾ ಗಾಂಧಿಯ ವಿಚಾರಧಾರೆಗಳ ಕುರಿತು ನಾವು ಬರೆದ ಪರೀಕ್ಷೆಯಲ್ಲ. ಅದೊಂದು ದಿನ 'ಗಾಂಧಿಜಿ' ಮತ್ತೆ ಯಾವುದೋ ರೂಪದಲ್ಲಿ ಪುನರ್ಜನಿಸಿ, ಅವರ ತತ್ತ್ವಗಳ ಪರೀಕ್ಷೆ ನನ್ನ ಮೇಲೆ ನಡೆಸಿದ್ದು.ಹೌದು ನಂಬಲೇಬೇಕು. 2 ವಾರ ಮೊದಲೇ ಸುದ್ದಿ ಕಿವಿಸೇರಿತ್ತು. "ಬರುವ ಗಾಂಧಿ ಜಯಂತಿಯಂದು ಏನೋ ನಡಿಲಿಕ್ಕುಂಟಂತೆ.." ಅಸಂಪೂರ್ಣ ಗಾಳಿ ಸುದ್ದಿ. ಬಹುಶಃ ಗಾಳಿಸುದ್ದಿಗಳ ಸಹಜ ಸ್ವಭಾವವೇ ಇದಾಗಿರಬೇಕು..! ಅದು ಹಾಗಿರಲಿ, ನನ್ನ ಸ್ಥಿತಿ: 'ಮೊಬೈಲ್ ವ್ಯಾಯಾಮಗಳ ನಶೆ ಹಿಡಿದ ಯೌವನತೆ' ಹೇಗೆತಾನೆ ನಡೆಯುವ ದೈಹಿಕ ಕಾರ್ಯ ಒಂದಕ್ಕೆ ತರಾತುರಿ ನಡೆಸೀತು..? ಖಂಡಿತಾ ಇಲ್ಲ. ತೆಗೆದ ಬಾಯಿಯಲ್ಲಿ, "ಇಲ್ಲ, ನನ್ನ ಹೆಸರೊಂದು ಬರ್ದುಬಿಡ್ಬೇಡ.." ಪರಿ ಪರಿಯಾಗಿ ಗೋಗರೆದು ಬಿಟ್ಟೆ. ಕುಂಟು ನೆಪಗಳ ಬಂಡಾರ ನಮ್ಮಲ್ಲಿ ಅಲ್ಲದೆ, ಬೇರೆ ಯಾರಲ್ಲಿ ಇರಲು ಸಾಧ್ಯ. ಪರಮಾವಧಿ ಪ್ರಯತ್ನ ಪೂರೈಸಿದೆ. NCC ಮಕ್ಕಳ ಗುಂಪು ದೊಡ್ಡದಿದ್ದರೂ, extra mark, camp selection, ಯಾವುದಾದರೂ ಇದ್ದರೆ ಮಾತ್ರ ಭಾಗವಹಿಸುವ ಉತ್ಸುಕತೆ. ಸೀನಿಯರ್ ಗಳಿಗಾದರೊ ಕನಿಷ್ಠ 40 ಮಕ್ಕಳನ್ನಾದರೂ ಸಿದ್ಧ ಪಡಿಸುವ ಜವಾಬ್ದಾರಿ. ಬಹುಶಹ ಮೊದಲ ಹಂತದ ಪರೀಕ್ಷೆಯಲ್ಲಿ ಗಾಂಧಿ NCC ಸೀನಿಯರ್ ರೂಪದಲ್ಲಿ ಬಂದಿದ್ದರು. ಸಾಧಾರಣ 'ಆರ್ಡರ್' ಕೊಡುವ ಸೀನಿಯರ್, ಅಂದು ಏಕೋ ರಿಕ್ವೆಸ್ಟ್ ಮಾಡುವಂತೆ ಕಾಣುತ್ತಿತ್ತು. ಊನೆಗಳು, ತೊಂದರೆಗಳು ಹಾಗೂ ಅಸಹಾಯಕತೆಗಳು ಸೀನಿಯರ್ ಬಳಿ ಸಂಗ್ರಹಗೊಂಡವು. ಅಳೆದು - ತೂಗಿ - ಗಾಳಿಸಿ ಕೊನೆಗೆ, ನನ್ನನ್ನೂ ಸೇರಿದಂತೆ 39 ಹೆಸರು ಅನೌಪಚಾರಿಕವಾಗಿ ಉಲ್ಲೇಖವಾಯಿತು. "ಕೊನೆಯ ಗಳಿಗೆಯವರೆಗೂ ಪ್ರಯತ್ನ ಕೈ ಬಿಡಬೇಡ", (ಒಳ್ಳೆಯ ಕೆಲಸಗಳ ಪ್ರಾರಂಭದಲ್ಲಿ ನೆನಪಿಗೆ ಬಾರದ ಚಿಂತನೆ). ಹೋಗಿ ಗೋಳಾಟ ಮುಂದುವರಿಸಿದ್ದು. ನಿಜಕ್ಕೂ 'ಬೋಳು ಕಲ್ಲಿನ ಮೇಲೆ ಎರೆದ ನೀರು', ಹನಿ ಪಸೆಯೂ ನಾಟಲಿಲ್ಲ.
40 ಜನರ ಹೆಸರು ನೇರವಾಗಿ ಪ್ರಿನ್ಸಿಪಲ್ ಚೇಂಬರ್ ಎದುರು ತಲುಪಿತು ಎಂಬ ಮಾಹಿತಿ ಪ್ರಿನ್ಸಿಪಾಲ್ ಅವರ ಚೇಂಬರಿಗೆ ಎಲ್ಲಾ 40 ಮಕ್ಕಳನ್ನು ಕರೆಸಿದಾಗಲೇ ತಿಳಿದಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ಮೋಹನದಾಸ ಕರಮಚಂದ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ಅದ್ದೂರಿ ಕಾರ್ಯಕ್ರಮವನ್ನು ಏರ್ಪಡಿಸಲು ನಗರದ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಆಲೋಚನೆಗಳು ನಡೆದಿವೆ ಎಂಬುದಾಗಿಯೂ. ಅದೇರೀತಿ ಗಾಂಧೀಜಿಯ ಶಾಂತಿಯ ಸಂಕೇತವಾದ ನಡಿಗೆಯನ್ನು ಅವರ ಜನ್ಮ ದಿನೋತ್ಸವದ ಅಂಗವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದೂ. 150ನೇ ಗಾಂಧಿ ಜಯಂತಿಯಂದು 150 ಕಿಲೋಮೀಟರ್ ನಡೆಯಬೇಕಾಗಿದ್ದರೂ ಕೆಲವೊಂದು ಸಮಸ್ಯೆಗಳ ನಿಮಿತ್ತ ಸಾಂಕೇತಿಕವಾಗಿ 15 ಕಿಲೋಮೀಟರ್ ನಡಿಗೆಯನ್ನು ನಡೆಸಲು ತೀರ್ಮಾನಿಸಲಾಗಿದೆ, ಅದು ಬೆಳ್ಳಾರೆಯಿಂದ ಸುಳ್ಯದ ವರೆಗೆ,ಎಂಬುದಾಗಿ ಪ್ರಿನ್ಸಿಪಾಲ್ ಹೇಳಿದರು. ಮನದಾಳದಲ್ಲಿ ಹುದುಗಿದ್ದ ಸಮಾಧಾನದ ಕಿಡಿಗಳು ವಿಸ್ಫೋಟಗೊಂಡವು. ಬಸ್ ಇಲ್ಲವೆಂಬ ಕುಂಟು ನೆಪವನ್ನು ಎತ್ತಿ ಹಿಡಿದು ಹೋರಾಡುವ ಧೈರ್ಯ ನನ್ನಲ್ಲಿರಲಿಲ್ಲ. ಮುಖ್ಯ ಪ್ರಾಧ್ಯಾಪಕರ ಮನಃಪರಿವರ್ತನೆಯ, ಮನಸ್ಸಿಗೆ ನಾಟುವ ಮಾತುಗಳು ನಮ್ಮಲ್ಲಿ ; ಗಾಂಧೀಜಿಗೆ ಒಂದಿಷ್ಟು ಗೌರವ ನೀಡಿ ಮತ್ತೆ ನೆನಪಿಸಿಕೊಳ್ಳುವ ಸದಾವಕಾಶವನ್ನು ಸದುಪಯೋಗಪಡಿಸುವ ಮನಸ್ಸು ನೀಡಿತು. ಮುಖ 'ಇಂಗು ತಿಂದ ಮಂಗನಂತೆ' ಇದ್ದರೂ, ಆ 15 ಕಿಲೋಮೀಟರ್ ನಮ್ಮ ಜೀವನದಲ್ಲಿ ಮರೆಯಲಾರದ ಕ್ಷಣಗಳಿಗೆ, ಗೆಳೆಯರೊಂದಿಗೆ ನಡೆದ ತುಂಬು ಅನುಭವಗಳ ಖಣಜಕ್ಕೆ ಬುನಾದಿಯಾಗುವುದು ಎಂಬುದರಲ್ಲಿ ಸಂಶಯವಿರಲಿಲ್ಲ. ಹದಿನೈದು ಕಿಲೋಮೀಟರ್ ಮಕ್ಕಳೊಂದಿಗೆ ಮಾತನಾಡುವುದರಲ್ಲಿ ಮುಗಿದೇ ಬಿಡುವುದು, ಎಂಬ ಆಶಾಭಾವ ಚಿಗುರೊಡೆಯಿತು. ಅದು ನಾವು ಗಾಂಧಿ ನಡಿಗೆಯನ್ನು ಒಪ್ಪಿಕೊಳ್ಳಲು ಕಾರಣವೂ, ಒಪ್ಪಿಕೊಂಡದ್ದಕ್ಕೆ ಕಾರಣವೂ ಆಯಿತು. ಒಂದರ್ಥದಲ್ಲಿ ಹೇಳುವುದಾದರೆ ರಜೆ ದಿನವನ್ನು ಔದಾಸೀನ್ಯದಿಂದ, ದಿನದ ಮಹತ್ವ ಅರಿಯದೆ, ವ್ಯರ್ಥ ಮಾಡುವುದರ ಬದಲು, ಹೊಸ ಅನುಭವದ ಬುತ್ತಿಯನ್ನು ತೆರೆದರೆ ಹೊಸದೇನೋ ಸಿಗಬಹುದೆಂಬುದು ಅತಿಶಯೋಕ್ತಿ ಎನಿಸದ ಆಸೆ. ಆದರೂ 'ಗಾಂಧಿ ಜಯಂತಿ' ಚರ್ಚೆಯಲ್ಲಿ ಗಾಂಧೀಜಿಯ ತತ್ವ ಮೀರಿ, ಕ್ರಾಂತಿ ರೂಪ ತೋರಿಸಿದವರಿಲ್ಲ ಎನ್ನುವುದು ನಿಜಕ್ಕೂ ಆಶ್ಚರ್ಯವಾಗುತ್ತದೆ.
ದಿನ ಕಳೆಯುವುದರೊಳಗೆ ಆ ದಿನ ಬಂದೇಬಿಟ್ಟಿತು ನಿಜವಾದ ಗಾಂಧಿ ಪರೀಕ್ಷೆ ಇಲ್ಲಿಂದ ಆರಂಭವಾಗುತ್ತದೆ. ಯಾಕೆಂದರೆ ಇದು ಗಾಂಧಿಯ 150ನೇ ಜನ್ಮದಿನೋತ್ಸವ ಬೆಳಗ್ಗೆ ಬೇಗ ಎದ್ದಿದ್ದೆನಾದರೂ ಕೊನೆಯ ಗಳಿಗೆಯಲ್ಲಿ ಅವಸರದಲ್ಲಿ ಎನ್.ಸಿ.ಸಿ. ಇಂಫಾರ್ಮ್ ಹಾಕಿಕೊಂಡು ಹೊರಡಬೇಕಾಯಿತು. ಒಳ ಮಾರ್ಗದ ಮೂಲಕ ದೈನಂದಿನ ಹೋಗುವ ಕಾಲೇಜು ಬಸ್, ಇಂದಿನ ದಿನ ಇರಲಿಲ್ಲ. ಸುಳ್ಯಕ್ಕೆ ಹೋಗಬೇಕಾದರೆ ಕೊಟ್ಯಾಡಿ ಮಾರ್ಗದ ಮೂಲಕ ಮಾತ್ರ ಸದ್ಯಕ್ಕೆ ದಾರಿ ಉಳಿದಿತ್ತು. ಅಡೂರು ಎಂಬ ನನ್ನ ಊರಿನಿಂದ ಕೊಟ್ಯಾಡಿ ಹೋಗಿ ಅಲ್ಲಿಂದ ಸುಳ್ಯ ಬಸ್ಸು ಹಿಡಿಯಬೇಕಿತ್ತು. ಸುಳ್ಯದಿಂದ ಎಲ್ಲರೂ ಒಟ್ಟಿಗೆ ಕಾಲೇಜು ಬಸ್ಸಿನಲ್ಲಿ ಬೆಳ್ಳಾರೆ ಹೋಗಿ ಅಲ್ಲಿಂದ ನಡೆದು ಬರುವುದು ಎಂಬ ಹಾಗೆ ತೀರ್ಮಾನವಾಗಿತ್ತು. 'ಒಂದು ಬಸ್ಸು ತಪ್ಪಿದರೆ ಮತ್ತೊಂದು' ಎಂಬ ಲೆಕ್ಕಾಚಾರದಂತೆ, ಕೊಟ್ಯಾಡಿಯಲ್ಲಿ ಎರಡು ಬಸ್ಸು ಸಿಗುವಂತೆ ಬೇಗ ಹೋಗಿ ತಲುಪಿದ್ದೆನಾದರೂ. ದಿನದ ಕಾಕತಾಳೀಯತೆ ಎಂಬ ಹಾಗೆ ಆ 2 ಬಸ್ಸೂ ಬರದೆ, ತಡವಾಗಿ ಬಂದ ಮತ್ತೊಂದರಲ್ಲಿ ಏರಬೇಕಾಯಿತು. ನನ್ನ ಮೊಬೈಲ್ನಲ್ಲಿ ಕೂಡ ಕರೆಮಾಡಲು ರಿಚಾರ್ಜ್ ಮಾಡಿಸಿರಲಿಲ್ಲ. ಸೀನಿಯರ್ ಫೋನ್ ಮಾಡಿ "ಎಲ್ಲಿದ್ದೀರಿ..? ಮೆಲ್ಲ ಬನ್ನಿ ತೊಂದರೆ ಇಲ್ಲ, ನಾವು ಹೊರಡುತ್ತಿದ್ದೇವೆ ಅಷ್ಟೇ", ಎಂದು ಹೇಳಿದಾಗಲೇ ಸಮಾಧಾನವಾಗಿತ್ತು. ಬಹುಶಹ 40 ಮಂದಿಯನ್ನು ಜೊತೆಸೇರುವುದಕ್ಕೆ ಮೊದಲೇ ಸಾಕಷ್ಟು ತಾಳ್ಮೆ ಪರೀಕ್ಷೆಯನ್ನು ಎದುರಿಸಿದೆ. ಮತ್ತೊಂದು ಬೇಸರ ಎಂಬಂತೆ ನನ್ನ ಗೆಳೆಯ ವೃಂದವನ್ನು ದೂರಮಾಡಿ ಮತ್ತೊಂದು ಬಸ್ಸಿನಲ್ಲಿ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಅಲ್ಲಿ ತಲುಪಿದಾಗ ಹೊಸ ಉತ್ಸುಕತೆ ಹೊಸ ಆವೇಶ ಹೊಸ ಹುಮ್ಮನಸ್ಸು ನಮ್ಮದು. ಸಾಮಾನ್ಯವಾಗಿ ಕಂಡವರಲ್ಲ ಖಾದಿಯನ್ನು ಧರಿಸಿ, ಗಾಂಧಿಟೋಪಿ ಧರಿಸಿದ್ದು ಕಂಡುಬರುತ್ತಿತ್ತು. ಪ್ರತ್ಯೇಕವಾಗಿ ಕಾಣುತ್ತಿದ್ದ ನಮ್ಮನ್ನು "ವಿಶೇಷ ಪರಿಗಣನೆ" ಎಂಬಹಾಗೆಯೋ ಅಥವಾ "ಗುಂಪಿಗೆ ಸೇರಿದ್ದು" ಎಂಬಹಾಗೆಯೋ ನಿರ್ವಚಿಸಬಹುದಾಗಿತ್ತು. ಬೆಳಗ್ಗಿನ ಗಟ್ಟಿ ಉಪಹಾರದ ನಂತರ ಮನಮುಟ್ಟುವ ಅತ್ಯಂತ ಪ್ರೌಢಿಮೆಯ ನಟರ ನಾಟಕ ಗಾಂಧಿ ಅಭಿಮಾನಿಗಳಿಗೆ ಮತ್ತಷ್ಟು ಗುರು ನೀಡಿದ್ದು ಸುಳ್ಳಲ್ಲ. ಜಯ ಘೋಷಗಳೊಂದಿಗೆ, ಅತ್ಯಂತ ಏರು ಧ್ವನಿಯ ಗೌರವ ಘೋಷಣೆಗಳೊಂದಿಗೆ ಗಾಂಧಿ ನಡಿಗೆ ಮುಂದುವರಿಯಿತು. ಸಾಲಿನ ಮುಂಬಾಗದಲ್ಲಿ ಹಿರಿಯ ಸಂಚಾಲಕರಿದ್ದರೆ, ಕೈಅಳತೆಯ ಹಿಂಭಾಗದಲ್ಲಿ ನಾವು NCC ಮಕ್ಕಳಿದ್ದೆವು. ನಮ್ಮ ಹಿಂದೆ NSS ಮಕ್ಕಳು ಹಾಗೂ ಊರ ಜನರು ಎಲ್ಲರೂ ಸಾಲಾಗಿ ಮುಂದುವರಿಯುತ್ತಿದ್ದೆವು. ಪ್ರತಿ ಹೆಜ್ಜೆಯೂ ಗಾಂಧಿ ಚಿಂತನೆಗಳ, ಗಾಂಧಿ ತತ್ವಗಳ, ಗಾಂಧಿ ವಿಚಾರಧಾರೆಗಳ ಬಗ್ಗೆ ವಿಶ್ಲೇಷಿಸುವ ಹೆಜ್ಜೆಗಳೆನಿಸಿದೆವು. ಗಾಂಧೀಜಿ ತಮ್ಮ ಆತ್ಮಕಥನದಲ್ಲಿ 'ಸತ್ಯಾನ್ವೇಷಣೆ' ನಡೆಸಿದಂತೆ ನಾವು ಹೆಜ್ಜೆಗಳ ಮುಖಾಂತರ, ಯಾವುದೋ ಮರೆಯಲ್ಲಿರುವ ನಗ್ನ ಸತ್ಯವನ್ನು ಅರಸಿ ಮುಂದಡಿ ಇಡುತ್ತಿದ್ದೇವೆ, ಎಂಬುದು ಧ್ಯೇಯಎಂಬಂತೆ ತೋರುತ್ತಿತ್ತು. ಬಾನೆತ್ತರಕ್ಕೆ ಹಾರುತ್ತಿದ್ದ ತ್ರಿವರ್ಣ ಧ್ವಜ, ನಮ್ಮ ವೃಂದದ ಮುಂದೆ ಹಿಂದೆ ರಾರಾಜಿಸುತ್ತಾ ಹಾರಾಡುತ್ತಿದ್ದವು. ಅದು ನಮ್ಮ ಕಣ್ಣಿಗೆ ಇಂಪು, ದೇಹದ ಬೇಗೆಗೆ ತಂಪು ನೀಡುತ್ತಿತ್ತು. ದಾರಿಯಲ್ಲಿ ಸಾಲಾಗಿ ಸ್ವಾಗತಿಸುತ್ತಿದ್ದ ಶಾಲಾಮಕ್ಕಳು, ಕೈಬೀಸಿ ಕರೆಯುತ್ತಿದ್ದ ತಂಪು ಪಾನೀಯಗಳು, ಸಣ್ಣ ಪುಟ್ಟ ಹೊಟ್ಟೆತುಂಬಿಸುವ ತಿಂಡಿಗಳು ದಾರಿಯ ದಣಿವನ್ನು ಮರೆಮಾಚುತ್ತಾ ಇದ್ದದ್ದು ಸುಳ್ಳಲ್ಲ. "It costs a lot of money to keep this man in poverty", ಬಗೆ ಬಗೆಯ ರುಚಿಕರ, ಭೋಜನೀಯ, ಸುಖಾಧ್ಯಗಳನ್ನು ಕಂಡಾಗ ಸರೋಜಿನಿ ನಾಯ್ಡು ಅವರು ಗಾಂಧಿ ಬಗ್ಗೆ ಟೀಕಿಸಿದ್ದು ನೆನಪಾಯಿತು. ಗೋಡ್ಸೆ ಅಭಿಮಾನಿಗಳು, ಅಪ್ಪಟ ಹಿಂದೂ ಎಂದು ತಮ್ಮ ಬಗ್ಗೆ ತಾವು ತುಂಬು ವಿಶ್ವಾಸದಿಂದ ಎತ್ತಿ ಅಥವಾ ಇದ್ದದ್ದನ್ನು ಇದ್ದ ಹಾಗೆ ಹೇಳಿದವರೋ, ಆಡುವ ಗಾಂಧಿ ವಿರೋಧಿ ಘೋಷಣೆಗಳನ್ನು ನಾನು ಎಂದಿಗೂ ಬೆಂಬಲಿಸಿದವನಲ್ಲ. ಅವರು ನೀಡಿದ ಶಾಂತಿ ಮಂತ್ರ, ಅವರು ದೇಶಕ್ಕೆ ನೀಡಿದ ಕೊಡುಗೆ, ಅವರು ವಿಚಾರಧಾರೆಗಳ ಮೂಲಕ ತಿಳಿಸಿ ಕೊಟ್ಟ ತತ್ವ, ಅದನ್ನು ಬೆಂಬಲಿಸುವವರು ಗಾಂಧಿಗೆ ಗೌರವ ಸಲ್ಲಿಸಬೇಕಾದ್ದು ಅವಶ್ಯಕ ಎಂಬುದು ನನ್ನ ಅನಿಸಿಕೆ. ದಾರಿಯ ಆಯಾಸ ಅಲ್ಲಲ್ಲಿನ ಉತ್ತೇಜಕಗಳಿಂದ ಒಂದಷ್ಟು ಕಡಿಮೆಗೊಂಡರೂ ಆಯಾಸ ಕಡಿಮೆ ಏನಿರಲಿಲ್ಲ. ಬಹುಶಹ ಉರಿಬಿಸಿಲಿನ ಹೊತ್ತಿಗೆ, ಹೊರಗೆ ವಿಹಂಗಮವಾಗಿ ವಿಹರಿಸುತ್ತಾ ನಡೆದದ್ದು, ಹೈಸ್ಕೂಲ್ ತರಗತಿಗಳ ನಂತರ ಇದುವೇ ಆಗಿರಬೇಕು. ಅಂದಿನ ಶಕ್ತಿ ಮುಂದುವರಿಸಿಕೊಂಡು ಬಂದಿದ್ದಾರೆ ಈಗ ಇಷ್ಟು ಆಯಾಸ ಆಗುತ್ತಿರಲಿಲ್ಲ ಎಂಬಹಾಗೆ ಮನಸ್ಸು ಹೇಳುತ್ತಿತ್ತು. ಗಾಂಧೀಜಯಂತಿಯ ಊಟದ ಸವಿಯಂತೂ ಅವರ್ಣನೀಯ ಪಾಯಸ ಹಾಗು ಜಿಲೇಬಿ ಊಟದ ಸ್ಟ್ಯಾಂಡರ್ಡ್ ಮೇಲೆ ತಂದಿತ್ತು. ಮತ್ತೆ ಮುಂದುವರಿದ ನಡಿಗೆಯಲ್ಲಿ ಗಾಂಧಿ ಪರೀಕ್ಷೆಯ ಮತ್ತೆ ಎದುರಾಗತೊಡಗಿತು. ಅಲ್ಲಿಯವರೆಗೆ ಮುಂದೆ ನಿಂತು ಘೋಷಣೆ ಕೂಗುತ್ತಿದ್ದ ನಮಿಗೆ ಖಾದಿಯ ಹಿಂಭಾಗದಲ್ಲಿ ನಿಲ್ಲಬೇಕೆಂಬ ಹಾಗೆ ದೇಶವಾಯಿತು. ಕ್ಯಾಮರಾ ಬರುವಾಗ ಮಾತ್ರ ಘೋಷಣೆ ಕೂಗುವುದೆಂಬ ಆರೋಪ ಕೂಡ ನಮ್ಮ ತಲೆಗೇರಿಸಿದ್ದರು. NCCಯ ಬೆಲೆಗೆ ಅನುಸರಿಸಿ ಹಾಗು NCC ವಿದ್ಯಾರ್ಥಿಗಳಿಗೆ ದೈಹಿಕ ಪರಿಶ್ರಮ ಹೆಚ್ಚು ಇರುವುದರಿಂದ ನಡೆಯುವಲ್ಲಿ ಮುಂದುವರಿಯಲು ಸಮರ್ಥರು ಎಂಬುದು ನಿಜ. ಅದು ನಮ್ಮಲ್ಲಿ ಕೆಲವರಿಗೆ ಕಣ್ಣು ಕೆಂಪಗಾಗುವಂತೆ ಮಾಡಿದ್ದು ಸುಳ್ಳಲ್ಲ. ನಾನು ಇಲ್ಲಿಯೂ ಗಾಂಧಿ ನಡೆಸಿದ ಪರೀಕ್ಷೆ ಎಂದೇ ತಿಳಿದೆ. ತಾಳ್ಮೆ ನಮ್ಮಲ್ಲಿ ತೀರ ಕಡಿಮೆ. ಹಿಂದೆ ನಿಲ್ಲಿಸಿದ ಮೇಲೆ ಮುಂದೆ ಹೋಗಬಾರದೆಂಬ ಪರಿವೆ ಮರೆತು ಮುಂದುವರಿದೆವು. ಅದು ಉತ್ಸಾಹವನ್ನು, ಹುಮ್ಮನಸ್ಸನ್ನು, ನಮ್ಮ ನಡೆಯುವ ಚಪಲತೆಯನ್ನು ಪ್ರತಿನಿಧಿಸುವುದು ಎಂಬುದೂ ಹೌದು. ಮುಂದುವರಿಯಬೇಕೆಂಬ ಉತ್ಸುಕತೆಯಿಂದ ಆಯಾಸ ಹೆಚ್ಚು ಮಾಡಿಕೊಂಡು, ಘೋಷಣೆ ಕೂಗಲು ಒಗ್ಗಟ್ಟು ಕಳೆದುಕೊಂಡೆವು ಎಂಬುದು ವಿಪರ್ಯಾಸದ ಸಂಗತಿ. ಹಾಗೆ ಮುಂದುವರಿದ ನಮಗೆ ಗಾಂಧಿ ಜಯಂತಿಯ ಹೊಸ ಅನುಭವದೊಂದಿಗೆ, ಮನೆಗೆ ಮರಳಲು ಸಮಯವಾಯಿತು ಎಂಬ ಪರಿಜ್ಞಾನ ಮೂಡಿತು. ಸುಳ್ಯ ತಲುಪುವಾಗ ಹೆಚ್ಚು ಘೋಷಣೆ ಕೂಗಬೇಕೆಂಬ ಆಸೆಗೆ ಭಂಗವಾದದ್ದು ಬೇಸರ ತಂದಿತ್ತು. ಗಾಂಧಿ ವಿರೋಧಿಗಳ ವೃಂದವು ನಮ್ಮ ಜೊತೆ ಇದ್ದುದು ಕೇವಲ "ಭಾರತ್ ಮಾತಾಕಿ ಜೈ" ಹೇಳಬೇಕಾಗಿತ್ತು ಎಂಬುದು ಮರೆಯ ಸತ್ಯ. ಬಸ್ಸಿನಲ್ಲಿ NCC ಶೂವಿನ ನೋವು ಕಾಲನ್ನು ತುಂಬಿಕೊಂಡಿತ್ತು. ಸೀಟು ಸಿಕ್ಕಿದ ಕಾರಣ ಸ್ವಲ್ಪ ನೆಮ್ಮದಿ ಇತ್ತು. ಆದರೆ ವೃದ್ಧನೊಬ್ಬನ ರೂಪದಲ್ಲಿ ಮತ್ತೆ ಗಾಂಧಿ ಪರೀಕ್ಷೆ ನಡೆಸುತ್ತಾನೆ ಎಂಬ ಮುಂದಾಲೋಚನೆ ಇರಲಿಲ್ಲ. ಕೆಲವೇ ಕ್ಷಣಗಳಲ್ಲಿ ಬಂದ ವೃದ್ಧನಿಗೆ ಸೀಟು ಕೊಡದೆ ಇರುವ ಕಠೋರ ಹೃದಯಿ ನಾನಲ್ಲ. ಎದ್ದು ನಿಂತೆ. ಟಿಕೆಟ್ ಪಡೆದ ನಂತರ ಆಯಾಸದಿಂದ ನಿದ್ದೆ ತೂಗುತ್ತಿದೆ. ಆಚೆ ಹೋಗಿ ಈಚೆ ಬಂದ ಕಂಡಕ್ಟರ್,
"ಆ ಬ್ಯಾಗನ್ನು ಅಲ್ಲಿ ಇಡಬಾರದಾ ಮನುಷ್ಯರು ನಡೆಯುದಕ್ಕೂ ಜಾಗ ಇಲ್ಲ ಇಲ್ಲಿ.." ಮತ್ತೆ ಗಾಂಧಿ ಪರೀಕ್ಷೆ ಮುಂದುವರೆದಿದ್ದು. ತಾಳ್ಮೆಯಿಂದ ಬ್ಯಾಗ್ ತೆಗೆದು ಮೂಲೆಯಲ್ಲಿರಿಸಿದೆ. ಕಂಡಕ್ಟರ್ ಬರುವಾಗ ಬದಿಗೆ ಸರಿದು ದಾರಿ ಬಿಟ್ಟು 'ಅವನ ಸಮಸ್ಯೆ ಬೇಡ' ಎಂದುಕೊಂಡೆ. ಆಗಾಗ ಬದಿಗೆ ಸರಿಯುತ್ತಿದ್ದೆನಾದರೂ ಬದಿಯಲ್ಲಿ ಯಾರಿದ್ದರು ಎಂಬುದು ಗಮನಿಸಿರಲಿಲ್ಲ. ಅಲ್ಲಿದ್ದ ಹೆಂಗಸು ಒರಟಾಗಿ ವರ್ತಿಸಿದಾಗಲೇ ತಿಳಿದಿತ್ತು. "ಗಾಂಧಿ ನನ್ನಲ್ಲಿರುವ, ಒಂದಿಷ್ಟು ತಾಳ್ಮೆಯನ್ನು ಅದೆಷ್ಟು ಪರೀಕ್ಷಿಸುವೆ..?" ಎಂದು ತೋರಿದರೂ ಯಾವಾಗಲಾದರೂ ಹೀಗೆ ಪರೀಕ್ಷಿಸಿದರೆ ಒಂದಿಷ್ಟಾದರೂ ತಾಳ್ಮೆ ಉಳಿದೀತು. ಮನೆಗೆ ಸೇರಿದ ಮೇಲೆ ಆರಾಮವಾಗಿ ಮಲಗಿದೆ. ಮಲಗಿದವನಿಗೆ ಬೆಳಗ್ಗೆ ತಡವಾಗಿ ಎದ್ದದ್ದು ಮಾತ್ರ ನೆನಪು. ಗಾಂಧಿಜಿಯನ್ನು ವಿರೋಧಿಸುವ ಗಾಂಧಿ ವಿರೋಧಿಗಳು, ಹಿಂದಿನ ದಿನ ಗಾಂಧಿಯನ್ನು ಜರೆದುದು ಕಿವಿಯನ್ನು ಕುಟುಕಿದಂತೆ ಆಗುತ್ತಿತ್ತು. ಮಧ್ಯಾಹ್ನ ಆಗುವಾಗ ಅದೇ ಗಾಂಧಿ ವಿರೋಧಿ ಹಿಂದಿನ ದಿನ ಸಂಜೆ ಆಕ್ಸಿಡೆಂಟ್ ಆದ ವಿಚಾರ ತಿಳಿಯಿತು. ಕಾಕತಾಳಿಯವೋ, ನಿಜವಾಗಿ ಆಗಬೇಕಾದ ಹಾಗೆ ಆದುದೋ ನಾನರಿಯೆ. ಆದರೆ ಬರೆದದ್ದು ಇಷ್ಟೂ ನಿಜ. ಆರಂಭದಲ್ಲಿ ಬರೆದ ಕಿರು ಅವಲೋಕನದ ಅರ್ಥ ಈಗ ಪುನಹ ಓದಿದರೆ ಮನದಟ್ಟಾಗಬಹುದು. ಅಳವಡಿಸಿಕೊಳ್ಳಬೇಕಾದ ತತ್ವಗಳನ್ನು ವಿರೋಧಿಸಿ ಗಾಂಧಿ ವಿರೋಧಿಗಳಾದವರೇ ಹೆಚ್ಚು. ಗಾಂಧೀಜಿ ಮತ್ತೆ ಮತ್ತೆ ಅವತರಿಸಿ ಬಂದು ಮಾನವರಿಗೆ ತಾಳ್ಮೆ ಪಾಠ ಮಾಡಬೇಕಾಗಿದೆ. ನಿಜವಾಗಿ ಗಾಂಧಿ ವಿರೋಧಿಗೂ, ಗಾಂಧಿ ಭಕ್ತರಿಗೂ ಗಾಂಧಿ ಗೊತ್ತಿಲ್ಲ, ಯಾರೂ ವಿಮರ್ಶಿಸಿಲ್ಲ. ಕೇವಲ ವಾದಿಸಿದ್ದಾರಷ್ಟೇ. ಸಾಕಷ್ಟು ಕಲಿಯಬೇಕಿದೆ. "An unending journey of study.."