ಅರಣ್ಯವು ಪ್ರಕೃತಿಯ ವಸ್ತುವೈಶಿಷ್ಟ್ಯತೆಗಳಲ್ಲಿ ಒಂದು. ವಿಕಾಸದ ಹಾದಿ ಹಿಡಿದ ವೈಜ್ಞಾನೀಕರಣ ಹಾಗೂ ನಗರೀಕರಣಗಳು ಈ ವಸ್ತುವೈಶಿಷ್ಟ್ಯತೆಗಳನ್ನು ಮನಗಾಣದೆ, ಮನಕ್ಕೆ ತೋಚಿದಂತೆ ದ್ವಂಸಗೊಳಿಸಿ ಮುಂದಡಿಯಿರಿಸುತ್ತಿದೆ. ಈ ಜನಾಂಗದ ಮನಕ್ಕೆ ಮನವರಿಕೆ ಮಾಡಿ ಕೊಡಲು ಪ್ರಾಕೃತಿಯ ವಿಕೋಪಗಳು ಪ್ರಕೃತಿಯ ರೌದ್ರಾವಸ್ಥೆಯಲ್ಲಿ ಬರುವುದೇ ವಿಧಿ. ಅಲ್ಲದೆ ಈ ಜನ ಮನಕೆ ಅದರ ಅವಶ್ಯಕತೆ ಅದರ ಮಹತ್ವ ಮನಗಾಣದು.
ಹಿಂದಿನ ಅರಣ್ಯ, ನಿರ್ಜನ ಪ್ರದೇಶವಾಗಿದ್ದ ಒಂದು ಪ್ರಾಕೃತಿಕ ವ್ಯವಸ್ಥೆಯಾಗಿತ್ತು. ಅದು ಕಿಕ್ಕಿರಿದ ಅಡವಿಯಾಗಿತ್ತು. ಅದು ಅರಣ್ಯಕ್ಕೆ ಸಂಬಂಧಿಸಿದವುಗಳಾದ ಪ್ರಾಣಿ-ಪಕ್ಷಿ, ಮರ-ಗಿಡ, ಬೇರು-ಬಳ್ಳಿ, ತೊರೆ-ತೋಡು ಹಾಗೂ ಝರಿಗಳು ಹೇರಳವಾಗಿದ್ದ ಒಂದು ಶೃಂಖಲೆಯಾಗಿತ್ತು.
ವರ್ತಮಾನ ಸ್ಥಿತಿಗತಿಯಲ್ಲಿ ಅಡವಿಯ ದುರ್ಗತಿಯನ್ನು ಮನಗಂಡರೆ, ಬುಡಮೇಲಾಗಿ ಧರೆಗುರುಳಿದ ಮರಗಳು, ಅದೇ ರೀತಿ ಗುಡ್ಡ ಜರಿತಕ್ಕೆ ಕಾರಣವಾಗುವಂತೆ ತಟ್ಟುಗೊಂಡ ಗಡ್ಡೆಗಳು ಹೇರಳವಾಗಿ ಕಂಡುಬರುತ್ತವೆ. ಅರಣ್ಯದ ಸಂಪನ್ಮೂಲ ವಸ್ತುಗಳಾದ ಗಂಧ, ಜೇನು ಮೊದಲಾದವುಗಳ ಕಬಳಿಕೆಯು ಅಡವಿಯ ಸಹಜ ಸೌಂದರ್ಯವನ್ನು ಮರೆಸಿ ಕೃತಕ ಸೌಂದರ್ಯವನ್ನೊದಗಿಸಿ ಅಡವಿಯ ಮೈಮಾಯಕವನ್ನು ಮಾಯಗೊಳಿಸಿಬಿಡುತ್ತವೆ. ಪ್ರಸ್ತುತ ಕಾಡಿನಲ್ಲಿ ಮರಗಳ ಗುತ್ತಿಗಳು ಕಾಲಿಗೆ ಎಡವುವುದಲ್ಲದೆ, ನದಿ ತೊರೆಗಳು ಬತ್ತಿ ಹೋದ ಸ್ಥಿತಿಯಲ್ಲಿ ಎದುರಾಗುವುದು ಸಂಶಯವಿಲ್ಲದ ಸಂಗತಿ. ಕಾಡಿನ ಒಳ ನುಗ್ಗಿ ಅಲ್ಲಿನ ಪ್ರಾಣಿಗಳೊಂದಿಗೆ ಬೆರೆತು ಅವುಗಳಲ್ಲಿ ಒಂದರಂತೆ ಬದುಕುತ್ತಿದ್ದ ಹಿಂದಿನವರು, ಯುವಜನಾಂಗಕ್ಕೆ ಸಂಬಂಧಿಸಿ ವ್ಯತ್ಯಸ್ತ ಮನೋಭಾವ ಹೊಂದಿದವರು. ಅವರ ಉದಾರತೆ, ಜೀವನ ಪದ್ಧತಿ ಇಂದಿನ ಜನಾಂಗದಲ್ಲಿ ಹುಡುಕಿದರೂ ಎಳ್ಳಷ್ಟೂ ಸಿಗದು. ನಾಶ ವಿನಾಶಕ್ಕೆ ದಾರಿ ಎಂಬುದು ತಿಳಿದಿರಬೇಕಾದ ಸಂಗತಿಯಾದರೂ, ಸರ್ವ ನಾಶಕ್ಕಾಗಿ ಬಯಸುತ್ತಿರುವ ಯುವಜನಾಂಗ ದುಷ್ಪವೃತ್ತಿಗಳನ್ನು ಮುಂದುವರಿಸುತ್ತಿವೆ. ಮನದಲ್ಲಿದ್ದ ಕಶ್ಮಲ ಹೊರತೆಗೆದು ಪ್ರಾಕೃತಿಕ ಹಿತೈಷಿ ಮಾನವನಾದರೆ, ಮಾನವನಿಗೆ ಹಿತ. ಮನೆ-ಮನದ ಶಾಂತಿಗೆ, ರಾಷ್ಟ್ರ-ರಾಷ್ಟ್ರೀಯತೆಯ ಹಿರಿಮೆಗೆ ಹಾಗೂ ದೇಶ ವಿದೇಶದ ಸೌಹಾರ್ದಕ್ಕೆ, ಅರಣ್ಯ ಸಂರಕ್ಷಣೆಯೇ ಏಕ ಮಾರ್ಗ.
ಇದರಿಂದುಂಟಾಗುವ ಪರಿಣಾಮಗಳ ಬಗ್ಗೆ ತಲೆ ಹಾಕಿದರೆ, ನದಿ ತೊರೆಗಳ ಬತ್ತುವಿಕೆಗೆ ಕಡಿವಾಣವೂ, ಬರದ ಛಾಯೆಗೆ ಮುಖವಾಡವೂ ಸೇರಿ ಸ್ವಚ್ಛ ವಾಯುವಿಗೆ ಉಪಕಾರವು ಆಗುತ್ತದೆ. ಜನಕೋಟಿಗೆ ಸಹಕಾರವೂ, ಸಮಾಧಾನ ಯುವ ಜನತೆಗೆ ನಿರ್ಭೀತಿಯೂ ದೊರಕುತ್ತದೆ. ಹಿರಿಯರಿಗೆ ಸಂತೋಷವೂ, ವೈಜ್ಞಾನಿ ಕರಣಕ್ಕೆ ತೃಪ್ತಿಯು ಎದುರಾಗುತ್ತದೆ.
ವಿನಹ ಗಿಡ ಮರಗಳ ಕಡಿಯುವಿಕೆ ನಿಲ್ಲದಿದ್ದರೆ, ದೊಡ್ಡದೊಂದು ವಿಪತ್ತು ಸದ್ಯದಲ್ಲೇ ಬರುವುದನ್ನು ಸಂಶಯಿಸದೇ ಇರಲಾಗದು. ಅದು ನಿಶ್ಚಿತ ವೆಂಬುದು ಅಶಾಂತಿಯ ವಿಹಂಗಮ ನೋಟ ನಡೆಸಿದಾಗ ನಮಗೇ ಮನವರಿಕೆ ಆಗುತ್ತದೆ. ತದನಂತರ ನಾಶ ನಷ್ಟದ ಹೊರೆ ಹೊತ್ತು ಯಾವುದೇ ವನ ಸಂರಕ್ಷಣೆಯ ಬಗ್ಗೆ ಚಿಂತಿಸಿ ಫಲವಿಲ್ಲ.