Contact Angle Touch Studio for your Blog Design. Visit Site

ಅತಿವೃಷ್ಟಿ ಹಾಗೂ ನವೀಕರಣ

4 min read

"ತುಳುನಾಡು" ಕಲೆಗಳಿಗೆ, ಆಚಾರಗಳಿಗೆ, ಭೂತ-ನೇಮ ಮುಂತಾದ ಪಾರಂಪರಿಕ ಅನುಷ್ಠಾನಗಳಿಗೆ ಹೆಸರುವಾಸಿ. ಇತರ ಪ್ರದೇಶಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಕಂಡುಬರುವ ದೈವಿಕ ಭಾವನೆ ಹಾಗೂ ಆಚರಣೆಗಳೇ ಹೆಚ್ಚು. ಉತ್ತರಕ್ಕೆ ಮುಖಮಾಡಿ ನಿಂತರೆ, ಎಡಗಡೆ ಮಳೆಯನ್ನು ತಂದು ನೀಡುವ ವಿಶಾಲ ಕಡಲು ಮತ್ತು ಬಲಗಡೆ ಮೋಡಗಳಿಗೆ ತಡೆಗೋಡೆಯಂತೆ ಅಚಲವಾಗಿ ನಿಂತಿರುವ ಪಶ್ಚಿಮಘಟ್ಟ. ಹಸಿರು ಸಸ್ಯಶಾಮಲತೆಗೆ ಹೆಸರು ತುಳುನಾಡು. ಸತ್ಯ ಹೇಳಬೇಕಾದರೆ ಮಳೆಗಾಲವನ್ನು ಸರಿಯಾಗಿ ಅನುಭವಿಸುವವರು, ಆಚರಿಸುವರು, ಮನೋರಂಜನೆಯನ್ನು ಪಡೆಯುವವರು ತುಳುನಾಡಿನ ನಿಜ ಭಕ್ತರು. ಮಳೆಗಾಲ ಎಂದು ಹೇಳಿದಾಕ್ಷಣ ಅಜ್ಜಿ ಹೇಳಿದ ಕೆಲವೊಂದು ವಿಚಾರಗಳು ನೆನಪಿಗೆ ಬರುತ್ತದೆ, "ಹಿಂದೆ ಬರ್ತಾ ಇದ್ದ ಮಳೆ ಈ ರೀತಿಯದ್ದಲ್ಲಾ, ಕೆಲವೊಂದು ಸಲ ಏಳು ರಾತ್ರಿ ಏಳು ಹಗಲೂ ಎಡೆಬಿಡದೆ ಸುರಿಯುವ ಜಡಿಮಳೆ. ಎಂತಹ ಕಲ್ಲೆದೆಯ ಧೀರರನ್ನೂ ನಡುಗಿಸುವಂತಹ ಸಿಡಿಲಿನ,ಗುಡುಗಿನ ಸ್ಪರ್ಧಾ ಮೇಳ. ಹೊರಜಗತ್ತಿನ ಅರಿವೇ ಇಲ್ಲದೆ ದ್ವಿಪದ ಜೀವಿಗಳ ಹಾಗೆ ಬದುಕಬೇಕಾದ ಪರಿಸ್ಥಿತಿ, ಯಾಕಂದ್ರೆ ಪಯಸ್ವಿನಿ(ನಮ್ಮ ಊರಿನಿಂದ ಹೊರಗೆ ಹೋಗಲು ದಾಟಬೇಕಾದ ಹೊಳೆ)ಯಲ್ಲಿ ದೂರದಿಂದ ದೊಡ್ಡ ದೊಡ್ಡ ದಿಮ್ಮಿಗಳೇ ಬರುತ್ತಿದ್ದರಿಂದ, ಧೋಣಿಯಲ್ಲಿ ದಾಟುವ ವಿಚಾರ ಇರಲಿಲ್ಲ. ಮಳೆಗಾಲಕ್ಕೆ ಮೊದಲೇ ಬೇಕಾದ್ದನ್ನು ತಂದಿಟ್ಟುಕೊಂಡರೆ ಆಯಿತು. ಮಳೆಗಾಲದಲ್ಲಿ ನಿನ್ನ ಅಪ್ಪ ಕೆಲಸ ಮುಗಿಸಿ ಬರುವಲ್ಲಿವರೆಗೆ ಗಟ್ಟಿ ಭಜನೆ ಹೇಳುವುದೇ ನನ್ನ ಕೆಲಸ. ಆಗ 'ಗುಡುಗಿನ' ಭಯವೂ ಇಲ್ಲ 'ಜಡಿಮಳೆಗೆ ಮಣ್ಣಿನ ಗೋಡೆ ಜರಿಯುವುದೋ' ಎಂಬ ಭಯವೂ ಇಲ್ಲ."ಹೀಗೆ ಹೇಳುವುದು ಕೇಳಿದಾಗ ಈಗ ಬರುವ ಮಳೆ ಅಂದಿನ ಮಳೆಯ ಭೀಕರತೆಗೆ ಹೋಲಿಸಿದರೆ ಏನೂ ಅಲ್ಲ ಎಂದು ತೋರುತ್ತದೆ. 
ಆದರೆ ಅಂದು ಕಂಡುಕೇಳರಿಯದ ನಿಜವಾದ ದೊಡ್ಡ ಭೀಕರತೆಗಳು ಇಂದಿನ ದಿನಗಳಲ್ಲಿ ತಾಂಡವವಾಡುತ್ತಿರುವುದನ್ನು ನಾವು ಕೆಲ ದಿನಗಳ ಹಿಂದಷ್ಟೇ ಕಂಡಿದ್ದೇವೆ. ಅಂದು ಏಳು ರಾತ್ರಿ ಏಳು ಹಗಲು ಸುರಿದ ಮಳೆಗೂ ಅಲುಗಾಡದ ಗುಡ್ಡಗಳು ಈಗೇಕೆ ಹರಿದುಬರುತ್ತಿದೆ....? ಅಂದಿನ ಮಳೆಗೆ ತುಂಬಿ ನಿಲ್ಲದ ನೀರು ಇಂದಿನ ಮಳೆಗೆ ಯಾಕೆ ಸಿಟಿಗಳನ್ನು ಮುಳುಗಿಸುತ್ತಿದೆ....?ಯಾಕೆ ಹೀಗೆ.....? ಇಲ್ಲಿ ವಿಮರ್ಶೆಗೆ ಆಸ್ಪದ ಮೂಡಿಬರುತ್ತದೆ. 
ಪ್ರಾಧ್ಯಾಪಕರೊಬ್ಬರು ಹೇಳಿದ ನೆನಪು, "ಪ್ರಕೃತಿಯಲ್ಲಿ ಕಾಣಲು ಸಿಗುತ್ತಿದ್ದ ವಿಚಿತ್ರಗಳು ಅಂದರೆ 'ಎತ್ತರದ ಬೆಟ್ಟದಲ್ಲಿ ಬೃಹದಾಕಾರದ ಕಲ್ಲು', 'ಎಷ್ಟೋ ವರ್ಷಗಳಿಂದ ನೀರು ಹರಿದರೂ ಸವೆಯದ ಕಲ್ಲುಗಳು', 'ಎತ್ತರ ವಾದಂತಹ ವೃಕ್ಷದ ಕೆಳಗೆ ಬೃಹದಾಕಾರದಲ್ಲಿ ಬೆಳೆದ ಹುತ್ತಗಳು'. ಇವುಗಳಲ್ಲಿ ಪೂರ್ವಿಕ ಮಾನವ ಯಾವುದೋ ಒಂದು ಅಗೋಚರ ಶಕ್ತಿಯ ಪ್ರಭಾವವನ್ನು ಅಥವಾ ನಿಯಂತ್ರಣವನ್ನು ಕಾಣುತ್ತಾನೆ. ಅದು ಅವನಲ್ಲಿ ಭಕ್ತಿಯ ಭಾವನೆಯನ್ನು ಅದೇರೀತಿ ಅಂತಹ ಪ್ರದೇಶಗಳನ್ನು ಶ್ರದ್ಧಾ ಕೇಂದ್ರವಾಗಿ ಬದಲಿಸುವ ಮನೋವೃತ್ತಿಯನ್ನು ಮೂಡಿಸುತ್ತದೆ. ಮಾನಸಿಕವಾಗಿ ಒಪ್ಪಿಕೊಂಡು ಅಂತಹ ಒಂದು ಕಣ್ಣಿಗೆ ಕಾಣದ ಶಕ್ತಿಯನ್ನು ಭಕ್ತಿಯಿಂದ ಆರಾಧಿಸಿದರೆ ತನ್ನ ಕಾರ್ಯದ ಸಾಧನೆಗೆ ಸಹಕಾರ ವಾಗಬಹುದು ಎಂಬ ಭಾವನೆ ಆತನಲ್ಲಿ ಮೂಡುತ್ತದೆ. ಇದಕ್ಕೆ ಕ್ರಿಯಾ ರೂಪದ ಚಲನೆಯಾಗಿ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ಆಚರಣೆಗಳು ವಿವಿಧ ವಿಧಿವಿಧಾನಗಳನ್ನು ಬೋಧಿಸಿ ಅದನ್ನು ಧರ್ಮವಾಗಿಸುತ್ತದೆ. ಹೊಳೆ ಬದಿಯ ದೇವಸ್ಥಾನಗಳು, ಎತ್ತರದ ಬೆಟ್ಟದ ತುದಿಯ ದೇವಸ್ಥಾನಗಳು, ಬೃಹದಾಕಾರದ ಮರದ ಕೆಳಗಿನ ಆರಾಧನಾ ಕ್ಷೇತ್ರಗಳು ಕಂಡು ಬರುವುದಕ್ಕೆ ಇದುವೇ ಕಾರಣವಿರಬಹುದು."
ಪ್ರಕೃತಿಯ ವಿಚಿತ್ರಗಳನ್ನು ಮಾನವನು ಆರಾಧನಾ ಕ್ಷೇತ್ರಗಳಾಗಿ ಅಥವಾ ಯಾವುದೋ ದೈವಿಕ ಶಕ್ತಿಯ ಪ್ರಭಾವದ ಮೂಲವಾಗಿ ಪರಿಗಣಿಸಿದ ಎಂದಾದರೆ. ಈಗ ನಡೆಯುತ್ತಿರುವ ವಿಘಟನೆಗಳು ಅಥವಾ ಸಹಿಸಲಸಾಧ್ಯವಾದ ಪ್ರಾಕೃತಿಕ ವಿಕೋಪಗಳನ್ನು ದೈವಿಕ ಸಂಕಲ್ಪ ಎಂದು ಪರಿಗಣಿಸಲು ಸಾಧ್ಯವಿಲ್ಲ ಯಾಕೆ....? ಖಂಡಿತ ಸಾಧ್ಯವಿದೆ. ಆದರೆ ಹಾಗೆ ಹೇಳಿ ದೇವರಿಗೆ ಮೊರೆ ಹೋದರೆ ಮಾತ್ರ ಪ್ರಯೋಜನವಿಲ್ಲ. ದೇವರು ಆ ರೀತಿ ಸಂಕಲ್ಪ ಕೈಗೊಳ್ಳಲು ಕಾರಣವೇನಿರಬಹುದು  ಎನ್ನುವುದರ ಬಗ್ಗೆಯೂ ಮಾನವ ಯೋಚಿಸುವ ಅವಶ್ಯಕತೆ ಈಗ ಬಂದಿದೆ.
ಚಳಿಯ ಕಾರಣ ಹೇಳಿ ಬೆಳಗ್ಗೆ ತಡವಾಗಿ ಹೇಳಲು, ಸಂಜೆ ಸಣ್ಣ ಮಳೆಗೆ ಕೆಸರಲ್ಲಿ ಆಡಿ ಸಂತೋಷ ಪಡೆಯಲು, ಆಟಿಯ ಮಳೆಯನ್ನು ಮನೆಯಲ್ಲಿ ಎಲ್ಲರೂ ಒಂದುಗೂಡಲು, ಚೆನ್ನೆಮಣೆ ಆಟ ಆಡಲು, ಮನೆಯ ಮೂಲೆಯಲ್ಲಿ ತೆಗೆದಿರಿಸಿದ್ದ ಉಪ್ಪು ಸೋಳೆಯಿಂದ ಮಾಡಿದ ತಿಂಡಿ ತಿನಿಸುಗಳನ್ನು ಸವಿದು ಮಳೆಯ ಚಳಿಯನ್ನು ಓಡಿಸಲು ಕಾರಣವಾಗಿಸುತ್ತಿದ್ದ ಕಾಲ ಮೀರಿ ಹೋಗಿದೆ. ಇಂದಿನ ಸಮಾಜದ ಹೊಸತಲೆಮಾರು ಕಳೆದುಕೊಳ್ಳುತ್ತಿರುವ ಅಮೂಲ್ಯ ರತ್ನಗಳಲ್ಲಿ ಇದು ಕೂಡ ಒಂದೆನಿಸಬಹುದು. ನನಗೆ ಖಂಡಿತ ನೆನಪಿದೆ, ಅಂದು ನಾನು ಶಾಲೆಗೆ ಹೋಗುತ್ತಿರಲಿಲ್ಲ, ಅಮ್ಮ ಶಾಲೆಯಲ್ಲಿ ಟೀಚರ್ ಕೆಲಸ ಮಾಡುತ್ತಿದ್ದರಿಂದ ರಜೆ ಮಾಡದೆ ಹೋಗುತ್ತಿದ್ದರು. ಅಮ್ಮ ಬರುವುದನ್ನೇ ಕಾದು ಹೊರಗಿನ ತಿಟ್ಟೆಯಲ್ಲಿ, ಅಜ್ಜಿ ಮಾಡಿಕೊಟ್ಟ ಉಂಡ್ಲಕ್ಕ (ಎಣ್ಣೆಯಲ್ಲಿ ಕರಿದ ತಿನಿಸು) ಬಾಯಿಗೆ ಹಾಕಿಕೊಂಡು, ಅಜ್ಜಿಯ ಮಡಿಲಲ್ಲಿ ಮಲಗಿ, 'ಮಂಗಳ'ದಲ್ಲಿ ಬರುತ್ತಿದ್ದ ಕಥೆಯನ್ನು ತುಂತುರು ಮಳೆಯ ಹಿನ್ನೆಲೆ ಗಾಯನದಲ್ಲಿ ಕೇಳಲು ಅದೆಷ್ಟು ಇಂಪು.....
ಇಂದಿನ ಭೋರ್ಗರೆಯುವ ಮಳೆಯಲ್ಲಿ, ನಾವು ಗುಡ್ಡ ಅಗೆದು ಕಟ್ಟಿಸಿದ ಮನೆಯನ್ನು ರಕ್ಷಿಸಲು, ನೀರಿನ ಒಳ ಚರಂಡಿಗಳನ್ನು ಮುಚ್ಚಿ ನಾವು ಕಟ್ಟಿದ ಸಮುಚ್ಚಯ ಉಳಿಸಲು ಹಾಗೂ ಎಲ್ಲದಕ್ಕೂ ಮೀರಿ ಆ ಮನೆಗಳಲ್ಲಿ ಜಂಜಾಟದ ಜೀವನ ನಡೆಸುತ್ತಿರುವ ನಾವುಗಳನ್ನು ರಕ್ಷಿಸಲು ಸಮಯ ಹೋಗುತ್ತಿದೆ. ಹಾಗೆಯೇ ಭೋರ್ಗರೆಯುವ ಮಳೆಯ ಇಂಪನ್ನು ಆಸ್ವಾದಿಸಿ ಕಥೆ ಹೇಳಲು ಮನೆಯಲ್ಲಿ ಅಜ್ಜಿ ಇಲ್ಲ. ಉಪ್ಪುಸೊಳೆಇಂದ ಮಾಡಿದ ತಿನಿಸು ತಿನ್ನಲು ಯೋಗ ಇಲ್ಲ. ಮಾನವನ ಜೀವನ ಅದೆಷ್ಟು ಒತ್ತಡ ಜಂಜಾಟಗಳಿಗೆ ಸಿಲುಕಿ ಹೋಗಿದೆ ಎಂದು ಆಲೋಚಿಸಿದರೆ ಮನೆಯಲ್ಲಿ ಒಂದು ಸಲ ಎಲ್ಲರೂ ಒಂದಾಗಿ ಊಟ ಮಾಡುವುದಕ್ಕೂ ಸಮಯ ಇಲ್ಲ. ನಗರ ಜೀವನದಲ್ಲಿಯಂತೂ ಅಮ್ಮನೊಂದಿಗೆ ಮಾತನಾಡದ ಮತ್ತು ತಂದೆಯೊಂದಿಗೆ ಬೆರೆಯದೇ, ನಿಜ ಪ್ರಕೃತಿಯನ್ನು ಆಸ್ವಾದಿಸದೇ ಇರುವ ಮಕ್ಕಳು. ತಮ್ಮ ಶೈಕ್ಷಣಿಕ ಜೀವನವೆಂಬ ಚೌಕಟ್ಟಿನಲ್ಲಿ ಪ್ರಪಂಚವನ್ನು ಕಾಣುವ, ಪುಸ್ತಕದ ಒಳಗೆ ಸೌಂದರ್ಯ ಸಮೀಕ್ಷೆ ನಡೆಸುವ ಅನಿವಾರ್ಯತೆಯನ್ನು ಕಾಣಬಹುದು. ಆಟಿಯ ಪ್ರಾರಂಭದಲ್ಲಿ ನೇಜಿ ನೆಡುವ ಕ್ರಿಯೆಯೊಂದಿಗೆ ಕೆಸರಿನಲ್ಲಿ ಮುಳುಗುವ ಹಿಂದಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಹೆಚ್ಚುಇತ್ತು ಎನ್ನುವಂತದ್ದು ಆಧುನಿಕ ವಿಜ್ಞಾನ ಕೂಡ ಒಪ್ಪುತ್ತದೆ. ರಾತ್ರಿಯ ಹೊತ್ತು ಅಂಗಳದಲ್ಲಿ ಮಲಗಿ, ಅಡಿಯಲ್ಲಿ ಹಾಸಿದ ಬೈಹುಲ್ಲಿನ ತುರಿಕೆಯನ್ನು ಸಹಿಸಿಕೊಂಡು, ಬಾನಿನಲ್ಲಿ ಸಂಚರಿಸುವ ನಕ್ಷತ್ರಗಳನ್ನು ಗುರುತು ಮಾಡಿ, ದೊಡ್ಡ ಬಟ್ಟಲಾಕಾರದ ಚಂದ್ರನನ್ನು ಹೊಗಳಿ, ನಕ್ಷತ್ರಗಳ ಹೊಳಪನ್ನು ಆಶ್ಚರ್ಯದಿಂದ ಕಂಡು ನಂತರ ಯೋಚನೆ-ಯೋಜನೆ-ಕಾರ್ಯಸಾಧನೆಗಳ ವಿಮರ್ಶೆಯನ್ನು ಮಾಡಿ ರಾತ್ರಿ ಕಳೆಯುವ ದಿನಗಳು ಈಗ ಇಲ್ಲ. ಅಂತಹ ಸುಂದರ ರಾತ್ರಿಗಳನ್ನು PUBG ಆಟ ಆಪೋಷನ ತೆಗೆದುಕೊಂಡಿದೆ. ನಿರಕ್ಷರಕುಕ್ಷಿಗಳಾಗಿದ್ದ ಹಿರಿಯ ತಲೆಗಳು ಒಳ್ಳೆಯ ರೀತಿಯಲ್ಲಿ ಮಾತನಾಡಲು, ವ್ಯವಹರಿಸಲು ತಿಳಿದುಕೊಂಡಿರುವುದು ಹೇಗೆ? ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಮೂಡಲೇಬೇಕು. ಹಿಂದೆ ಮನೋರಂಜನೆಗೆ, ಎಲ್ಲರೂ ಒಂದಾಗಿ ಕಷ್ಟ-ಸುಖ ಮಾತನಾಡಿಕೊಂಡು ಪುರಾಣ ಕಥೆಗಳ ಯಕ್ಷಗಾನದ ಪ್ರಸಂಗಗಳ ಮೂಲಕ ನಗುವ ನಗಿಸುವ ಮನೋಪ್ರವೃತ್ತಿ ಹೊಂದಿದ್ದರು, ಎನ್ನುವುದು ಇದಕ್ಕೆ ಪ್ರಮುಖ ಕಾರಣ ವಾಗಿ ಕಂಡುಕೊಂಡರೂ ತಪ್ಪಾಗಲಾರದು..
'ಬದುಕಬೇಕು' ಇದು ಮಾನವನ ಚಪಲತೆ ಮಾತ್ರವಲ್ಲ, ಪ್ರತಿಯೊಬ್ಬ ಪ್ರಾಣವಿರುವ ಪ್ರಾಣಿಗೂ, ಜೀವವಿರುವ ಜೀವಿಗೂ ಇರುವಂತಹದ್ದು. ಎನ್ನುವ ಪ್ರಜ್ಞೆ ಮಾನವನಲ್ಲಿ ಮೂಡಬೇಕಾಗಿದೆ. ಯಾಕೆಂದರೆ ಪ್ರಾಕೃತಿಕ ವಿಕೋಪಗಳು ಮಾನವನ 'ಬದುಕಬೇಕು' ಎನ್ನುವ ಚಪಲತೆಗೂ  ಮೀರಿ 'ಆರಾಮವಾಗಿ ಬದುಕಬೇಕು' ಎನ್ನುವ ಅತಿಯಾಸೆಯ ಫಲ, ಎನ್ನುವುದು ಸುಳ್ಳಲ್ಲ. ಇದಕ್ಕೆ ಮೂಕ ಪ್ರಾಣಿಗಳನ್ನು ಬಲಿಕೊಡುವುದು ತಪ್ಪು.. ಆದರೆ ಬುದ್ಧಿ ಜೀವಿಯಾದ ಮಾನವನಿಗೆ, ಮಾನವರನ್ನು ರಕ್ಷಿಸುವುದೇ ಮೂಲವಾಗಿದೆ. ಯಾಕೆಂದರೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದ ಪರಿಸ್ಥಿತಿ. ಮುಂಜಾನೆ ಮೂರು ಮುಕ್ಕಾಲುಗಳಿಗೆಯನ್ನು ನೆನಪಿಸುವ ಊರ ಕೋಳಿಗಳು, ಎಲ್ಲೆಂದರಲ್ಲಿ ಹಂಚಿತಿನ್ನುವ ಸದ್ಗುಣವನ್ನು ತೋರಿಸುವ ಕಾಗೆಗಳು ಇಂದು ಕಣ್ಮರೆಯಾಗುತ್ತಿವೆ. ಮಾನವಾ " ಬದುಕು ಬದುಕಗೊಡು" .......
ಎಲ್ಲಾ ಆಧುನಿಕ ಸಮಸ್ಯೆಗಳನ್ನು ಒಂದಾಗಿ ಪರಿಗಣಿಸಿ ನೋಡಿದರೆ ಈಗ ಎದುರಿಸುತ್ತಿರುವಂತಹ ಪ್ರಾಕೃತಿಕ ವಿಕೋಪಗಳು ಪ್ರಾಕೃತಿಕ ಅನಾಹುತಗಳು ನಾವು ಮರೆತ ಸಾಮಾಜಿಕ, ಪಾರಂಪರಿಕ ರೀತಿನೀತಿಗಳನ್ನು ನೆನಪಿಸಲೂ ಅದೇ ರೀತಿ ರೂಢಿ ನಿಯಮದಲ್ಲಿ ಇದ್ದ ಆಚರಣೆಗಳನ್ನು ತಿದ್ದುಪಡಿ ಮಾಡಿ ಆಧುನಿಕ ನಗರೀಕರಣದ ನಶೆಯಲ್ಲಿ ಪ್ರಕೃತಿಯನ್ನು ಒಂದು ಆಟದ ವಸ್ತುವಿನಂತೆ ಉಪಯೋಗಿಸಿಕೊಂಡದ್ದಕ್ಕೆ ದೇವರು ಎಚ್ಚರಿಸುವುದು ಎಂದು ತಿಳಿದುಕೊಳ್ಳಬೇಕಾಗಿದೆ. ಅಂತಹ ಅಪಾಯದ ಪ್ರಜ್ಞೆ ನಮ್ಮಲ್ಲಿ ಮೂಡಿದಾಗ ಮಾತ್ರ ನವೀಕರಣ, ನಗರೀಕರಣ, ವೈಜ್ಞಾನಿಕ ಆಧುನೀಕರಣ ಮುಂತಾದವುಗಳ ಮಧ್ಯೆ ಪ್ರಾಕೃತಿಕ ನಿಷ್ಠೆ ಎನ್ನುವಂತಹ ಮಾನವೀಯ ಮೌಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯ. "ಮಾನವ ಬುದ್ಧಿಜೀವಿ" ಇದು ಸಾಮಾನ್ಯವಾಗಿ ಎಲ್ಲ ವಿಮರ್ಶಾ ಲೇಖನದಲ್ಲಿ ಪ್ರಾಮುಖ್ಯತೆಯನ್ನು ಪಡೆಯುವ ವಿಚಾರ. ಯಾಕೆಂದರೆ ಇದರಿಂದಲೇ ವಿಮರ್ಶೆ ಆರಂಭವಾಗುತ್ತದೆ, ಇದರಿಂದಲೇ ವಿಮರ್ಶೆ ಅಂತ್ಯವಾಗುತ್ತದೆ. 

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

You may like these posts

  • ಭಾರತ ಎಂಬುದು ಪೌರಾಣಿಕ ವೃಷಭದೇವನ ಮಗ ಭರತ ಚಕ್ರವರ್ತಿ ಬಂದ ಹೆಸರು ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದ ಹೆಸರು ಮಾತ್ರವಲ್ಲ. ಅದು ಒಂದು ಪರಿಕಲ್ಪನೆ. ಮಾನವ :- ನವೀನತೆಯನ್ನು ಬಯಸುವ, …
  •            ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರು…
  • ಹಸಿರೇ ಉಸಿರಿನ ತವರು ಹಸಿರಿಗೆ ಉಸಿರು ನೀರು.  ಸಾಲುಗಳ ಎರಡರ ಮುಖೇನ ಮಾನವನ ಉಸಿರಿಗೂ ಭೂಮಿಯ ಹಸಿರಿಗೂ ನೀರಿಗೂ ಹೊಂದಿರುವ ಅವಿನಾಭಾವ ಸಂಬಂಧವನ್ನು ಬಿಂಬಿಸಿದ ಅಜ್ಞಾತಕವಿಗೆ ನಮಿಸಬೇಕು. ನೀರು ಬಾಯಿ ಚಪ್ಪರಿಕ…
  •                   ಅರಣ್ಯವು ಪ್ರಕೃತಿಯ ವಸ್ತುವೈಶಿಷ್ಟ್ಯತೆಗಳಲ್ಲಿ ಒಂದು. ವಿಕಾಸದ ಹಾದಿ ಹಿಡಿದ ವೈಜ್ಞಾನೀಕರಣ ಹಾಗೂ ನಗರೀಕರಣಗಳು ಈ ವಸ್ತುವೈಶಿಷ್ಟ್ಯತೆಗಳನ್ನು…
  • "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ", ಎಂಬ ಬಸವಣ್ಣನವರ ವಚನವು ಭಾವಾರ್ಥದ ಮುಖಾಂತರ ಅಜಗಜಾಂತರ ದೊಡ್ಡ ಅರ್ಥವನ್ನು ವಿವರಿಸುತ್ತದಾದರೂ, ಮೊಬೈಲ್ ಫೋನ್ ಇಂದು ಜನಮನದಾಳದಲ್ಲಿ ಹಾಸುಹೊಕ್ಕಾಗಿರುವ 'ಜಂಗಮ ಯಂತ್ರ' ಈ ನುಡಿ…
  • "ತುಳುನಾಡು" ಕಲೆಗಳಿಗೆ, ಆಚಾರಗಳಿಗೆ, ಭೂತ-ನೇಮ ಮುಂತಾದ ಪಾರಂಪರಿಕ ಅನುಷ್ಠಾನಗಳಿಗೆ ಹೆಸರುವಾಸಿ. ಇತರ ಪ್ರದೇಶಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಕಂಡುಬರುವ ದೈವಿಕ ಭಾವನೆ ಹಾಗೂ ಆಚರಣೆಗಳೇ ಹೆಚ್ಚು. ಉತ್ತರಕ್ಕೆ ಮುಖಮ…

Post a Comment